ಚಿತ್ರದುರ್ಗ: ಉರಿಗೌಡ, ದೊಡ್ಡ ನಂಜೇಗೌಡರ ಇತಿಹಾಸ ಕುರಿತು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅನುಮಾನವಿದ್ದರೆ ನಮ್ಮ ನಾಯಕರ ಜೊತೆ ಚರ್ಚಿಸಿ ಪರಿಶೀಲನೆ ಮಾಡುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಚಳ್ಳಕೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಉರಿಗೌಡ, ನಂಜೇಗೌಡರ ಕುರಿತು ಗೊಂದಲವಿದೆ. ಉರಿಗೌಡ, ನಂಜೇಗೌಡರು ಕಾಲ್ಪನಿಕವಾ ಅಥವಾ ಪಕ್ಕಾನಾ ಎನ್ನುವುದನ್ನು ನಮ್ಮ ನಾಯಕರ ಜೊತೆ ಚರ್ಚಿಸಿ ಪರಿಶೀಸುತ್ತೇವೆ. ಇತಿಹಾಸದಂತೆ ನಮ್ಮ ನಿಲುವಿದೆ. ಇತಿಹಾಸವನ್ನು ಯಾರೂ ತಿರುಚಲು ಸಾಧ್ಯ ಇಲ್ಲ ಎಂದರು.
ಚುನಾವಣೆ ಸಂದರ್ಭದಲ್ಲಿ ಜಾತಿ ವಿಚಾರ ತರುವುದು ಒಳ್ಳೆಯದಲ್ಲ. ಪದೇ ಪದೇ ಜಾತಿ ಹೆಸರು ಹೇಳಿ ಮತ ಪಡೆಯಬಾರದು. ಜೆಡಿಎಸ್ ಹಿಂದೆ ರಾಜ್ಯಮಟ್ಟದ ಪಕ್ಷವಾಗಿತ್ತು. ಬೀದರ್ ನಿಂದ ಚಾಮರಾಜನಗರದವರೆಗೆ ಸಮೃದ್ಧವಾಗಿತ್ತು.ದೇವೇಗೌಡರು, ಕುಮಾರಸ್ವಾಮಿ ಒಂದು ವರ್ಗಕ್ಕೆ ಸೀಮಿತರಾಗಿ ಮಂಡ್ಯ, ಹಾಸನಕ್ಕೆ ಬಂದು ನಿಂತಿದೆ. ಒಂದು ಸಮುದಾಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ನಾನು ಕೂಡಾ ಒಕ್ಕಲಿಗ ಸಮುದಾಯದಿಂದ ಬಂದವನು ಎಂದು ತಿಳಿಸಿದರು.
ನಾವು ಯಾವುದೇ ಸಮುದಾಯವನ್ನು ಹಿಯಾಳಿಸುವ ಉದ್ದೇಶ ಹೊಂದಿಲ್ಲ. ಚುನಾವಣೆ ರಾಜಕಾರಣಕ್ಕೂ, ಇತಿಹಾಸಕ್ಕೂ ಸಂಬಂಧ ಇಲ್ಲ. ಅಭಿವೃದ್ಧಿ ಕೆಲಸಗಳ ಮೇಲೆ ಚುನಾವಣೆ ಮಾಡಬೇಕು ಎಂದರು.