ಭಟ್ಕಳ: ಕೋವಿಡ್ ನಿಂದ ಮುಕ್ತಿ ಪಡೆಯಲು ಲಾಕ್‌ಡೌನ್ ಮಾತ್ರ ಪರಿಹಾರವಾಗಲಾರದು, ಜನತೆ ಸ್ವಯಂ ಪ್ರೇರಿತರಾಗಿ ಜಾಗೃತರಾದಾಗ ಮಾತ್ರ ನಿಯಂತ್ರಣ ಸಾಧ್ಯ ಎಂದು ಡಿಸಿ ಡಾ| ಹರೀಶಕುಮಾರ್ ಹೇಳಿದರು.
ಅವರು ಇಲ್ಲಿನ ನ್ಯೂ ಇಂಗ್ಲಿಷ್ ಶಾಲಾ ಆವರಣದ ರಾಮನಾಥ ಶ್ಯಾನುಭಾಗ ಸಭಾ ಭವನದಲ್ಲಿ ಕೋವಿಡ್ ವಾರಿಯರ್ಸ್ ಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಾವು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದೇವೆ. ಎಲ್ಲಾ ಸೋಂಕಿತರನ್ನು ಗುಣಮುಖರಾಗಿ ಮರಳುವಂತೆ ಮಾಡಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣರಾದವರು ಜಿಲ್ಲೆಯ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಇತರರ ಸಹಕಾರ. ಮುಂದಿನ ದಿನಗಳಲ್ಲಿಯೂ ಕೂಡಾ ಕೋವಿಡ್ ಸೋಂಕು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ ಎಂದರು.
ಕೋವಿಡ್ ಸೋಂಕಿನ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕಾಗುತ್ತದೆ. ನಿಯಮ ಪಾಲನೆ ಮಾಡದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಅನಿವಾರ್ಯ ಎಂದುbಹೇಳಿದರು.
ಸಹಾಯಕ ಆಯುಕ್ತ ಭರತ್ ಎಸ್., ಕೋವಿಡ್ -19 ಸಂದರ್ಭದಲ್ಲಿ ತಾಲೂಕಿನ ಗಲ್ಲಿಗಲ್ಲಿಗಳಲ್ಲಿ ಹೋಗಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಕೂಡಾ ಎಲ್ಲರ ಸಹಕಾರ ಅಗತ್ಯ ಎಂದೂ ಅವರು ಕರೆ ನೀಡಿದರು. ಎಎಸ್‌ಪಿ ನಿಖೀಲ್ ಬಿ. ಮಾತನಾಡಿ, ಸಾರ್ವಜನಿಕವಾಗಿ ನಿಯಮ ಪಾಲನೆಯಲ್ಲಿ ಲೋಪ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಳಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ರವಿಚಂದ್ರ, ಸಿಪಿಐ ದಿವಾಕರ್, ತಾಲೂಕು ಆರೋಗ್ಯಾಧಿಕಾರಿ ಮೂರ್ತಿರಾಜ್ ಭಟ್ಟ, ಪುರಸಭಾ ಮುಖ್ಯಾಧಿಕಾರಿ ದೇವರಾಜು, ತಾಪಂ ಇಒ ಪ್ರಭಾಕರ ಚಿಕ್ಕನಮನೆ, ಆಶಾ, ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.