ರಾಯಚೂರು: ಗ್ರಾಹಕರಿಗೆ ಸದಾ ಕಾಲ ಹಣವಿಲ್ಲ ಎಂಬ ಫಲಕ ತೋರಿಸಿ ಸೇವೆ ಅಲಭ್ಯವಾಗಿರುವ ಎಟಿಎಂಗಳ ತಿಥಿ ಮಾಡುವ ಮೂಲಕ ಜನಾಂದೋಲನಾ ಮಹಾಮೈತ್ರಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಸ್ಟೇಷನ್ ರಸ್ತೆಯಲ್ಲಿ ಎಟಿಎಂ ಎದುರು ಸಾಂಪ್ರದಾಯಬದ್ಧವಾಗಿ ತಿಥಿ ಮಾಡುವ ವಿಧಿ ವಿಧಾನ ನೆರವೇರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಅವೈಜ್ಞಾನಿಕ ಆರ್ಥಿಕ ನೀತಿಗಳು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಿದೆ. ನೋಟು ರದ್ಧತಿ ಹಾಗೂ ಜಿಎಸ್‌ಟಿ ಮೂಲಕ ದೇಶದಲ್ಲಿ ಭಾರಿ ಆರ್ಥಿಕ ಬದಲಾವಣೆ ತರುವುದಾಗಿ ಹೇಳಿದ್ದ ಪ್ರಧಾನಿ, ನೀಡಿದ ಯಾವುದೇ ಭರವಸೆ ಈಡೇರಿಸಲಿಲ್ಲ ಎಂದು ದೂರಿದರು.
ಜನ ತಮ್ಮ ಖಾತೆಗಳಲ್ಲಿ ಇಟ್ಟ ಹಣ ಪಡೆಯಬೇಕಾದರೂ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಎಟಿಎಂಗಳು ಸದಾ ನೋ ಕ್ಯಾಶ್ ಬೋರ್ಡ್ ನೇತು ಹಾಕಿಕೊಂಡಿವೆ. ಇದರಿಂದ ದೈನಂದಿನ ಚಟುವಟಿಕೆ ನಿಭಾಯಿಸಲಾಗದೆ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ದೂರಿದರು.. ಹಳೇ ನೋಟು ರದ್ದತಿ ಹಾಗೂ ಆನ್‌ಲೈನ್ ಹಣ ಚಲಾವಣೆ ಮತ್ತು ಆಧಾರ್ ಜೋಡಣೆ ನಿಜವಾದ ಉದ್ದೇಶ ಬಯಲಾಗಿದೆ. ಜನರು ತಾವು ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿಟ್ಟ ಬ್ಯಾಂಕ್ ಹಣ ಜನರಿಗೆ ಸಿಗುತ್ತಿಲ್ಲ.ರೈತರು ಬೆಳೆದ ಬೆಳೆ ಮಾರಿದರೂ ಹಣವೂ ಬ್ಯಾಂಕ್‌ನಲ್ಲಿ ಸಿಗುತ್ತಿಲ್ಲ ಎಂದು ದೂರಿದರು.
6.5 ಲಕ್ಷ ಕೋಟಿ ಹಣವನ್ನು ತಿರುಗಿ ಬಾರದ ಸಾಲ ಎಂದು ಮನ್ನಾ ಮಾಡಲಾಗಿದೆ. ದೇಶದ ಆರ್ಥಿಕತೆ ಹಾಳು ಮಾಡಿದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು ದೂರಿದರು.
ಜನಾಂದೋಲನಗಳ ಮಹಾಮೈತ್ರಿ ಸದಸ್ಯರಾದ ಡಾ| ವಿ.ಎ. ಮಾಲಿಪಾಟೀಲ, ಜಿ. ಅಮರೇಶ, ಬಿ.ಬಸವರಾಜ, ಎಂ.ಆರ್. ಬೇರಿ, ಭಂಡಾರಿ ವೀರಣ್ಣ ಶೆಟ್ಟಿ, ಖಾಜಾ ಅಸ್ಲಾಂ ಅಹ್ಮದ್, ಜಾನ್ ವೆಸ್ಲಿ, ಕೆ. ರಾಮಕೃಷ್ಣ, ಅಡವಿರಾವ, ಅಡಿವೆಪ್ಪ. ಬಸವರಾಜ, ಗುರುರಾಜ ಇದ್ದರು.