Advertisement

ಪರ್ಯಾಯ ಸಂತೆ ವ್ಯವಸ್ಥೆಗೆ ಹೊಂದಿಕೊಂಡ ಜನ

07:41 AM Jun 06, 2020 | Suhan S |

ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ ತೀವ್ರ ಸಂಕಷ್ಟದ ನಡುವೆಯೂ ಒಂದಿಷ್ಟು ಹೊಸ ಜೀವನ ಶೈಲಿ ರೂಪಿಸಿರುವುದು ಸುಳ್ಳಲ್ಲ. ಸಾಮಾಜಿಕ ಅಂತರಕ್ಕೆ ತೊಡಕಾಗಿದ್ದ ವಾರದ ಸಂತೆ ನೆಚ್ಚಿಕೊಂಡಿದ್ದ ವ್ಯಾಪಾರಸ್ಥರು ಈಗ ಬೀದಿಬದಿ ವ್ಯಾಪಾರ ವ್ಯವಸ್ಥೆಗೆ ಅವಲಂಬಿತರಾಗುತ್ತಿದ್ದಾರೆ. ವಾರದ ಸಂತೆಗಾಗಿಯೇ ಕಾಯಬೇಕು ಎನ್ನುವ ಅನಿವಾರ್ಯತೆಯಿಂದ ಮುಕ್ತಗೊಳಿಸಿ ಯಾವಾಗ ಬೇಕಾದರೂ ಹತ್ತಿರದಲ್ಲೇ ತಾಜಾ ತರಕಾರಿ, ಹಣ್ಣು ಸಿಗಲಿದೆ ಎನ್ನುವ ವಿಶ್ವಾಸ ಬೆಳೆಸಿದೆ. ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ.

Advertisement

ಅಂತರ ಕಷ್ಟಸಾಧ್ಯ: ಕೋವಿಡ್ ಸೋಂಕು ತಡೆ ನಿಟ್ಟಿನಲ್ಲಿ ಜಿಲ್ಲಾಡಳಿತ ವಾರದ ಸಂತೆಗಳನ್ನು ರದ್ದು ಪಡಿಸಿತ್ತು. ಆದರೂ ಜನರಿಗೆ ನಿತ್ಯ ಅಗತ್ಯ ವಸ್ತುಗಳಲ್ಲಿ ಯಾವುದೇ ಕೊರತೆಯುಂಟಾಗಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ತರಕಾರಿ-ಹಣ್ಣು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವ್ಯವಸ್ಥಿತ ಯೋಜನೆ ರೂಪಿಸಿತ್ತು. ವಾರದ ಸಂತೆ ಮಾದರಿಯಲ್ಲೇ ಕೆಲವೊಂದು ಸ್ಥಳ ಗುರುತಿಸಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದಾಗ್ಯೂ ಸಾಮಾಜಿಕ ಅಂತರ ಕಾಣಲಿಲ್ಲ. ಆದರೆ ಲಾಕ್‌ಡೌನ್‌ ಸಡಿಲಿಕೆ ಪರಿಣಾಮ ಸಂಚಾರ ವ್ಯವಸ್ಥೆಯಿಂದ ಇದೀಗ ಆಯಾ ಪ್ರದೇಶಗಳಲ್ಲಿ ಒಂದೆಡೆ ಕುಳಿತು ವ್ಯಾಪಾರಕ್ಕೆ ತಲುಪಿದೆ.

