Advertisement

ನೀರಿನ ಸಮಸ್ಯೆಯಿಂದ ಜನ ತತ್ತರ

07:37 AM Mar 23, 2019 | Team Udayavani |

ನೆಲಮಂಗಲ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಿರು ಬೇಸಿಗೆಯ ಝಳದಿಂದ ತತ್ತರಿಸುತ್ತಿರುವ ನಾಗರಿಕರು, ನೀರಿನ ಸಮಸ್ಯೆಯಿಂದಾಗಿ ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕು ಕೇಂದ್ರವಾಗಿರುವ ಪಟ್ಟಣ ಪ್ರದೇಶ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ತಾಲೂಕು ವ್ಯಾಪ್ತಿಯಲ್ಲಿ 23 ಗ್ರಾಮ ಪಂಚಾಯತಿಗಳಿವೆ. ಪಟ್ಟಣ ಪುರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ನೀರಿನ ಬವಣೆ ಹೇಳತೀರದಾಗಿದೆ.

Advertisement

ಪಟ್ಟಣದಲ್ಲಿ 2 ದಿನಗಳಿಗೊಮ್ಮ ಆದ್ಯತೆ ಮತ್ತು ಸರತಿಯಂತೆ ನೀರು ಪೂರೈಸಲಾಗುತ್ತಿತ್ತು. ಕೆಲ ವಾರ್ಡ್‌ಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಬೇಸಿಗೆ ಮತ್ತು ಬರದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳು ಏಕಾಏಕಿ ಕೆಟ್ಟುಹೋದರೆ ಮತ್ತು ಅಂತರ್ಜಲದ ಮಟ್ಟ ಕಡಿಮೆಯಾಗಿ ನೀರಿನ ಸಮಸ್ಯೆ ಎಂದುರಾದರೆ ಏನು ಮಾಡುವುದು ಎಂಬ ಆತಂಕ ಕಾಡುತ್ತಿದೆ. 

ಐದು ದಿನಕ್ಕೊಮ್ಮೆ ನೀರು: ಪುರಸಭೆ‌ ವ್ಯಾಪ್ತಿಯಲ್ಲಿ ಸುಮಾರು 138 ಕೊಳವೆಬಾವಿಗಳ ಮೂಲಕ ಪಟ್ಟಣಿಗರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ, ಪ್ರಸ್ತುತ ಬೇಸಿಗೆಯ ಪ್ರಾರಂಭದಲಿಯೇ 20 ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಕೊಳವೆಬಾವಿಗಳು ನಿಷ್ಕ್ರಿಯವಾಗಿವೆ. ಇದರಿಂದಾಗಿ ನೀರು ಸರಬರಾಜನ್ನು 2 ದಿನದ ಬದಲಾಗಿ ನಾಲ್ಕೈದು ದಿನಗಳಿಗೆ ಮುಂದೂಡಲಾಗಿದೆ.

ಪಟ್ಟಣದ ಕೆಇಬಿ ಬಳಿಯ ಪಂಪ್‌ಹೌಸ್‌ನ ಬೃಹತ್‌ ನೀರು ಶೇಖರಣಾ ಘಟಕಗಳ ಮೂಲಕ ಪಟ್ಟಣಕ್ಕೆ ಹಂತಹಂತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. 23, 1, 15, 16, 18ನೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಪ್ರಾರಂಭವಾಗಿದ್ದು, ವಾರ್ಡ್‌ ನಂ. 13 ಮತ್ತು 14ರಲ್ಲಿನ ನಾಗರಿಕರು ಟ್ಯಾಂಕರ್‌ ನೀರಿನ ಮೇಲೆ ಅವಲಂಬಿತರಾಗುವಂತಾಗಿದೆ.

ನೀರಿಗಾಗಿ 50 ಲಕ್ಷ ರೂ. ಮೀಸಲು: ತಾಲೂಕಿನ ಕುಲುವನಹಳ್ಳಿ, ಹೊನ್ನೇನಹಳ್ಳಿ, ಕೊಡಿಗೇಹಳ್ಳಿ ಹಾಗೂ ನರಸೀಪುರ ಗ್ರಾಮಪಂಚಾಯತಿ ವ್ಯಾಪ್ತಿಗಳಲ್ಲಿ ನಾಗರಿಕರ ನೀರಿನ ಬವಣೆಯನ್ನು ನೀಗಿಸಲು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹರಸಾಹಸ ಪಡುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜು ಒಂದು ರೀತಿಯ ಕಣ್ಣಾಮುಚ್ಚಾಲೆ ಆಟದಂತಾಗಿದೆ.

