ಕೊಪ್ಪಳ: ಜಿಲ್ಲೆಯಲ್ಲಿ ಈಗಾಗಲೇ ಶೌಚಾಲಯ ನಿರ್ಮಾಣ ಮಾಡಿದ ಪರಿಣಾಮ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಘೋಷಣೆಯಾಗಿದೆ. ಅವುಗಳ ಬಳಕೆ ಸೇರಿದಂತೆ ಸ್ವಚ್ಛತೆ ಕುರಿತು ಜನರಲ್ಲಿ ನಾವು ಜಾಗೃತಿ ಮೂಡಿಸಬೇಕಿದೆ ಎಂದು ತಾಪಂ ಇಒ ಕೃಷ್ಣಮೂರ್ತಿ ಅವರು ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಶೌಚಾಲಯ ನಿರ್ಮಾಣ ಸೇರಿದಂತೆ ಬಳಕೆ ಅಭಿಯಾನ ಮಾಡಿದ್ದೇವೆ. ಇಲ್ಲಿನ ಸ್ವಚ್ಛತೆ ಕುರಿತು ಕೇಂದ್ರ ಸರ್ಕಾರದ ತಂಡವು ಜಿಲ್ಲೆ ಹಾಗೂ ತಾಲೂಕಿನ ಎಲ್ಲ ಕಡೆಯೂ ಅವರು ಭೇಟಿ ನೀಡಲಿದ್ದಾರೆ. ಶೌಚಾಲಯಗಳ ಬಳಕೆ ಹಾಗೂ ಗ್ರಾಮ ಮಟ್ಟದಲ್ಲಿ ಸ್ವಚ್ಛತೆಯ ಬಗ್ಗೆ ಪರಿಶೀಲನಾ ವರದಿ ಪಡೆಯಲಿದ್ದಾರೆ. ಅಧಿಕಾರಿಗಳ ತಂಡ ಬರಲಿದೆ. ಹಾಗಾಗಿ ಗ್ರಾಮ ಮಟ್ಟದಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕೆಂದರು.
ತಾಪಂ ಅಧ್ಯಕ್ಷ ಬಾಲಚಂದ್ರನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜನತೆಗೆ ಸ್ವಚ್ಛತೆಯ ಬಗ್ಗೆ ಇನ್ನೂ ಜಾಗೃತಿ ಇಲ್ಲದಂತಾಗಿದೆ. ರಾಜ್ಯ ಸೇರಿದಂತೆ ಕೇಂದ್ರ ಸರ್ಕಾರವು ಸ್ವಚ್ಛತೆಯ ಕುರಿತು ಹಲವು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ವಿವಿಧ ಹಂತದಲ್ಲಿ ಮಾಹಿತಿ ನೀಡುತ್ತಿದೆ. ಆದರೂ ಜನರು ಮನೆಯಲ್ಲಿ ಶೌಚಾಲಯ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ನೀರಿನ ಸಮಸ್ಯೆ ಹಾಗೂ ಸ್ವಚ್ಛತೆ ಮಾಡುವ ಕುರಿತು ಕಾರಣ ಹೇಳಿ ಇನ್ನೂ ಮೂಢ ಪದ್ಧತಿಯಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸೇರಿದಂತೆ ಸಂಘ-ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಬದಲಾಗಿ ಇಂದಿನ ಶಾಲಾ ಮಕ್ಕಳಿಗೆ ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರೆ ಅವರು ಜಾಗೃತರಾಗಿ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲರು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ| ರಾಮಾಂಜನೇಯ ಅವರು ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳು ಬರುತ್ತವೆ. ನಾವು ಸಹಿತ ಹಲವು ಜಾಗೃತಿ ಸಂದೇಶ ನೀಡುತ್ತಿದ್ದೇವೆ. ತಾಯಿ-ಮಗುವಿನ ಆರೈಕೆ ಹಾಗೂ ಸ್ವಚ್ಛತೆಯ ಬಗ್ಗೆ ಆಸ್ಪತ್ರೆಗಳಲ್ಲಿ ಮಾಹಿತಿ ನೀಡುತ್ತಿದ್ದೇವೆ ಎಂದರು. ಬಿಇಒ ಶೋಭಾ ಬಾಗೇವಾಡಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ ಉಪಸ್ಥಿತರಿದ್ದರು. ಬಳಿಕ ತಾಪಂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸ್ವತ್ಛತಾ ಜಾಗೃತಿಯ ಕುರಿತು ಕಾರ್ಯಾಗಾರ ಜರುಗಿತು.
ಸ್ವಚ್ಛತಾ ಪ್ರಶಸ್ತಿ ನೀಡಲು ನಿರ್ಧಾರ
ಕೊಪ್ಪಳ ತಾಲೂಕು ಹಂತದಲ್ಲಿ ಸ್ವಚ್ಛತೆ ಕುರಿತು ಹಾಗೂ ಸ್ವತ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮದ ಎಲ್ಲ ಅಂಶಗಳನ್ನು ಜಾರಿ ಮಾಡಿ ಯಶಸ್ವಿಯಾಗುವ ಗ್ರಾಪಂಗೆ ಪ್ರಶಸ್ತಿಯನ್ನು ನಾವು ಗುರುತಿಸಲಿದ್ದು, ಅಂತಹ ಪಂಚಾಯಿತಿಗೆ ತಾಲೂಕು ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಪಂ ಅಧ್ಯಕ್ಷ ಬಾಲಚಂದ್ರನ್ ಅವರು ಘೋಷಣೆ ಮಾಡಿದರು.