Advertisement
ಹಂದಿಮುಕ್ತ ನಗರ, ನಾಯಿಗಳ ನಿಯಂತ್ರಣಕ್ಕೆ ವಿವಿಧ ಕ್ರಮಗಳು ಎಂದೆಲ್ಲ ಮಹಾನಗರ ಪಾಲಿಕೆ ಬಡಬಡಿಸುತ್ತಿದೆ. ಆದರೆ ವಾಸ್ತವ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬುದಕ್ಕೆ ಅನೇಕ ಬಡಾವಣೆಗಳಲ್ಲಿ ರಾತ್ರಿ-ಬೆಳಿಗ್ಗೆ ಎನ್ನದೆ ಬೀದಿ ನಾಯಿಗಳು ದ್ವಿಚಕ್ರ ವಾಹನ ಸವಾರರ ಮೇಲೆ ಎರಗುತ್ತಿರುವುದು ಸಾಕ್ಷಿಯಾಗಿದೆ.
Related Articles
Advertisement
ನಗರದ ವಿಜಯನಗರ, ಅಶೋಕ ನಗರ, ದೇಶಪಾಂಡೆ ನಗರ, ಕೇಶ್ವಾಪುರ ವೃತ್ತ, ಪಿಂಟೋ ರಸ್ತೆ, ನವನಗರದ ಬಸವೇಶ್ವರ ವೃತ್ತ, ಮಾರುಕಟ್ಟೆ, ಅರವಿಂದ ನಗರ, ಕಾರವಾರ ರಸ್ತೆ, ಬಮ್ಮಾಪುರ ಓಣಿ, ಪ್ರಥಮಶೆಟ್ಟಿ ಓಣಿ, ಗೋಪನಕೊಪ್ಪ ರಸ್ತೆ, ಹಳೇ ಹುಬ್ಬಳ್ಳಿ, ಆನಂದನಗರ, ನೇಕಾನಗರ, ಸಿದ್ದಾರೂಢಮಠ, ಸುಳ್ಳ ರಸ್ತೆ, ಕಾರವಾರ ರಸ್ತೆ, ಗೋಕುಲ ರಸ್ತೆ, ರಾಧಾಕೃಷ್ಣ ನಗರ, ಗಾಂಧಿನಗರ, ಉಣಕಲ್ಲ, ಸಾಯಿನಗರ ಸೇರಿದಂತೆ ಹಲವೆಡೆ ಬೀದಿ ನಾಯಿಗಳ ಕಾಟ ಹೇಳತೀರದಾಗಿದೆ.
ಈ ಹಿಂದೆ ತಡರಾತ್ರಿ ಮನೆಗೆ ಹೋಗುವವರು ಬೀದಿ ನಾಯಿಗಳ ಕಾಟದಿಂದ ಹೆದರಿಕೊಂಡು ಹೋಗಬೇಕಿತ್ತು. ಇದೀಗ ಬೆಳಿಗ್ಗೆ, ಮಧ್ಯಾಹ್ನ ಸಮಯದಲ್ಲೇ ನಾಯಿಗಳು ದ್ವಿಚಕ್ರ ವಾಹನಕ್ಕೆ ಬೆನ್ನು ಹತ್ತುತ್ತಿವೆ. ಕೆಲವು ಕಡೆ ಮೂರ್‍ನಾಲ್ಕು ನಾಯಿಗಳು ದ್ವಿಚಕ್ರ ವಾಹನಗಳಿಗೆ ಮುಗಿ ಬೀಳುತ್ತಿದ್ದು, ದ್ವಿಚಕ್ರ ವಾಹನ ಸವಾರರು ವಾಹನ ನಿಲ್ಲಿಸಿ ನಾಯಿಗಳನ್ನು ಎದುರಿಸಬೇಕು.
ಇಲ್ಲವೆ ಅತಿವೇಗದಲ್ಲಿ ವಾಹನ ಚಾಲನೆ ಮಾಡಬೇಕಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಒಂದು ನಾಯಿಯಿಂದ ಕಚ್ಚಿಸಿಕೊಳ್ಳಬೇಕು ಇಲ್ಲವೆ ವೇಗದ ವಾಹನ ಸಂಚಾರ ವೇಳೆ ಅಪಘಾತಕ್ಕೊಳಗಾಗಬೇಕು ಎನ್ನುವ ಸ್ಥಿತಿ ಇದೆ. ಇದು ಪಾಲಿಕೆಯವರ ಕಣ್ಣಿಗೆ ಮಾತ್ರ ಕಾಣುತ್ತಿಲ್ಲವಾಗಿದೆ.