Advertisement

ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಟಾಸ್‌ಫೋರ್ಸ್‌ ಸಭೆಯಲ್ಲಿ ಸುಮಾರು 50ಲಕ್ಷ ರೂ. ಅನ್ನು ನೀರಿನ ವ್ಯವಸ್ಥೆಗಾಗಿ ಮೀಸಲಿಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ಎಸ್‌ಎಫ್ಸಿ ಕುಡಿಯುವ ನೀರು, ಬರ ಪರಿಹಾರ ಯೋಜನೆಯಡಿ 33 ಲಕ್ಷ ರೂ. ಅನ್ನು ಮೀಸಲಿರಿಸಲಾಗಿದೆ. ನೀರಿನ ಬವಣೆಯನ್ನು ನೀಗಿಸಲು  ಆಡಳಿತ ಯಂತ್ರ ಸನ್ನದ್ಧವಾಗಿದೆ ಎನ್ನಲಾಗಿದೆ.

ನೀರಿನ ಸೌಲಭ್ಯ ಕಲ್ಪಿಸಿ: ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ರಾಷ್ಟ್ರೀಯ ಹೆದ್ದಾರಿ 4ಅನ್ನು ದಾಟಿಕೊಂಡು ಖಾಸಗಿಯವರ ಕೊಳವೆಬಾವಿಗಳಲ್ಲಿ ಕಾಡಿಬೇಡಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ತರುವ ಭರದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದರೆ ಏನು ಗತಿ ಎಂಬ ಭಯವೂ ಕಾಡುತ್ತಿದೆ. ಹಾಗಾಗಿ, ಸಂಬಂಧಪಟ್ಟ ಗ್ರಾಪಂ ಸದಸ್ಯರಿಗೆ ಕಿರು ನೀರು ಸರಬರಾಜು ಘಟಕದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಮಗೆ ನೀರು ಕೊಟ್ಟು ಸಹಕರಿಸಿ ಎಂದು ದೊಡ್ಡೇರಿ ಗ್ರಾಮದ ಮಹಿಳೆ ವೆಂಕಟಮ್ಮ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು.

ಪಟ್ಟಣದಲ್ಲಿ ನೀರಿನ ಸಮಸ್ಯೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ವಾರ್ಡ್‌ ನಂ.13 ಮತ್ತು 14ಅನ್ನು ಹೊರತುಪಡಿಸಿ ಬೇರೆಡೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿದ್ದು, ಅವುಗಳನ್ನು ಪರಿಹರಿಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯ 23ವಾರ್ಡ್‌ಗಳಲ್ಲಿ ಹಳೇ ಮಾದರಿ ಪೈಪ್‌ಲೈನ್‌ ಇರುವುದರಿಂದ ಸಮಸ್ಯೆಗಳು ಎದುರಾಗುತ್ತಿವೆ. ಸಾರ್ವಜನಿಕರು ವಿನಾಕಾರಣ ನೀರನ್ನು ಪೋಲು ಮಾಡದೇ ಮಿತವಾಗಿ ಬಳಕೆ ಮಾಡಬೇಕು. ನೈಸರ್ಗಿಕ ಸಂಪತ್ತು ರಕ್ಷಣೆ ಮಾಡಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ.
-ಶಿವಪ್ರಸಾದ್‌, ಮುಖ್ಯಾಧಿಕಾರಿ, ಪುರಸಭೆ, ನೆಲಮಂಗಲ

ತಾಲೂಕಿನ 23 ಗ್ರಾಪಂಗಳ ಪೈಕಿ ನಾಲ್ಕು ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೊಳವೆ ಬಾವಿಗಳ ಸಮಸ್ಯೆಯಿರುವ ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಸಿ ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ.
-ಸಿ.ಪಿ.ಗೋವಿಂದರಾಜು, ತಾಪಂ ಇಒ, ನೆಲಮಂಗಲ  

* ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next