ದೇವದುರ್ಗ: ಮಲದಕಲ್ ಗ್ರಾಮ ಪಂಚಾಯಿತ್ ವ್ಯಾಪ್ತಿಗೆ ಬರುವ ಮಸೀದಪೂರ ಗ್ರಾಮಕ್ಕೆ ಬಸಿ ನೀರಿನ ಕಾಟ ತೀವ್ರವಾಗಿದೆ. ಹಲವು ಬಾರಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಮನವಿ ಮಾಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ದಿನವಿಡೀ ನರಕಯಾತನೆ ಅನುಭವಿಸಬೇಕಾಗಿದೆ.
ಕಳೆದ ವಾರ ನಿರಂತರ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಂತ ಪರಿಣಾಮ ವಿಷಜಂತು ಕಾಟ ವಿಪರೀತವಾಗಿದೆ. ಮಲದಕಲ್ ಗ್ರಾಪಂ ವ್ಯಾಪ್ತಿಗೆ ಬರುವ ಮಸೀದಪೂರ ಗ್ರಾಮದಲ್ಲಿ ಸಾವಿರಾರೂ ಮತದಾರರು ನೂರಾರು ಕುಟುಂಬಗಳು ವಾಸಿಸುತ್ತಿವೆ. ಗ್ರಾಮದ ಪಕ್ಕದಲ್ಲಿರುವ ಕೆರೆಯ ಬಸಿ ನೀರಿನ ಕಾಟಕ್ಕೆ ಗ್ರಾಮಸ್ಥರು ಬೆಚ್ಚಿದ್ದಾರೆ. ಇಲ್ಲಿನ ಸಮಸ್ಯೆ ಕುರಿತು ಹಲವು ಬಾರಿ ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದೇ ಹಿಂದೇಟು ಹಾಕಿದ್ದಾರೆ ಎಂದು ದೂರಿದರು.
ಹಗೆವುಗಳಿಂದ ಸಮಸ್ಯೆ: ಮಸೀದಿಪೂರು ಗ್ರಾಮದಲ್ಲಿ ಈ ಹಿಂದೆ ಹಗೆವುಗಳಲ್ಲಿಜೋಳ ಸಂಗ್ರಹಿಸಲಾಗುತ್ತಿತ್ತು. ಹಗೆವುದಲ್ಲಿ ಜೋಳ ಸಂಗ್ರಹ ಮಾಡದೇ ಬಿಟ್ಟಿರುವ ಗ್ರಾಮಸ್ಥರು ಬಸಿ ನೀರಿಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಹಗೆವುಗಳು ಭಾರಿ ಪ್ರಮಾಣದಲ್ಲಿ ತೆಗ್ಗುಗಳು ಬಿದ್ದು, ಗ್ರಾಮಸ್ಥರ ಜೀವ ಹಿಂಡುತ್ತಿವೆ. ನೂರಾರು ಕುಟುಂಬಗಳು ಬಸಿ ನೀರಿಗೆ ತತ್ತರಿಸಿ ಹೋಗಿವೆ.
ಅವ್ಯವಸ್ಥೆಯ ಆಗರ: ಗ್ರಾಮದಲ್ಲಿ ಎಲ್ಲೆಂದರಲ್ಲಿ ಗಲೀಜು ನೀರು ನಿಂತ ಹಿನ್ನೆಲೆ ಅವ್ಯವಸ್ಥೆಯ ಆಗರವಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಉತ್ಪತ್ತಿ ಹೆಚ್ಚಾಗಿದ್ದು, ಗ್ರಾಮಸ್ಥರುಮನೆಯಿಂದ ಹೊರಗಡೆ ಬರಲಾರದಂತಹ ಸ್ಥಿತಿ ಉಲ್ಬಣಗೊಂಡಿದೆ.
ಮಸೀದಪೂರ ಗ್ರಾಮದಲ್ಲಿ ಬಸಿ ನೀರಿಗೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಅಲಿಸುವ ಕೆಲಸ ಮಾಡದೇ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಗ್ರಾಮದ ಸಂಘಟನೆ ಮುಖಂಡರು ಅ.28ರಂದು ಗಬ್ಬೂರು ನಾಡ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದರು.
ಮಸೀದಪೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬಸಿ ನೀರಿನ ಸಮಸ್ಯೆ ಕುರಿತು ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮ ಸ್ಥಳಾಂತರಿಸುವಂತೆ ಗ್ರಾಮಸ್ಥರ ಬೇಡಿಕೆಯಾಗಿದೆ.-
ಮಧುರಾಜ್ ಯಾಳಗಿ, ತಹಶೀಲ್ದಾರ್
2009ರಲ್ಲಿ ಆಗಿದ್ದ ನೆರೆ ಹಾವಳಿಗೆ ಗ್ರಾಮವೇ ತತ್ತರಿಸಿ ಹೋಗಿದೆ. ಸ್ಥಳಾಂತರ ಮಾಡುವಂತೆ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ.
-ರಾಜಪ್ಪ ಸಿರವಾರಕರ, ಪ್ರಗತಿಪರ ಸಂಘಟನೆ ಒಕ್ಕೂಟ ಮುಖಂಡ.
-ನಾಗರಾಜ ತೇಲ್ಕರ್