ಇಂದಿರಾ ಗಾಜಿನ ಮನೆಯ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಹಿಂಡು ಹಿಂಡು ಬೀದಿ ನಾಯಿಗಳಿದ್ದು, ಕೆಲ ದಿನಗಳ ಹಿಂದೆ ನಾಯಿಗಳನ್ನು ಹಿಡಿಯುವ ಕಾರ್ಯ ಕೈಗೊಳ್ಳಲಾಯಿತು. ಇದು ಒಂದೇ ದಿನಕ್ಕೆ ಸೀಮಿತವಾಯಿತು. ಮರುದಿನವೇ ಹತ್ತಾರು ನಾಯಿಗಳು ಉದ್ಯಾನವನದಲ್ಲಿ ಪ್ರತ್ಯಕ್ಷವಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಪಾಲಿಕೆಗೆ ಅಣಕಿಸುವ ಕಾರ್ಯ ತೋರಿದವು.
ಹಣ ವೆಚ್ಚವಾಗಿದ್ದಷ್ಟೇ ಬಂತು: ಮಹಾನಗರದಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚಳ ತಡೆ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿತ್ತು. ಇದಕ್ಕಾಗಿ ಪಾಲಿಕೆ ಬಜೆಟ್‌ನಲ್ಲಿ 5ಲಕ್ಷ ರೂ.ಗಳವರೆಗೆ ಹಣ ನಿಗದಿ ಪಡಿಸಲಾಗುತ್ತಿತ್ತು.
ಸ್ವಯಂ ಸೇವಾ ಸಂಸ್ಥೆಯೊಂದರ ಸಹಾಯದೊಂದಿಗೆ ಮಹಾನಗರ ಬಹುತೇಕ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಲೆಕ್ಕ ಒಪ್ಪಿಸುತ್ತಿದ್ದಾರೆಯಾದರೂ, ಯಾವ ಬಡಾವಣೆಯಲ್ಲಿ, ಎಷ್ಟು ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ, ಅದಕ್ಕೇನಾದರೂ ಗುರುತು ಹಾಕಲಾಗಿದೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಸಮರ್ಪಕ ಉತ್ತರ ಇಲ್ಲವಾಗಿದೆ.
ಮತ್ತೂಂದು ವಿಚಾರವೆಂದರೆ ಲಕ್ಷ ಲಕ್ಷಗಳ ವೆಚ್ಚದಲ್ಲಿ ಹಲವು ವರ್ಷಗಳಿಂದ ಕೈಗೊಂಡ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಮರ್ಪಕ ಜಾರಿಯಾಗಿದ್ದೇಯಾದಲ್ಲಿ ಅವಳಿ ನಗರದಲ್ಲಿ ಈ ವೇಳೆಗೆ ಬೀದಿ ನಾಯಿಗಳ ಸಂಖ್ಯೆಯಲ್ಲಿ ಕನಿಷ್ಠ ಅರ್ಧದಷ್ಟಾದರೂ ಕಡಿಮೆ ಆಗಬೇಕಿತ್ತು. ಆದರೆ ನಾಯಿಗಳ ಸಂಖ್ಯೆಯಲ್ಲಿ ಮಹತ್ತರ ಹೆಚ್ಚಳವಾಗಿದೆ ಎಂಬುದಕ್ಕೆ ವಿವಿಧ ಬಡಾವಣೆಗಳಲ್ಲಿನ ನಾಯಿಗಳೇ ಸಾಕ್ಷಿಯಾಗಿವೆ.
ಕೆಲವೊಂದು ಕಡೆ ಮಾಂಸದ ಅಂಗಡಿಗಳು, ತ್ಯಾಜ್ಯ ತೊಟ್ಟಿಗಳು ಬೀದಿ ನಾಯಿ ಹಾಗೂ ಹಂದಿಗಳನ್ನು ಸಾಕುತ್ತಿದ್ದರೆ, ಇನ್ನು ಕೆಲವು ಕಡೆ ಕೆಲವೊಂದು ಮನೆಯವರು ಬೀದಿ ನಾಯಿಗಳಿಗೆ ಬ್ರೇಡ್, ರೊಟ್ಟಿ, ಚಪಾತಿ, ಅನ್ನ ಹಾಕಿ ಬೀದಿಯಲ್ಲಿಯೇ ಸಾಕುತ್ತಿದ್ದಾರೆ.
* ಬಸವರಾಜ ಹೂಗಾರ