Advertisement
ಮಣ್ಣಿನ ಗಣಪತಿ ಮೂರ್ತಿಗಳ ಜತೆಗೆ ಈಗಾಗಲೇ ಬೃಹದಾಕಾರದ ಪಿಒಪಿ ಗಣೇಶ ಮೂರ್ತಿಗಳೂ ಫುಟ್‌ಪಾತ್, ಮಳಿಗೆಗಳಲ್ಲಿ ಪ್ರತಿಷ್ಠಾಪನೆಯಾಗಿವೆ. ಮಾವಳ್ಳಿ, ಅವೆನ್ಯೂ ರಸ್ತೆ, ವಿಲ್ಸನ್ ಗಾರ್ಡನ್, ಮಲ್ಲೇಶ್ವರ, ಜಯನಗರ, ರಾಜಾಜಿನಗರ, ವಿಜಯನಗರ ಸೇರಿದಂತೆ ಎಲ್ಲೆಡೆ ಮಣ್ಣಿನ ಮೂರ್ತಿಗಷ್ಟೇ ಪಿಒಪಿ ಗಣೇಶ ಮೂರ್ತಿಗಳು ಮಾರಾಟಕ್ಕಿವೆ.
Related Articles
Advertisement
ಗಣೇಶನ ಮೂರ್ತಿ ಮುಟ್ಟುಗೋಲು ಅತ್ಯಂತ ಸೂಕ್ಷ್ಮ ವಿಚಾರ. ಧಾರ್ಮಿಕವಾಗಿ, ಭಾವನಾತ್ಮಕವಾಗಿರುವ ವಿಚಾರದಲ್ಲಿ ಪಾಲಿಕೆ ಏಕಾಏಕಿ ಬಲ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಾಗಿ, ಎಚ್ಚರಿಕೆಗೆ ಜೊತೆಗೆ ಜಾಗೃತಿಗೆ ಆದ್ಯತೆ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಸರಿಗೆ ಮಣ್ಣಿನ ಮೂರ್ತಿ – ಮಾರುವುದು ಪಿಒಪಿ ಮೂರ್ತಿ: ಹಲವೆಡೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಲಭ್ಯ ಎಂಬ ಭಾರೀ ಫಲಕಗಳನ್ನು ಅಳವಡಿಸಲಾಗಿದೆ. ಹಾಗೆಂದು ಖರೀದಿಗೆ ಮುಂದಾದರೆ ನೀಡುವುದು ಪಿಒಪಿ ಮೂರ್ತಿಗಳನ್ನು. ಪಿಒಪಿ ಮೂರ್ತಿ ಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದರಿಂದ ಮಾರಾಟಗಾರರು ನಾನಾ ತಂತ್ರಗಳನ್ನು ಅನುಸರಿಸಲಾರಂಭಿಸಿದ್ದಾರೆ. ಅದರಂತೆ ಫಲಕದ ಮೂಲಕ ಸೆಳೆದು ಪಿಒಪಿ ಮಾರುವುದು ಒಂದು ತಂತ್ರ.
ನಿಷೇಧ ಇದ್ದರೂ ಗ್ರಾಹಕರು ಕೇಳುತ್ತಾರೆ. ಹಾಗಾಗಿ, ಎರಡೂ ಪ್ರಕಾರದ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಕೇಳಿದ್ದನ್ನು ನೀಡುತ್ತೇವೆ. ಮನೆಗಳಲ್ಲಿ ಪ್ರತಿಷ್ಠಾಪಿಸುವವರು ಮಣ್ಣಿನ ಗಣೇಶ ಮೂರ್ತಿ ಕೇಳುತ್ತಾರೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವವರು ಪಿಒಪಿ ಮೂರ್ತಿ ಬಯಸುತ್ತಾರೆ ಎನ್ನುತ್ತಾರೆ ಜೆ.ಸಿ. ರಸ್ತೆಯ ಗಣೇಶ ಮೂರ್ತಿ ವ್ಯಾಪಾರಿಗಳು.