ವಿವಿಧೆಡೆ ತರಕಾರಿ ಲಭ್ಯ: ಮಹಾನಗರ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಇದೀಗ ತರಕಾರಿ, ಹಣ್ಣಿನ ವ್ಯಾಪಾರಿಗಳ ವಹಿವಾಟು ನಡೆಯುತ್ತಿದೆ. ಪ್ರಮುಖ ರಸ್ತೆ, ಹೆಚ್ಚು ಜನ ಓಡಾಡುವ ರಸ್ತೆಗಳಲ್ಲಿ ದೊರೆಯುತ್ತಿದ್ದು, ವ್ಯಾಪಾರಕ್ಕೇನು ಕೊರತೆಯಿಲ್ಲ. ಗೋಕುಲ ರಸ್ತೆ ಪ್ರಮುಖ ಬಡಾವಣೆ ರಸ್ತೆ, ಅಶೋಕ ನಗರ ರಸ್ತೆ, ಕೇಶ್ವಾಪುರ ರಸ್ತೆ, ಲಿಂಗರಾಜ ನಗರ, ಶಿರೂರ ಪಾರ್ಕ್‌, ಘಂಟಿಕೇರಿ, ಬೆಂಡಿಗೇರಿ, ಭವಾನಿ ನಗರ, ಹಳೇ ಹುಬ್ಬಳ್ಳಿ ಹೀಗೆ ಪ್ರಮುಖ ರಸ್ತೆಗಳು ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ತರಕಾರಿ ಹಾಗೂ ಹಣ್ಣಿನ ಅಂಗಡಿಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೂ ಕೆಲ ಪ್ರದೇಶಗಳಿಗೆ ಅಕ್ಕಪಕ್ಕದ ಗ್ರಾಮದ ರೈತರು ಬಂದು ನೇರವಾಗಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ.

ವಾರ ಕಾಯುವ ಅಗತ್ಯವಿಲ್ಲ: ತರಕಾರಿಗಾಗಿಯೇ ಒಂದು ವಾರ ಕಾಯುವ ಮನಸ್ಥಿತಿಯಿಂದ ಜನರು ದೂರವಾಗುತ್ತಿದ್ದಾರೆ. ತಮ್ಮ ಮನೆ ಮುಂಭಾಗ ಅಥವಾ ಹತ್ತಿರದಲ್ಲೇ ತಾಜಾ ತರಕಾರಿ ದೊರೆಯುತ್ತಿರುವುದರಿಂದ ವಾರಗಟ್ಟಲೆ ಕೆಲ ತರಕಾರಿ, ಹಣ್ಣು, ಸೊಪ್ಪನ್ನು ಫ್ರಿಡ್ಜ್ನಲ್ಲಿ ಇರಿಸಿ ಬಳಸುವುದು ಮರೆಯಾಗುತ್ತಿದೆ. ಒಂದು ಅಥವಾ ಎರಡು ದಿನಕ್ಕೆ ಬೇಕಾಗುವಷ್ಟು ಖರೀದಿ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಧಾರವಾಡಕ್ಕೆ ಹೋಲಿಸಿದರೆ ಹುಬ್ಬಳ್ಳಿಯಲ್ಲೇ ವಾರದ ಸಂತೆಗಳು ಹೆಚ್ಚು. ಅವಳಿನಗರ ಸೇರಿ ಸುಮಾರು 13 ಕಡೆ ಅಧಿಕೃತವಾಗಿ ವಾರದ ಸಂತೆಗಳು ನಡೆಯುತ್ತಿದ್ದು, ಈ ಎಲ್ಲಾ ಸಂತೆಗಳ ಮೇಲೆ ಅವಲಂಬನೆಯಾಗಿದ್ದ ಜನರು ಇದೀಗ ಬೀದಿ ಬದಿಯ ವ್ಯಾಪಾರಿಗಳ ಮೇಲೆ ಆಶ್ರಯಿಸಿದ್ದಾರೆ. ಇನ್ನೂ ಕೆಲ ಪ್ರದೇಶಗಳಲ್ಲಿ ವಾಹನ, ತಳ್ಳುವ ಗಾಡಿಗಳ ಮೂಲಕ ಮಾರಾಟವಿದೆ. ಸೋಂಕು ದೂರವಾಗುವವರೆಗೂ ಇದೇ ವ್ಯವಸ್ಥೆ ಸೂಕ್ತ ಎನ್ನುವ ಅಭಿಪ್ರಾಯ ಜನರಲ್ಲಿದೆ.

