Advertisement

“ಜನತಾ ಕರ್ಫ್ಯೂ’ಗೆ ಜನ ಮನ್ನಣೆ

10:01 AM Mar 28, 2020 | Lakshmi GovindaRaj |

ಕೋವಿಡ್-19 ವೈರಸ್‌ ವಿರುದ್ಧ ದೇಶವ್ಯಾಪಿ ಜನ ಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ “ಜನತಾ ಕರ್ಫ್ಯೂ’ಗೆ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ. ಜನ ಸ್ವಯಂ ನಿರ್ಬಂಧ ಹೇರಿಕೊಂಡು ಮನೆಯೊಳಗೇ ಉಳಿದ ಕಾರಣ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ನಗರ ಪ್ರದೇಶಗಳಲ್ಲಿ ಕರ್ಫ್ಯೂ ಮಾದರಿಯ ವಾತಾವರಣ ಕಂಡು ಬಂತು. ಜೊತೆಗೆ, ಸಂಜೆ 5 ಗಂಟೆಯಾಗುತ್ತಿದ್ದಂತೆ ಜನ ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಶಂಖ ಊದಿ “ಆರೋಗ್ಯ ಸೈನಿಕರ’ ಸೇವೆಗೆ ಗೌರವ, ಕೃತಜ್ಞತೆ ಸಲ್ಲಿಸಿದರು.

Advertisement

ಇದೇ ವೇಳೆ, ಕೋವಿಡ್-19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಎಲ್ಲಾ ಗಡಿ ಭಾಗಗಳನ್ನು ಬಂದ್‌ ಮಾಡುವ ತೀರ್ಮಾನಕ್ಕೆ ಬಂದಿದೆ. ಪರೀಕ್ಷೆ, ಚುನಾವಣೆಗಳನ್ನು ಮುಂದೂಡಿದ್ದು, ಮಾ.31ರ ವರೆಗೆ ಕೋವಿಡ್‌-19 ಪ್ರಕರಣ ಕಂಡು ಬಂದಿರುವ 9 ಜಿಲ್ಲೆಗಳ ಲಾಕ್‌ಡೌನ್‌ಗೆ ನಿರ್ಧರಿಸಿದೆ. ಇಡೀ ವಿಶ್ವವನ್ನು ಹೆಮ್ಮಾರಿಯಂತೆ ಕಾಡುತ್ತಿರುವ ಕೋವಿಡ್-19 ಭೀಕರತೆಯ ನೆರಳಿನಲ್ಲಿ ಕರ್ನಾಟಕದಲ್ಲಿ ಭಾನುವಾರ ಕಂಡು ಬಂದ ಚಿತ್ರಣವಿದು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ “ಜನತಾ ಕರ್ಫ್ಯೂ’ಗೆ ಬೆಂಬಲ ಸೂಚಿಸಿ ಕೋವಿಡ್-19 ನಿಯಂತ್ರಿಸಲು ನಿರಂತರ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಪತ್ರಕರ್ತರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಬಿಜೆಪಿಯ ಸಚಿವರು ಹಾಗೂ ಶಾಸಕರು ತಮ್ಮ ನಿವಾಸಗಳಲ್ಲಿ ಭಾನುವಾರ ಸಂಜೆ 5ಗಂಟೆಗೆ ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

ಯಡಿಯೂರಪ್ಪನವರು ತಮ್ಮ ನಿವಾಸ ಡಾಲರ್ಸ್‌ ಕಾಲೋನಿಯಲ್ಲಿ ಎರಡನೇ ಮಹಡಿಯಲ್ಲಿ “ಪ್ಲೇ ಕಾರ್ಡ್‌’ ತೋರಿಸಿ, ಕುಟುಂಬ ಸದಸ್ಯರೊಂದಿಗೆ ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಅರ್ಪಿಸಿದರು. ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣನವರು ತಮ್ಮ ಕುಟುಂಬದೊಂದಿಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರೆ, ಗೋವಿಂದ ಕಾರಜೊಳ ಅವರು ತಮ್ಮ ಸರ್ಕಾರಿ ನಿವಾಸದಲ್ಲಿ ಒಬ್ಬರೇ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್‌, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್‌.ಈಶ್ವರಪ್ಪ, ತೋಟಗಾರಿಕೆ ಸಚಿವ ನಾರಾಯಣಗೌಡ, ಆರೋಗ್ಯ ಸಚಿವ ಶ್ರೀರಾಮುಲು ಅವರ ಕುಟುಂಬ ಹಾಗೂ ಆಪ್ತ ಸಿಬ್ಬಂದಿಯೊಂದಿಗೆ ಸೇರಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

