Advertisement

ವಿದ್ಯಾಕಾಶಿ ತಲುಪಿದ ಜನ ಪರ್ಯಾಯ ಕಟ್ಟೋಣ ಜಾಥಾ

01:16 PM Apr 25, 2017 | |

ಧಾರವಾಡ: ದುಷ್ಟ ರಾಜಕಾರಣದ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ, ಕರ್ನಾಟಕ ರೈತ ಸಂಘ ಸೇರಿದಂತೆ 25ಕ್ಕೂ ಹೆಚ್ಚು ಸಂಘಟನೆಗಳು ಜಂಟಿಯಾಗಿ ಮಂಡ್ಯದಿಂದ ಆರಂಭಿಸಿರುವ ಜನಾಂದೋಲನಗಳ ಮಹಾಮೈತ್ರಿ ಜನ ಪರ್ಯಾಯ ಕಟ್ಟೋಣ ಜಾಥಾ ಸೋಮವಾರ ನಗರಕ್ಕೆ ಬಂದು ತಲುಪಿತು. 

Advertisement

ನಗರದ ಕಲಾಭವನದಿಂದ ಆರಂಭಗೊಂಡ ಜಾಥಾಕ್ಕೆ ನಿವೃತ್ತ ಲೆμrನೆಂಟ್‌ ಜರ್ನಲ್‌ ಎಸ್‌. ಸಿ.ಸರದೇಶಪಾಂಡೆ ಚಾಲನೆ ನೀಡಿದರು. ಬಳಿಕ ಅಂಬೇಡ್ಕರ್‌ ವೃತ್ತ, ಪಾಲಿಕೆಯ ರಸ್ತೆ, ಅಂಜುಮನ್‌ ವೃತ್ತ, ಸುಭಾಷ್‌ ರಸ್ತೆ, ಗಾಂಧಿ ಚೌಕ್‌ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ವಿವೇಕಾನಂದ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು. 

ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ, ಊಳುವವನೇ ಭೂ ಒಡೆಯ ಪುನಃ ಅನುಷ್ಕಾನಕ್ಕೆ, ರೈತರ ಆತ್ಮಹತ್ಯೆಗಳ ತಡೆಗೆ, ಅರ್ಥಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೆ ಜನಾಂದೋಲನಗಳ ಮಹಾಮೈತ್ರಿ ಆಯೋಜಿಸಿದೆ.

ಸ್ವಜನ ಪಕ್ಷಪಾತ, ಜಾತಿ ರಾಜಕೀಯ ಮಾಡುವ ಪುಂಡರಿಗೆ, ಸಂಪತ್ತು ಲೂಟಿಕೋರರಿಗೆ, ಅಕ್ರಮ ಹಣ ಗಳಿಸಿದವರಿಗೆ ಪಯಾರ್ಯ ಜಾಥಾ ಉತ್ತರ ನೀಡಲಿದೆ ಎಂದರು. ಈ ಜಾಥಾದಲ್ಲಿ ಉಮೇದುವಾರರ ಆಯ್ಕೆ, ಮತದಾರರಲ್ಲಿ ಜಾಗೃತಿ, ಜನಪ್ರತಿನಿಧಿಗಳು ಜನರನ್ನು ನಿಯಂತ್ರಿಸುವ ಬಗೆಯ ಕುರಿತು ಜನಸಾಮಾನ್ಯರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. 

ಮುಂಬರುವ ದಿನಗಳಲ್ಲಿ ಮಹಾಮೈತ್ರಿ ಭ್ರಷ್ಟರಿಗೆ ತಕ್ಕ ಪಾಠ ಕಲಿಸಲಿದೆ ಎಂದರು. ಭಾರತದಲ್ಲಿ ಕೃಷಿ ಸಂಕಟ, ನಿರುದ್ಯೋಗ, ಭ್ರಷ್ಟಾಚಾರ ಇತ್ಯಾದಿ ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದಿವೆ. ಈವರೆಗೂ ಆಳ್ವಿಕೆ ಮಾಡಿರುವ ಪಕ್ಷಗಳಿಂದ ಇವುಗಳನ್ನು ಹೊಡೆದೋಡಿಸಲು ಸಾಧ್ಯವಾಗಿಲ್ಲ.

Advertisement

ಹೀಗಾಗಿ ದುಷ್ಟ ಹಾಗೂ ಭ್ರಷ್ಟ ರಾಜಕಾರಣಿಗಳನ್ನು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ಗಡಿಪಾರು ಮಾಡಬೇಕು ಎಂದರು. ಎಐಡಿವೈಒನ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, 50 ವರ್ಷ ದೇಶವಾಳಿದ ಕಾಂಗ್ರೆಸ್‌ ಭ್ರಷ್ಟಾಚಾರ, ಗುಂಡಾಗಿರಿ, ಜನವಿರೋಧಿ ನೀತಿಗಳ ಮೂಲಕ ಕಾಲಹರಣ ಮಾಡಿದೆ. 

ಅವರ ಬಿಟ್ಟು, ಇವರ ಬಿಟ್ಟು, ಅವರ್ಯಾರು ಎಂಬಂತೆ ಮೂರು ಪಕ್ಷಗಳನ್ನು ನೋಡಿಯೇ ಪರ್ಯಾಯದ ಕನಸು ಚಿಗುರೊಡೆದಿದೆ. ಜಾತಿ-ಧರ್ಮ, ಹಣದ ರಾಜಕೀಯ ನಿಲ್ಲಬೇಕಿದೆ. ಏನು ಬೇಕು? ಯಾರ್ಯಾರು ಬೇಕು? ಎನ್ನುವ ಕುರಿತು ಮಾ.27ರ ರಾಯಚೂರ ಸಮಾವೇಶ ನಿರ್ಧರಿಸಲಿದೆ ಎಂದರು. 

ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರವಿ ಕೃಷ್ಣಾ ರಡ್ಡಿ ಮಾತನಾಡಿ, ನೀತಿಗೆಟ್ಟ ರಾಜಕೀಯ ಬೇಕಿಲ್ಲ. ಪ್ರಜಾತಾಂತ್ರಿಕ ಮೌಲ್ಯದ ಉಳಿವಿಗೆ ಜನಾಂದೋಲನಗಳ ಮಹಾಮೈತ್ರಿ ಆಯೋಜಿಸಿದ ಜನ ಪರ್ಯಾಯಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಹಣ, ಹೆಂಡ, ಆಸೆ-ಆಮಿಷಗಳಿಗೆ ಬಲಿಯಾಗದೆ, ಜೆಸಿಬಿ ಪಕ್ಷಗಳನ್ನು ಧಿಕ್ಕರಿಸಬೇಕು ಎಂದರು. 

ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ ಮಾತನಾಡಿದರು. ವಿವಿಧ ಜಾಗೃತಿ ಮಹಿಳಾ ತಂಡಗಳು ಕ್ರಾಂತಿಗೀತೆ-ಜಾಗೃತಿ ಗೀತೆ ಹಾಡಿದರು. ದೀಪಕ್‌ ಸಿ.ಎನ್‌, ರಾಮಾಂಜನಪ್ಪ ಆಲ್ದಳ್ಳಿ, ರವಿಕೃಷ್ಣಾರಡ್ಡಿ, ಬಸವಪ್ರಭು ಹೊರಕೇರಿ, ಎಸ್‌.ಸಿ.ಸರದೇಶಪಾಂಡೆ, ಡಾ|ರಾಜು ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು, ಮಹಿಳೆಯರು, ನಾಗರಿಕರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next