ಬೆಂಗಳೂರು:ಬಿಜೆಪಿಗೆ ಮುಂದೆ ಮತ್ತೊಮ್ಮೆ ಆಡಳಿತ ನಡೆಸುವ ಅಧಿಕಾರ ಸಿಕ್ಕರೆ ಮಂಡ್ಯದಲ್ಲಿ ಉರಿಗೌಡ-ನಂಜೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆಗೆ ಅವರು ಮಾತನಾಡಿ, ಕಳೆದೊಂದು ತಿಂಗಳಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಿಂದೂ ಧರ್ಮದ ಉಳಿವಿಗೆ ಶ್ರಮಿಸಿದ ಉರಿಗೌಡ, ನಂಜೇಗೌಡರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಇವರಿಬ್ಬರು ಇರಲೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರು ಏನೇ ಹೇಳಲಿ, ಈ ಇಬ್ಬರು ಐತಿಹಾಸಿಕ ವ್ಯಕ್ತಿಗಳು ನಾಡಿನ ಕೆಲಭಾಗದ ಜನರಿಗೆ ಸ್ವಾಭಿಮಾನದ ಸಂಕೇತ ಎಂದು ಹೇಳಿದರು.
ಈ ಹಿಂದೆ ಸುವರ್ಣಮಂಡ್ಯ ಎಂಬ ಪುಸ್ತಕವನ್ನು ಹೊರತರಲಾಗಿತ್ತು. ಆ ಪುಸ್ತಕದಲ್ಲೂ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖವಿದೆ. ಈ ಪುಸ್ತಕವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಬಿಡುಗಡೆ ಮಾಡಿದ್ದರು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು, ಚಲುವರಾಯಸ್ವಾಮಿ ಸಚಿವರಾಗಿದ್ದರು. ದೇ.ಜ.ಗೌಡರು ಆ ಪುಸ್ತಕ ಬರೆದಿದ್ದಾರೆ. ಹಾಗಾದರೆ ಆ ಪುಸ್ತಕ ಬಿಡುಗಡೆಯ ದಿನ ಕುಮಾರಸ್ವಾಮಿ ಏಕೆ ಸುಮ್ಮನಾದರು? ಈಗ ಯಾಕೆ ಮಾತನಾಡುತ್ತಿದ್ದಾರೆ ? ಎಂದು ಪ್ರಶ್ನಿಸಿದರು.