Advertisement

ತುಲಾಭಾರ ಮಾಡಿ ಸಂಭ್ರಮಿಸಿದ್ದ  ಜನತೆ

05:21 PM Aug 17, 2018 | |

ಗುಳೇದಗುಡ್ಡ: ಆ ಸುಂದರ ಕ್ಷಣ ಕಳೆದು ಇಂದಿಗೆ 36 ವರ್ಷ ಕಳೆದಿವೆ. ಆದರೂ ಆ ಕ್ಷಣಗಳು ಪಟ್ಟಣದ ಅದೆಷ್ಟೋ ಜನರ ಮನದಲ್ಲಿ ಇಂದಿಗೂ ಹಾಗೆಯೇ ಉಳಿದಿದೆ. ಆದರೆ ಆ ಸಮಾರಂಭದ ಕೇಂದ್ರಬಿಂದುವಾಗಿದ್ದ ಮಹಾನ್‌ ಚೇತನ್‌ ನಮ್ಮಿಂದ ಇಂದು ದೂರವಾಗಿರುವುದು ವಿಷಾದದ ಸಂಗತಿ. ಅದು ಬೇರಾರು ಅಲ್ಲ ಭಾರತ ರತ್ನ, ರಾಜನೀತಿಜ್ಞ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು. ಆ ಮಹಾನ್‌ ಚೇತನ್‌ ಗುಳೇದಗುಡ್ಡಕ್ಕೆ ಒಂದಲ್ಲ ಎರಡು ಬಾರಿ ಬಂದು ಪಟ್ಟಣದ ಜನರ ಆತಿಥ್ಯ ಸ್ವೀಕರಿಸಿದ್ದರು.

Advertisement

1982ರಲ್ಲಿ ತುಲಾಭಾರ: 1982ರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿಯವರಿಗೆ ಗುಳೇದಗುಡ್ಡ ಪಟ್ಟಣದ ಜನತೆ, ಭಾರತೀಯ ಜನತಾ ಪಾರ್ಟಿ ಮುಖಂಡರು ತುಲಾಭಾರ ಮಾಡಿದ್ದರು. ಆ ಸುಂದರ ಘಟನೆಯನ್ನು ನೆನೆದು ಪಟ್ಟಣದ ಬಿಜೆಪಿ ಪಕ್ಷದವರಷ್ಟೇ ಅಲ್ಲದೇ ಇಡೀ ಪಟ್ಟಣವೇ ಸ್ಮರಿಸಿಕೊಳ್ಳುತ್ತಿದೆ. ಸದ್ಯ ಅಟಲ್‌ಜಿ ನಮ್ಮೊಂದಿಗಿಲ್ಲ ಎಂಬುದನ್ನು ನೆನೆಸಿಕೊಂಡು ದುಃಖಿತರಾಗುತ್ತಿದ್ದಾರೆ.

1982ರಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಟ್ಟಣದ ಭಂಡಾರಿ ಕಾಲೇಜಿನ ಆವರಣದಲ್ಲಿ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, 84ಕೆಜಿ ತೂಕವಿದ್ದ ಅಟಲ್‌ಜಿಯವರಿಗೆ ನಾಣ್ಯಗಳಿಂದ ತುಲಾಭಾರ ಮಾಡಿ, 51ಸಾವಿರಗಳ ದೇಣಿಗೆಯನ್ನು ನೀಡಿದ್ದರು. ನಂತರ ತುಂಬಿದ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅಟಲ್‌ಜಿ ಮಾತನಾಡಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಆಗಿನ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಟಿ.ಎಂ. ಹುಂಡೇಕಾರ, ನಾರಾಯಣಸಾ ಭಾಂಡಗೆ ಇತರರು ಇದ್ದರು.

