ಕನಕಪುರ: ಊಟ, ನಿದ್ದೆ ಬಿಟ್ಟು ಆಧಾರ್‌ಗಾಗಿ ರಾತ್ರಿ 3 ಗಂಟೆಯಿಂದ ಕಾದುಕುಳಿತ ಸಾರ್ವಜನಿಕರಿಗೆ ಬೆಳಗ್ಗೆ 10 ಗಂಟೆಯಾದರೂ ಟೋಕನ್ ನೀಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಪ್ರತಿಯೊಂದು ಸರ್ಕಾರಿ ಸೌಲಭ್ಯಗಳಿಗೆ ಮತ್ತು ಇತರೆ ಕೆಲಸಗಳಿಗೂ ಆಧಾರ್ ಕಡ್ಡಾಯಗೊಳಿಸಿದೆ. ತಾಲೂಕಿನಾದ್ಯಂತ ಹೋಬಳಿ ಮಟ್ಟದಲ್ಲಿ ಆಧಾರ್ ಕೇಂದ್ರ ಸ್ಥಗಿತಗೊಂಡು ತಾಲೂಕು ಕೇಂದ್ರಕ್ಕೆ ಊಟ ನಿದ್ದೆ ಬಿಟ್ಟು ಬೆಳಗ್ಗೆ 3ರಿಂದ ಕಾದು ಕುಳಿತುಕೊಳ್ಳುತ್ತಿದ್ದಾರೆ. ಬುಧವಾರ ತಹಶೀಲ್ದಾರ್ ಅವರು ಸಹಿ ಇರುವ ಟೋಕನ್‌ಗಳು ಲಭ್ಯವಿರಲಿಲ್ಲ. ಇದರಿಂದ ಕಾದು ಕುಳಿತಿದ್ದ ಸಾರ್ವಜನಿಕರು ತಾಳ್ಮೆಕಳೆದುಕೊಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸಾರ್ವಜನಿಕರ ಆರೋಪ: ಕೋವಿಡ್ ಪೂರ್ವದಲ್ಲಿಪ್ರತಿ ಹೋಬಳಿ ಕೇಂದ್ರ ಮತ್ತು ನಾಡ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಪಡೆಯಲು ಅವಕಾಶವಿತ್ತು. ಆದರೆ ಕೋವಿಡ್ ನಂತರ ಸ್ಥಗಿತಗೊಳಿಸಿರುವ ಕೇಂದ್ರಗಳನ್ನು ಇನ್ನೂ ತೆರದಿಲ್ಲ. ಒಂದು ಆಧಾರ್ ತಿದ್ದುಪಡಿ ಮಾಡಲು 200 ರಿಂದ 250 ರೂ. ವಸೂಲಿ ಮಾಡುತ್ತಿದ್ದಾರೆ. ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಕಮಿಷನ್ ಆಸೆಗೆ ಬಿದ್ದಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿವೆ ಎಂದು ಆರೋಪಿಸಿದರು. ಮಧ್ಯವರ್ತಿಗಳಿಗೆ 1 ರೂ. ತಿದ್ದುಪಡಿ ನಕಲು ಅರ್ಜಿಗೆ 5 ರೂ. ಕೊಡಬೇಕು. ಅವಿದ್ಯಾವಂತರು ಬಂದರೆ ಅರ್ಜಿ ತುಂಬಲು 30 ರೂ. ಕೊಡಬೇಕು. ಹಣವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಗೋಳು ಕೇಳಿ ಮಾಧ್ಯಮ ಪ್ರತಿನಿಧಿಗಳು ತಹಶೀಲ್ದಾರ್ ಅವರಿಗೆ ಕರೆಮಾಡಿದ ನಂತರ ಆಗಮಿಸಿದ ತಹಶೀಲ್ದಾರ್ ವರ್ಷಾ ಒಡೆಯರ್, ಏಕಾಏಕಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.ಟೋಕನ್‌ಗಳು ಮುಗಿದಿದೆ ಎಂದು ತನಗೆ ಏಕೆ ಮೊದಲೇ ತಿಳಿಸಲಿಲ್ಲ. ಸಾರ್ವಜನಿಕರನ್ನು ತಾಸು ಗಟ್ಟಲೇ ಕಾಯುವಂತೆ ಮಾಡಿದ್ದೀರಿ ಎಂದು ಗರಂ ಆದರು. 100 ಸರ್ಕಾರಿ ಶುಲ್ಕ ಬಿಟ್ಟು ಹೆಚ್ಚುವರಿ ಯಾರೂ ಹಣ ನೀಡಬಾರದು ಎಂದರು. ನಂತರ ಸರತಿ ಸಾಲಿನಲ್ಲಿ ನಿಂತಿದ್ದ ನೂರಕ್ಕೂ ಹೆಚ್ಚು ಜನರಿಗೆ ಕೈ ಬರಹದಲ್ಲೇ ಟೋಕನ್ ನೀಡಿದರು.