ಸಾವಿರಾರು ಅರ್ಜಿಗಳು: ಈಗಾಗಲೇ ಮೂರ್ತಿ ಪ್ರತಿಷ್ಠಾಪಿಸಲು ರಸ್ತೆ ಅಕ್ಕಪಕ್ಕದ ಜಾಗ, ಮೈದಾನಗಳಲ್ಲಿ ಶಾಮಿಯಾನ, ಪೆಂಡಾಲ್‌ಗಳು ಗಣೇಶನ ಮೂರ್ತಿ ಬರಮಾಡಿಕೊಳ್ಳಲು ಸಿಂಗಾರಗೊಂಡಿವೆ. ಹೀಗೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಈವರೆಗೆ ಬಿಬಿಎಂಪಿಗೆ ಅನುಮತಿ ಕೋರಿ ಸರಿಸುಮಾರು ಸಾವಿರಾರು ಅರ್ಜಿಗಳು ಬಂದಿವೆ.
ವ್ಯಾಪಾರಿಗಳಿಂದಲೇ ವಿಸರ್ಜನೆ ವ್ಯವಸ್ಥೆ!: ಪಿಒಪಿ ಮೂರ್ತಿಗಳನ್ನು ಮಾರಾಟಕ್ಕಿಟ್ಟಿರುವ ವ್ಯಾಪಾರಿಗಳು ಜನರನ್ನು ಆಕರ್ಷಿಸಲು ದೊಡ್ಡ ಕೃತಕ ಟ್ಯಾಂಕ್‌ಗಳನ್ನಿಟ್ಟು ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದ್ದಾರೆ. ನಮ್ಮಲ್ಲಿ ಪಿಒಪಿ ಮೂರ್ತಿ ಕೊಂಡುಕೊಳ್ಳುವವರಿಗೆ ವಿಸರ್ಜನೆ ಸಮಸ್ಯೆಯಾಗಬಾರದು ಹಾಗೂ ಕೆರೆಗಳು ಮಾಲಿನ್ಯವಾಗಬಾರದು ಎಂದು ಕೃತಕ ಟ್ಯಾಂಕ್‌ಗಳನ್ನು ನಾವೇ ಸಿದ್ಧಪಡಿಸಿದ್ದು, ಐದು ಅಡಿ ಎತ್ತರದ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಸತೀಶ್.
ಪರಿಸರ ಮೂರ್ತಿ ಚಿತ್ರ ಕಳುಹಿಸಿ: ಗೌರಿ- ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬುದು ಸದಾಶಯ. ಅದರಂತೆ ಮಣ್ಣಿನ ಮೂರ್ತಿಗಳನ್ನೇ ಬಳಸುವುದರಿಂದಾಗುವ ಪ್ರಯೋಜನ, ಪರಿಸರ ಸಂರಕ್ಷಣೆ, ವಿಸರ್ಜನಾ ಪ್ರಕ್ರಿಯೆಯೂ ಸರಳವಾಗಿರುವ ಬಗ್ಗೆ ಸರಣಿ ವರದಿಗಳನ್ನು “ಉದಯವಾಣಿ’ ಪ್ರಕಟಿಸಿದೆ.
ಇಂದು ಗೌರಿ ಹಬ್ಬ. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಣೆ ನಡೆಸುವವರು ಮೂರ್ತಿ ಸಹಿತ ಛಾಯಾಚಿತ್ರವನ್ನು 8861196369 ಮೊಬೈಲ್ ವಾಟ್ಸಾಪ್ ಸಂಖ್ಯೆಗೆ ಅಥವಾ uvreporting@gmail.com ಗೆ ಕಳುಹಿಸಿದರೆ ಆಯ್ದ ಚಿತ್ರಗಳನ್ನು ಪ್ರಕಟಿಸಲಾಗುವುದು.
* ಜಯಪ್ರಕಾಶ್ ಬಿರಾದಾರ್