1982ರಲ್ಲಿ ಘನಶ್ಯಾಮದಾಸ ರಾಠಿ, ಮಲ್ಲಿಕಾರ್ಜುನ ಬನ್ನಿ, ರಂಗಪ್ಪ ಶೇಬಿನಕಟ್ಟಿ, ಕೆ.ಎಚ್‌. ಮರಳಿ,ರಾಮಬಿಲಾಸ ಧೂತ, ಮಧುಸೂಧನ ರಾಂದಡ, ಡೀಕಣ್ಣ ಕಂಠಿ, ವಂಸತಸಾ ಸಿಂಗ್ರಿ, ಕಮಲಾಕರ ಪವಾರ, ಡಾ.ಯು.ಎಂ.ಉಮರ್ಜಿ, ಮನೋಹರ ಶೆಟ್ಟರ ಸೇರಿದಂತೆ ಇನ್ನೂ ಅನೇಕರು ತುಲಾಭಾರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಾಠಿ ಮನೆಯಲ್ಲಿ ಭೋಜನ: ಪಟ್ಟಣದ ಖಣಗಳ ವ್ಯಾಪಾರಸ್ಥರಾದ ಆರ್‌ಎಸ್‌ ಎಸ್‌ ಮುಖಂಡ ಘನಶ್ಯಾಮದಾಸ್‌ ರಾಠಿ ಅವರ ಮನೆಯಲ್ಲಿ ತುಲಾಭಾರ ಕಾರ್ಯಕ್ರಮ ಮುಗಿದ ನಂತರ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಅಟಲ್‌ ಬಿಹಾರಿ ವಾಜಪೇಯಿಯವರು ಭೋಜನ ಸೇವಿಸಿ, ಕಾರ್ಯಕರ್ತರೊಂದಿಗೆ ಚರ್ಚಿಸಿ, ಗದಗ ಕಡೆ ಪ್ರಯಾಣ ಬೆಳೆಸಿದ್ದರು.

ಚುನಾವಣಾ ಪ್ರಚಾರಕ್ಕೆ ಮತ್ತೆ ಆಗಮನ: 1982ರಲ್ಲಿ ತುಲಾಭಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾಜಪೇಯಿಯವರು ಮತ್ತೇ 1983ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣಾ ಪ್ರಚಾರದ ಸಲುವಾಗಿ ಆಗ ಗುಳೇದಗುಡ್ಡ ವಿಧಾನಸಭೆ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಬನ್ನಿಯವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿ, ಪ್ರಚಾರ ಕಾರ್ಯಕೈಗೊಂಡಿದ್ದರು, ಅಂದು ವಾಜಪೇಯಿಯವರು ಮಾಡಿದ ಚುನಾವಣಾ ಪ್ರಚಾರದ ನಂತರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಬನ್ನಿ ಗೆಲುವು ಸಾಧಿಸಿದ್ದರು.

Advertisement

1983ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗುಳೇದಗುಡ್ಡ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನ ಪರ ಪ್ರಚಾರ ಮಾಡಿದ್ದರು. ಆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದ್ದೇ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಅಜಾತ ಶತ್ರುವಾಗಿದ್ದರು, ರಾಜನೀತಿಜ್ಞರಾಗಿದ್ದರು. ನಿಜವಾಗಿಯುವ ಅವರು ಭಾರತ ಮಾತೆಯ ಸುಪುತ್ರ. ಅವರನ್ನು ಕಳೆದುಕೊಂಡು ಇಂದು ಭಾರತೀಯ ಜನತಾ ಪಾರ್ಟಿ ಬಡವಾಗಿದೆ.
ಮಲ್ಲಿಕಾರ್ಜುನ ಬನ್ನಿ, ಮಾಜಿ ಶಾಸಕ, ಗುಳೇದಗುಡ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರಿಗೆ 1982ರಲ್ಲಿ ಪಟ್ಟಣದಲ್ಲಿ ಬಿಜೆಪಿಯಿಂದ ತುಲಾಭಾರ ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಅವರು ನಮ್ಮ ಮನೆಯಲ್ಲಿಯೇ ಮುಖಂಡರೊಂದಿಗೆ ಸೇರಿ ಊಟ ಮಾಡಿ, ಹೋಗಿದ್ದು ಇಂದಿಗೂ ಮರೆಯಲಾಗದಂತಹ ಕ್ಷಣ. ಆದರೆ ಇಂದು ಅಂತಹ  ಧೀಮಂತ ನಾಯಕ ನಮ್ಮನ್ನು ಬಿಟ್ಟು ಅಗಲಿದ್ದು ಬಹಳ ದುಃಖ ತರಿಸಿದೆ.
 ಸಂಪತ್‌ ರಾಠಿ, ಘನಶ್ಯಾಮದಾಸ್‌ ರಾಠಿಯವರ ಪುತ್ರ, ಗುಳೇದಗುಡ್ಡ.

Advertisement

Udayavani is now on Telegram. Click here to join our channel and stay updated with the latest news.

Next