ದೊಡ್ಡಬಳ್ಳಾಪುರ: ನಗರದ ಮುತ್ತೂರು ಕೆರೆ ಅಭಿವೃದ್ಧಿಗೆ ರಿಟ್ಟಲ್ ಇಂಡಿಯಾ ಕಂಪನಿ ಉದ್ಯೋಗಿಗಳು ದೇಣಿಗೆ ನೀಡಲು ಮುಂದೆ ಬಂದಿರುವುದು ಸಂತಸ ತಂದಿದೆ. ನಮ್ಮೂರಿನ ಕೆರೆಗಳು ಉಳಿಯಲು, ಅಭಿವೃದ್ಧಿ ಹೊಂದಲು ಸಾರ್ವಜನಿಕರ ಸಹಕಾರ ತೀರಾ ಅಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.
ನಗರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ರಿಟ್ಟಲ್ ಇಂಡಿಯಾ ಕಂಪನಿಯಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರ್ಥಿಕ ನೆರವು: ಮುತ್ತೂರು ಕೆರೆಯನ್ನು ಸಾರ್ವಜನಿಕರ ಸಹಕಾರದಿಂದಲೇ ಹೂಳೆತ್ತಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಶೇ.60ರಷ್ಟು ಕಾಮ ಗಾರಿ ಮುಕ್ತಾಯವಾಗಿದೆ. ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಕಿರು ರಸ್ತೆ ನಿರ್ಮಿಸುವುದು, ಕೆರೆಯಲ್ಲಿ ನಡುಗಡ್ಡೆ ಅಭಿವೃದ್ಧಿ ಸೇರಿದಂತೆ ಒಂದಿಷ್ಟು ಮುಖ್ಯ ಕೆಲಸಗಳು ಬಾಕಿ ಉಳಿದಿವೆ. ಈ ಕೆಲಸಗಳಿಗೆ ಆರ್ಥಿಕ ನೆರವು ನೀಡಲು ರಿಟ್ಟಲ್ ಇಂಡಿಯಾ ಕಂಪನಿಯ 1,200 ಜನ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ತಲಾ 1,000 ರೂ. ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಸ್ಥಳೀಯರ ಸಹಕಾರ: ಈಗಾಗಲೇ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಕಾರಹಳ್ಳಿ, ಕನ್ನಮಂಗಲದಲ್ಲಿ ಚಿಕ್ಕ ಸಿಹಿ ನೀರಿನ ಕೆರೆ, ನೆಲಮಂಗಲ ತಾಲೂಕಿನ ಬೇಗೂರು, ಕೆಂಪತಿಮ್ಮನಹಳ್ಳಿ ಕೆರೆಗಳ ಅಭಿವೃದ್ಧಿಗೂ ಸ್ಥಳೀಯರೇ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಕೆರೆ, ಕುಂಟೆಗಳನ್ನು ಉಳಿಸಿಕೊಳ್ಳಿ: ನಮ್ಮ ಹಿರಿಯರು ಕೆರೆಗಳನ್ನು ಕಟ್ಟಿಸಿದರು. ಆದರೆ, ಇಂದು ನಮ್ಮ ಕಣ್ಣ ಮುಂದೆಯೇ ಕೆರೆಗಳು ಹೂಳು ತುಂಬಿಕೊಂಡು, ಇತರೇ ಅಭಿವೃದ್ಧಿ ಹೆಸರಿನಲ್ಲಿ ಕಣ್ಮರೆಯಾಗುತ್ತಿವೆ. ಇರುವ ಒಂದಿಷ್ಟು ಕೆರೆಗಳನ್ನು ನಾವು ಉಳಿಸಿಕೊಂಡು ಅವುಗಳಲ್ಲಿ ನೀರು
ನಿಲ್ಲುವಂತೆ ಮಾಡಿಕೊಳ್ಳದೇ ಹೋದರೆ, ಅಂತರ್ಜಲ ಕುಸಿದು ಕುಡಿಯುವ ನೀರು ದೊರೆಯು ವುದಿಲ್ಲ. ಸರ್ಕಾರವೇ ಎಲ್ಲವನ್ನೂ ಮಾಡಿ ಸಲಿ ಎಂದು ಕಾದು ಕುಳಿತುಕೊಳ್ಳದೇ ಕೆರೆ, ಕುಂಟೆ ಉಳಿಸಿ ಕೊಳ್ಳಲು ಮುಂದಾಗಬೇಕೆಂದರು.
ಕೊಡಗು ಸಂತ್ರಸ್ತರಿಗೆ ನೆರವು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಪನಿ ಉದ್ಯೋಗಿಗಳು ಕೊಡಗು ನೆರೆ ಸಂತ್ರಸ್ತರ ನಿಧಿಗೆ 1,72,500 ರೂ. ಚಕ್ ಅನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದರು. ವಿಶೇಷ ಆಹ್ವಾನಿತರಾಗಿ ನಟಿ, ಕಾರ್ಯ ಕ್ರಮಗಳ ನಿರೂಪಕಿ ಅನುಶ್ರೀ, ರಿಟ್ಟಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಜಯ್ ಭಾರ್ಗವ್, ಹಣಕಾಸು ವಿಭಾಗದ ಉಪಾಧ್ಯಕ್ಷ ದೇಬ ಭ್ರತ ಸಿನ್ನ, ಉತ್ಪಾದನಾ ವಿಭಾಗದ ಉಪಾಧ್ಯಕ್ಷ ಚಂದ್ರ ಶೇಖರ ಕಡಬೂರು, ಮಾರಾಟ ವಿಭಾಗದ ಉಪಾಧ್ಯಕ್ಷ ಮ್ಯಾಥ್ಯೂ ಜೇಕಬ…, ರಿಟ್ಟಲ್ ಇಂಡಿಯಾ ಕಂಪನಿ ನೌಕರರ
ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜ…, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.