ಪಾಲಿಕೆಯಿಂದ ತಾತ್ಕಾಲಿಕ ವ್ಯವಸ್ಥೆಯ ನಿರೀಕ್ಷೆ :  ಸಾಮಾಜಿಕ ಆಂತರ ಕಾಯ್ದುಕೊಂಡು ಸೋಂಕು ಹರಡದಂತೆ ತಡೆಗಟ್ಟಲು ವಾರದ ಸಂತೆ ಶೀಘ್ರದಲ್ಲಿ ಆರಂಭಿಸುವುದು ಅಷ್ಟೊಂದು ಸೂಕ್ತವಲ್ಲ. ಎಷ್ಟೇ ನಿರ್ಬಂಧ ಹಾಕಿದರೂ ನಿಯಮ ಪಾಲನೆ ಅಸಾಧ್ಯ. ಹೀಗಾಗಿ ಇದೀಗ ಚಾಲ್ತಿಯಲ್ಲಿರುವ ವ್ಯಾಪಾರದ ವ್ಯವಸ್ಥೆ

Advertisement

ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಸಹಕಾರಿಯಾಗಿರುವುದರಿಂದ ಪಾಲಿಕೆ ಕೈ ಜೋಡಿಸಿದರೆ ಅನುಕೂಲವಾಗುತ್ತದೆ. ಕೆಲವೆಡೆ ಅಗಲವಾದ ರಸ್ತೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವುದು (ಶಾಶ್ವತ ನೆಲೆಗೆ ಅವಕಾಶ ನೀಡದಂತೆ), ತರಕಾರಿ-ಹಣ್ಣುಗಳ ಮಾರಾಟದಿಂದ ಸೃಷ್ಟಿಯಾಗುವ ತ್ಯಾಜ್ಯ ವಿಲೇವಾರಿ ಸೇರಿದಂತೆ ಕೆಲ ಕ್ರಮಗಳ ಬಗ್ಗೆ ಪಾಲಿಕೆ ಸೂಚನೆಗಳನ್ನು ನೀಡಬಹುದಾಗಿದೆ. ಒಮ್ಮೆ ವಾರದ ಸಂತೆ ಆರಂಭಿಸಿ ಆಪ್ರದೇಶದಲ್ಲಿ ಕೋವಿಡ್ ಸೋಂಕು ಪತ್ತೆಯಾದರೆ ಸಂತೆ ರದ್ದು ಮಾಡುವುದು ಕಷ್ಟ. ಹಿಂದೆ ಇಂತಹ ಸಮಸ್ಯೆಯನ್ನು ಪಾಲಿಕೆ ಹಾಗೂ ಪೊಲೀಸರು ಅನುಭವಿಸಿದ್ದಾರೆ.

ವಾರದ ಸಂತೆ ನಿಲ್ಲಿಸಿದ್ದರಿಂದ  ವಾಹನ ಮಾಡಿಕೊಂಡು ವ್ಯಾಪಾರ ಮಾಡೋದು ಖರ್ಚು ಬರುತ್ತಿತ್ತು. ಈಗ ಖಾಲಿ ಜಾಗದಲ್ಲಿ ಕುಳಿತು ಸಂಜೆಯವರೆಗೆ ವ್ಯಾಪಾರ  ಮಾಡುತ್ತಿದ್ದೇವೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ವಾರದ ಸಂತೆ ಆರಂಭವಾಗುವವರೆಗೂ ಪಾಲಿಕೆ, ಪೊಲೀಸರು ಕಿರಿಕಿರಿ ಮಾಡದಂತಾದರೆ ಉತ್ತಮ. -ಲಕ್ಷ್ಮಣ ಬಿಜಾಪುರ, ತರಕಾರಿ ವ್ಯಾಪಾರಿ

 

-ಹೇಮರಡ್ಡಿ ಸೈದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next