Advertisement

ಜನನಾಯಕರ ಫ್ಯಾಕ್ಟರಿ, ಬಿ.ಪ್ಯಾಕ್‌!

12:39 PM Sep 23, 2017 | Team Udayavani |

ಉದ್ಯಾನ ನಗರಿ, ಸಿಲಿಕಾನ್‌ ಸಿಟಿ, ಸಾಫ್ಟ್ವೇರ್‌ ನಗರಿ… ನಾನು ಬಿರುದು ಬಾವಲಿಗಳು ಬೆಂಗಳೂರಿನ ಬೆನ್ನಿಗೆ ಜೋತು ಬಿದ್ದಿವೆ! “ಯಾಕಪ್ಪಾ ಇಲ್ಲಿಗೆ ಬಂದಿದ್ದೀರಿ?’ ಅಂತ ಹೊರರಾಜ್ಯದವರನ್ನು ಕೇಳಿದರೆ, “ಇದು ಕೂಲ್‌ ಸಿಟಿ. ನಿವೃತ್ತರಿಗೂ ಲಾಯಕ್ಕು ತಾಣ’ ಅಂತೆಲ್ಲ ಅವರೂ ಹೊಗಳಿಕೆಯ ಬಾಣ ಬಿಡುತ್ತಾರೆ. ಇಷ್ಟೆಲ್ಲ ಪ್ರಶಂಸೆಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಬೆಂಗಳೂರಿನಲ್ಲಿ ಸಮಸ್ಯೆಗಳೇ ಇಲ್ಲವೇ? ಇದೆ! ಒಂದಲ್ಲ, ಎರಡಲ್ಲ, ನೂರಾರು! ಸುಮಾರು ಒಂದೂಕಾಲು ಕೋಟಿ ಜನರಿರುವ ಈ ಮಹಾನಗರದಲ್ಲಿ ಕಸ, ನೀರು, ರಸ್ತೆ, ಟ್ರಾಫಿಕ್‌ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ವರ್ಷದಿಂದ ವರ್ಷಕ್ಕೆ ನಗರ ಉಬ್ಬುತ್ತಲೇ ಇದೆ.

Advertisement

ಸಮಸ್ಯೆಗಳ ಗೂಡಾಗುತ್ತಿರುವ ಈ ಮಹಾನಗರಕ್ಕೆ ಪ್ರಜ್ಞಾವಂತ ಜನಪ್ರತಿನಿಧಿಗಳ ಅಗತ್ಯ ತುಂಬಾ ಇದೆ. ಅವರನ್ನೇ ಸೃಷ್ಟಿಸಲು ಹೊರಟಿದೆ “ಬಿ.ಪ್ಯಾಕ್‌’ ಎನ್ನುವ ಸಂಸ್ಥೆ. ಇದು ಬೆಂಗಳೂರು ರಾಜಕೀಯ ಕಾರ್ಯಸಮಿತಿ ಆಗಿದ್ದು, ಮೂರು ವರ್ಷಗಳಿಂದ ಚಾಲ್ತಿಯಲ್ಲಿದೆ. ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ, ಮೋಹನ್‌ದಾಸ್‌ ಪೈ, ನಿವೃತ್ತ ಐಎಎಸ್‌ ಅಧಿಕಾರಿ ಕೆ. ಜಯರಾಜ್‌, ರೇವತಿ ಅಶೋಕ್‌, ಆರ್‌.ಕೆ. ಮಿಶ್ರ ಮತ್ತಿತರರು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತಂಡವನ್ನು ಕಟ್ಟಿಕೊಂಡು ಬಿ.ಪ್ಯಾಕ್‌ ಆರಂಭಿಸಿದ್ದಾರೆ.

ಬಿ.ಪ್ಯಾಕ್‌ನ ಉದ್ದೇಶ?: ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಾಗರಿಕರು ಹಾಗೂ ಸರ್ಕಾರದ ನಡುವೆ ಅಂತರವೂ ಅಧಿಕವಾಗುತ್ತಿದೆ. ಈ ಸವಾಲುಗಳನ್ನು ಎದುರಿಸಲು ಬಿ.ಪ್ಯಾಕ್‌ ಸಂಸ್ಥೆಯು ಬಡಾವಣೆಗಳ ಮಟ್ಟದಲ್ಲಿ ನಾಗರಿಕರು ಅಧಿಕೃತವಾಗಿ ಆಡಳಿತ ಸಂಬಂಧಿ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ವೇದಿಕೆ ಕಲ್ಪಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ನಗರದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂಥ,  ಪರಿಣತಿ ಹೊಂದಿರುವ ನಾಗರಿಕರನ್ನು ಪಾಲಿಕೆಗೆ ನೇಮಿಸುತ್ತದೆ. ಅವರನ್ನು ಪಾಲಿಕೆಯ ಸ್ಥಾಯಿ ಸಮಿತಿ ಹಾಗೂ ವಾರ್ಡ್‌ ಸಮಿತಿಯಲ್ಲೂ ಸೇರಿಸುತ್ತದೆ. ನಂತರ ವಾರ್ಡ್‌ ಮಟ್ಟದಲ್ಲಿ ಬಡಾವಣೆ ಸಮಿತಿಗಳನ್ನು ರಚಿಸಿ, ನಾಗರಿಕರ ಸಹಭಾಗಿತ್ವ ಹೆಚ್ಚಿಸುತ್ತದೆ.

