Advertisement

ಕಡಲೆಕಾಯಿ ಪರಿಷೆಯಲ್ಲಿ ಜನಜಾತ್ರೆ

11:50 AM Dec 05, 2018 | |

ಬೆಂಗಳೂರು: ಕಡಲೆಕಾಯಿ ಪರಿಷೆ ಮುಗಿದರೂ ಜನಸಾಗರ ಬಸವನಗುಡಿಯ ಕಡೆ ಹರಿದು ಬರುತ್ತಿತ್ತು. ಶನಿವಾರದಿಂದ ಆರಂಭವಾದ ಕಡಲೆಕಾಯಿ ಪರಿಷೆಯ ಸಂಭ್ರಮ ಇನ್ನೂ ಮುಗಿದಿಲ್ಲ. ಕೊನೆಯ ಕಾರ್ತಿಕ ಸೋಮವಾರ ಕಡಲೆಕಾಯಿ ಪರಿಷೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳು ಮುಗಿದರೂ ಸಹ ಬಸವನಗುಡಿಯ ಸುತ್ತಮುತ್ತ ಜನಜಾತ್ರೆಯ ಕಲರವ ಕಡಿಮೆಯಾಗಿರಲಿಲ್ಲ.

Advertisement

ಬೆಳ್ಳಂಬೆಳಗ್ಗೆಯಿಂದಲೇ ದೊಡ್ಡಗಣಪತಿ ದೇವಾಲಯದ ಮುಂದೆ ಜನ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನ 12 ಆದರೂ ಜನರ ಸರತಿಸಾಲು ಬೆಳೆಯುತ್ತಲೇ ಇತ್ತು ಹೊರತು ಕಡಿಮೆಯಾಗಲಿಲ್ಲ. ದೇಗುಲದ ಬಳಿ ವಿತರಣೆ ಮಾಡುತ್ತಿದ್ದ ಪ್ರಸಾದದ ಜನದ ಸರತಿಯಲ್ಲಿ ನೂಕುನುಗ್ಗಲು ಉಂಟಾಯಿತು.

ರಾಮಕೃಷ್ಣ ಆಶ್ರಮ ಬಸ್‌ ನಿಲ್ದಾಣದ ರಸ್ತೆಯಿಂದ ಎನ್‌.ಆರ್‌.ಕಾಲೋನಿಯವರೆಗೂ ಸೋಮವಾರ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೆ ಈ ರಸ್ತೆಯಲ್ಲಿ ಮಂಗಳವಾರ ವಾಹನ ಸಂಚಾರ ನಿರ್ಬಂಧಿಸಿದ ಕಾರಣ ಬಸವನಗುಡಿಯ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿತ್ತು. 2 ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಇರಬಾರದು. ಆಗ ಸುಲಭವಾಗಿ ಪರಿಷೆಯಲ್ಲಿ ಸುತ್ತಾಡಬಹುದು ಎಂದು ಸಾರ್ವಜನಿಕರು ಹೇಳಿದರು.

ಕಳೆದ ವರ್ಷ 100-200 ಕಡಲೆಕಾಯಿ ಮೂಟೆಗಳನ್ನು ತಂದು ಮಾರಾಟ ಮಾಡಲಾಗಿತ್ತು. ಈ ಬಾರಿ 20-30 ಮೂಟೆಗಳನ್ನು ತಂದರೂ ಕಡಲೆಕಾಯಿ ಖರ್ಚಾಗಿಲ್ಲ. ಎಲ್ಲ ವರ್ಷಗಳಿಗಿಂತ ಈ ವರ್ಷ ಪರಿಷೆಗೆ ಹೆಚ್ಚಿನ ಜನರು ಬರುತ್ತಿದ್ದಾರೆ. ಆದರೆ ಕಡಲೆಕಾಯಿ ಖರೀದಿಸಲು ಗ್ರಾಹಕರು ನಿರಾಸಕ್ತರಾಗಿದ್ದಾರೆ.

ಇಷ್ಟು ವರ್ಷ ಪರಿಷೆಯಲ್ಲಿ ಕಡಲೆಕಾಯಿ ಖರೀದಿಗೆ ಜನ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಈ ಬಾರಿ ಕಡಲೆಕಾಯಿ ಖರೀದಿಗಿಂತ ಅಲಂಕಾರಿಕ ಹಾಗೂ ಮನೆಗೆ ಅಗತ್ಯವಾದ ಸಾಮಾಗ್ರಿಗಳನ್ನು ಕೊಳ್ಳುವಲ್ಲಿಯೇ ಹೆಚ್ಚು ನಿರತರಾಗಿದ್ದಾರೆ.  ಈ ಬಾರಿ ಕಡಲೆಕಾಯಿ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಹೊಸಕೋಟೆಯ ಕಡಲೆಕಾಯಿ ವ್ಯಾಪಾರಿ ಲಕ್ಷ್ಮೀಪತಿ.