Advertisement

ಶಾಸಕರ ಭವನದಲ್ಲಿ ಕೆಲವು ಶಾಸಕರು ಹಾಗೂ ಅವರ ಆಪ್ತ ಸಹಾಯಕರು ಒಟ್ಟಾಗಿ ಕೋವಿಡ್-19 ನಿಯಂತ್ರಣಕ್ಕೆ ಹೋರಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು, ಕಾಂಗ್ರೆಸ್‌ ನಾಯಕರು ಜನರಿಂದ ಅಂತರ ಕಾಯ್ದುಕೊಂಡು, ಮನೆಯಲ್ಲಿಯೇ ಉಳಿದು, “ಜನತಾ ಕರ್ಫ್ಯೂ’ಗೆ ಬೆಂಬಲ ವ್ಯಕ್ತಪಡಿಸಿದರು. ಆದರೆ, ಚಪ್ಪಾಳೆ ತಟ್ಟುವ ಕಾರ್ಯದಿಂದ ದೂರ ಉಳಿದದ್ದು ಕಂಡು ಬಂತು.

ಹಣಕಾಸಿನ ಕೊರತೆಯಿಲ್ಲ: ಈ ವೇಳೆ ಮಾತನಾಡಿದ ಯಡಿಯೂರಪ್ಪ, ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆಯಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ಸೂಚನೆ ನೀಡಲಾಗಿದೆ. ಈಗ ಅಧಿವೇಶನ ನಡೆಯುತ್ತಿರುವುದರಿಂದ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ದೇವೇಗೌಡರಿಂದ‌ ಅಭಿನಂದನೆ: ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂ ಬೆಂಬಲಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌ ಡರು ಭಾನುವಾರ ಸಂಜೆ 5 ಗಂಟೆಯಲ್ಲಿ ಪದ್ಮನಾಭನಗರ ನಿವಾಸದ ಬಾಲ್ಕನಿಯಲ್ಲಿ ಚಪ್ಪಾಳೆ ತಟ್ಟಿ ಕೋವಿಡ್-19 ವೈರಸ್‌ ವಿರುದ್ಧ ನಿರಂತರ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದರು.

ಎಬಿವಿಪಿಯಿಂದಲೂ ಅಭಿನಂದನೆ: “ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ರಾಜ್ಯದ ಎಬಿವಿಪಿ ಕಾರ್ಯಾಲಯದಲ್ಲಿ ಸಂಜೆ ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟುತ್ತಾ, ಡೊಳ್ಳು ಹಾಗೂ ವಿವಿಧ ವಾದ್ಯ, ಗಂಟೆ, ಜಾಗಟೆ ಬಾರಿಸುವುದರ ಮೂಲಕ ಬೆಂಬಲ ಮತ್ತು ಅಭಿನಂದನೆ ಸಲ್ಲಿಸಲಾಯಿತು ಎಂದು ಎಬಿವಿಪಿ ಪ್ರಾಂತ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ ಮುತ್ತಕ್ಕನವರ ತಿಳಿಸಿದ್ದಾರೆ.