ಇದರ ಕೆಲಸ ಏನು?: ಬಿ.ಪ್ಯಾಕ್‌ ಸಂಸ್ಥೆಯು 9 ತಿಂಗಳ ಅವಧಿಯ “ಉತ್ತಮ ಆಡಳಿತಕ್ಕಾಗಿ ನಾಗರಿಕ ನಾಯಕತ್ವ ಕಾರ್ಯಕ್ರಮ’ (ಬಿ.ಕ್ಲಿಪ್‌) ಆಯೋಜಿಸುತ್ತದೆ. ಪ್ರಾಥಮಿಕ ಆಡಳಿತ ಜ್ಞಾನ ಹಾಗೂ ಸೇವಾ ಮನೋಭಾವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ. 60- 70 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು 9 ತಿಂಗಳ ಅವಧಿಯ ಕಾರ್ಯಾಗಾರ ನಡೆಸಲಾಗುತ್ತದೆ. ಆಡಳಿತ, ಕಾನೂನು ಪರಿಣತರು, ನಗರ ಯೋಜನಾ ತಜ್ಞರು, ಅರ್ಥಶಾಸ್ತ್ರಜ್ಞರು, ಇತಿಹಾಸಕಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತಜ್ಞರಿಂದ ತರಬೇತಿ ನೀಡಲಾಗುತ್ತದೆ. 

ಕಾರ್ಯಾಗಾರ ಇರುತ್ತೆ!: ಈ ಕಾರ್ಯಾಗಾರವನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಹಂತದ 3 ತಿಂಗಳ ಅವಧಿಯ ಕಾರ್ಯಾಗಾರದಲ್ಲಿ ನಗರಾಡಳಿತ, ಚುನಾವಣೆ ಹಾಗೂ ರಾಜಕೀಯ ಸ್ಥಿತಿಗತಿಗಳ ಅರಿವು, ಬೆಂಗಳೂರಿಗೊಂದು ಕಾರ್ಯಸೂಚಿ, ಮುನಿಸಿಪಲ್‌ ರಚನೆ, ಬಿಬಿಎಂಪಿ ಅಂತರ ಹಾಗೂ ಆಂತರಿಕ ಇಲಾಖಾ ವ್ಯವಹಾರಗಳ ರೀತಿ ನೀತಿ, ವಾರ್ಡ್‌ಮಟ್ಟದ ಭೌಗೋಳಿಕ ನಕ್ಷೆ ಪಡೆದು, ಸಾರ್ವಜನಿಕ ಹಾಗೂ ವಾರ್ಡ್‌ ಮಟ್ಟದ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ನಗರದ ರಾಜಕೀಯ ವಿದ್ಯಮಾನ, ರಾಜಕೀಯ ಪ್ರಚಾರಗಳ ನಿರ್ವಹಣೆ… ಹೀಗೆ ಒಬ್ಬ ರಾಜಕೀಯ ಹಾಗೂ ಸಾಮಾಜಿಕ ನಾಯಕನಿಗೆ ಬೇಕಾದ ಅರಿವನ್ನು ಮೂರು ತಿಂಗಳಲ್ಲಿ ನೀಡಲಾಗುತ್ತದೆ.

Advertisement

ಎರಡನೆಯದಾಗಿ ನಡೆಯುವ 6 ತಿಂಗಳ ಅವಧಿಯ ಕಾರ್ಯಾಗಾರದಲ್ಲಿ ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ಒಂದು ಧ್ಯೇಯವನ್ನು ಹಾಕಿಕೊಂಡು, ವಾರ್ಡ್‌ನಲ್ಲಿ ಎದರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪಟ್ಟಿಮಾಡಿ ನಂತರ ಆ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಯೋಜನೆ ರೂಪಿಸಿಕೊಂಡು 3 ತಿಂಗಳ ಅವಧಿಯ ತರಗತಿಗಳಲ್ಲಿ ಕಲಿತಿದ್ದನ್ನು ಕ್ಷೇತ್ರ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು, ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವ ವಿಧಾನದ ಬಗ್ಗೆ ಹೆಚ್ಚು ಅರಿತುಕೊಳ್ಳುತ್ತಾರೆ.

3 ವರ್ಷಗಳಲ್ಲಿ ಬಿ.ಪ್ಯಾಕ್‌ ಕಾರ್ಯವೈಖರಿ: ಕಳೆದ ಮೂರು ವರ್ಷಗಳಲ್ಲಿ 4 ಆವೃತ್ತಿಗಳಲ್ಲಿ ಕಾರ್ಯಾಗಾರ ನಡೆಸಿ 150ಕ್ಕೂ ಅಧಿಕ ಮಂದಿ ನಾಗರಿಕ ನಾಯಕರನ್ನು, ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ರೀತಿಯಲ್ಲಿ ಬಿ.ಪ್ಯಾಕ್‌ ತರಬೇತಿಗೊಳಿಸಲಾಗಿದೆ. ಈಗ 5ನೇ ಆವೃತ್ತಿಯು ಚಾಲ್ತಿಯಲ್ಲಿದ್ದು, ವಿದ್ಯಾರ್ಥಿಗಳು ತರಗತಿಗಳ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ತಮ್ಮದೇ ಆದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ: ಮೊ. 9739328099

* ಎಚ್‌.ಎಸ್‌. ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next