Advertisement

ಕಳೆದ ವರ್ಷ ಒಂದು ಮೂಟೆ ಕಡಲೆಕಾಯಿ ಬೆಲೆ ಎರಡೂವರೆ ಸಾವಿರದಿಂದ ಮೂರುವರೆ ಸಾವಿರ ರೂ.ಗಳಿತ್ತು. ಈ ಬಾರಿ ಮಳೆ ಇಲ್ಲದೆ ಫ‌ಸಲು ಕಡಿಮೆಯಾಗಿದೆ. ಒಂದು ಮೂಟೆ ಕಡಲೆಕಾಯಿಗೆ ನಾಲ್ಕರಿಂದ ನಾಲ್ಕೂವರೆ ಸಾವಿರ ರೂ.ಗಳಿದೆ. ಹೀಗಾಗಿ ಕಡಲೆಕಾಯಿ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ.

ಕಳೆದ ವರ್ಷದ ಪರಿಷೆಯಲ್ಲಿ ಒಂದು ಲೀಟರ್‌ ಕಡಲೆಕಾಯಿಯನ್ನು 20 ರಿಂದ 30 ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ಈ ಬಾರಿ ಕಡಲೆಕಾಯಿ ದರ 40 ರಿಂದ 50 ರೂ.ಗಳಾಗಿದೆ. ಹೀಗಾಗಿ ಜನ ಕಡಲೆಕಾಯಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು ವ್ಯಾಪಾರಿ ವೆಂಕಟಚಲಂ.

ಕಸದ ರಾಶಿ: ರಾಮಕೃಷ್ಣ ಆಶ್ರಮದ ರಸ್ತೆಯಲ್ಲ ಇಕ್ಕೆಲ್ಲಗಳಲ್ಲಿ ಒಂದೆಡೆ ವ್ಯಾಪಾರಿಗಳ ಕಾರುಬಾರು ಜೋರಿದ್ದರೆ, ಇನ್ನೊಂದೆಡೆ ಕಸದ ರಾಶಿ ತುಂಬಿತ್ತು. ಕಡಲೆಕಾಯಿ ಸಿಪ್ಪೆ ಮತ್ತು ಪ್ಲಾಸ್ಟಿಕ್‌ ಕಸದ ರಾಶಿ ರಸ್ತೆಯ ಅಂಗಡಿಗಳ ಹಿಂಬದಿಯ ಪಾದಚಾರಿಮಾರ್ಗದಲ್ಲಿ ತುಂಬಿಕೊಂಡಿತ್ತು. ಬಿಬಿಎಂಪಿ, ಧಾರ್ಮಿಕ ದತ್ತಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾಸ್ಟಿಕ್‌ ಬಳಸಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಕೆಲವು ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಸುತ್ತಿರುವುದು ಕಂಡು ಬಂತು.

ಸೋಮವಾರ ಪರೀಕ್ಷೆ ಇದ್ದಿದ್ದರಿಂದ ಪರಿಷೆ ಸುತ್ತಾಡಲು ಆಗಲಿಲ್ಲ. ಇವತ್ತು ಬಿಡುವಿರುವ ಕಾರಣ ಪರಿಷೆ ನೋಡಲು ಗೆಳತಿಯರೊಡನೆ ಬಂದಿರುವೆ. ಪ್ರತಿವರ್ಷ ಪರಿಷೆಯಲ್ಲಿ ಗೊಂಬೆಗಳನ್ನು ಖರೀದಿಸುವುದು ನನ್ನ ಹವ್ಯಾಸ.
-ವಿದ್ಯಾ, ನ್ಯಾಷನಲ್‌ ಕಾಲೇಜು ವಿದ್ಯಾರ್ಥಿನಿ.

ಇದೇ ಮೊದಲ ಬಾರಿಗೆ ಕಡಲೆಕಾಯಿ ಪರಿಷೆಗೆ ಬಂದಿರುವೆ. ನಮ್ಮೂರಿನಲ್ಲಿ ನಡೆಯುವ ಜಾತ್ರೆ ನೆನಪಾಗುತ್ತಿದೆ. ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಊರಿಗೆ ಹೋಗದೆ ಜಾತ್ರೆಯನ್ನು ನೋಡದೆ ಹಲವು ವರ್ಷಗಳಾಗಿತ್ತು. ಇವತ್ತು ಕಡಲೆಕಾಯಿ ಪರಿಷೆ ನೋಡಿ ಸಂತಸವಾಯಿತು.
-ಅನುಪಮಾ, ಶಿಕ್ಷಕಿ.

ರಾಮಕೃಷ್ಣ ಆಶ್ರಮದಿಂದ ಎನ್‌.ಆರ್‌.ಕಾಲೋನಿಯವರೆಗೆ ಪರಿಷೆಯ ಎರಡನೇ ದಿನವೂ ವಾಹನ ಸಂಚಾರ ನಿರ್ಬಂಧಗೊಳಿಸಬೇಕಿತ್ತು. ಸಣ್ಣ ಮಕ್ಕಳನ್ನು ಕೈ ಹಿಡಿದು ಪರಿಷೆ ಸುತ್ತಲು ಕಷ್ಟವಾಗುತ್ತಿದೆ. ಪರಿಷೆಯ 2 ದಿನಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಬೇಕು.
-ಅಕ್ಷತಾ, ಗೃಹಿಣಿ.

Advertisement

Udayavani is now on Telegram. Click here to join our channel and stay updated with the latest news.

Next