ವಿಕ್ಟೋರಿಯಾ ಸಮುತ್ಛಯವೇ ವಿಶೇಷ ಆಸ್ಪತ್ರೆ: ಕೋವಿಡ್-19 ಸೋಂಕು ಚಿಕಿತ್ಸೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಆಸ್ಪತ್ರೆಯಾಗಿ ವಿಕ್ಟೋರಿಯಾ ಸಮುತ್ಛಯದ ಎಲ್ಲಾ ಆಸ್ಪತ್ರೆಗಳನ್ನು ಪರಿವರ್ತಿಸಲಾಗಿದೆ. ಒಟ್ಟು ಇಲ್ಲಿ 1,700 ಹಾಸಿಗೆ ಸಾಮರ್ಥ್ಯವಿದೆ. ಸದ್ಯ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಒಳರೋಗಿಗಳನ್ನು ಶೀಘ್ರವೇ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.

ಭಾನುವಾರ ಸೋಂಕಿತರ ವಿವರ
-ಮಾ.11ರಂದು ದುಬೈನಿಂದ ಧಾರವಾಡಕ್ಕೆ ಬಂದಿದ್ದ 35 ವರ್ಷದ ವ್ಯಕ್ತಿ. ಪ್ರಾಥಮಿಕ ಸಂಪರ್ಕಗಳು 4.

-ಮಾ.14ರಂದು ಮೆಕ್ಕಾಯಾತ್ರೆ ಮುಗಿಸಿ, ವಿಮಾನದಲ್ಲಿ ಹೈದರಾಬಾದ್‌ಗೆ ಬಂದು, ಬಳಿಕ, ರೈಲಿನಲ್ಲಿ ಹಿಂದೂಪುರ ಮೂಲಕ ಚಿಕ್ಕಬಳ್ಳಾಪುರ-ಗೌರಿಬಿದನೂರಿಗೆ ಬಂದಿದ್ದ 22 ವರ್ಷದ ಮಹಿಳೆ. ಪ್ರಾಥಮಿಕ ಸಂಪರ್ಕ 4.

-ಮಾ.9ರಂದು ಸ್ವಿಟ್ಜರ್‌ಲ್ಯಾಂಡ್‌ ಹಾಗೂ ಫ್ರಾನ್ಸ್‌ ಪ್ರವಾಸ ಮುಗಿಸಿ, ಬೆಂಗಳೂರಿಗೆ ಹಿಂದಿರುಗಿದ್ದ ಸ್ಥಳೀಯ 36 ವರ್ಷದ ಮಹಿಳೆ.

-ಮಾ.14 ರಂದು ಜರ್ಮನಿ ಪ್ರವಾಸ ಮುಗಿಸಿ, ಬೆಂಗಳೂರಿಗೆ ಹಿಂದಿರುಗಿದ್ದ ಸ್ಥಳೀಯ 27 ವರ್ಷದ ವಯಸ್ಕ. ಪ್ರಾಥಮಿಕ ಸಂಪರ್ಕ 14, ದ್ವಿತೀಯ ಸಂಪರ್ಕ 237.

-ಮಾ.13 ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ ಸ್ಥಳೀಯ 51 ವರ್ಷದ ಪುರುಷ.

-ಮಾ.19ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 22 ವರ್ಷದ ಯುವಕ. ಈತ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಶಂಕಿತ ಎಂದು ಗುರುತಿಸಿ ಸ್ಥಳೀಯ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

-ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು – 24

-ಆಸ್ಪತ್ರೆಯಲ್ಲಿ ನಿಗಾವಹಿಸಲಾದ ಶಂಕಿತರು – 135

-ಭಾನುವಾರ ಕೋವಿಡ್-19 ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಒಳರೋಗಿಗಳು – 38, ಡಿಸಾcರ್ಜ್‌ ಆದವರು – 28

-ಭಾನುವಾರ ನೆಗೆಟಿವ್‌ ಬಂದ ವರದಿಗಳು – 112

-ಒಟ್ಟು ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿರುವವರು – 3,390 (ಭಾನುವಾರ ಹೊಸದಾಗಿ 470).

Advertisement

Udayavani is now on Telegram. Click here to join our channel and stay updated with the latest news.

Next