ಕೊಕ್ರಜಾರ್ : ಅಸ್ಸಾಂ ನಲ್ಲಿ ಫುಟ್ಬಾಲ್ ಆಟದ ನಿಯಮದಂತೆ ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಜನರು ‘ರೆಡ್ ಕಾರ್ಡ್’ ತೋರಿಸುವ ಮೂಲಕ ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂ ನ ಬಿಜ್ನಿ ಕೊಕ್ರಜಾರ್ ನಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಹಿಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದ ಬೋಡೋ ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂಕ ಪ್ರೇಕ್ಷಕರಂತೆ ವರ್ತಿಸಿದೆ ಎಂದು ಆರೋಪಿಸಿದ್ದಾರೆ.
ಓದಿ : ಸಿಎಂ ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ: ಸಿದ್ದರಾಮಯ್ಯ ಆಗ್ರಹ
ಕಾಂಗ್ರೆಸ್ ನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಫುಟ್ಬಾಲ್ ಅಸ್ಸಾಂ ನಲ್ಲಿ ಜನಪ್ರಿಯ ಕ್ರೀಡೆ. ಫುಟ್ಬಾಲ್ ನ ನಿಯಮದ ಪ್ರಕಾರ, ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಅಸ್ಸಾಂ ಜನರು ರೆಡ್ ಕಾರ್ಡ್ ನ್ನು ತೋರಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಎನ್ ಡಿ ಎ ನೇತೃತ್ವದ ಪಕ್ಷಕ್ಕೆ ಜನರು ಬೆಂಬಲಿಸಿದ್ದಾರೆ ಎಂದಿದ್ದಾರೆ.
ಬೋಡೋ ಪ್ರದೇಶದ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಬೋಡೋ ವಿಚಾರವಾಗಿ ಕಾಂಗ್ರೆಸ್ ಏನೇನೂ ಮಾಡಿಲ್ಲ. ತನ್ನ ಆಡಳಿತದ ಸುದೀರ್ಘ ಅವಧಿಗಳಲ್ಲಿ ಕಾಂಗ್ರೆಸ್ ಬೋಡೋ ಅನ್ನು ಬಾಂಬ್, ಗನ್ ಮತ್ತು ಹಿಂಸಾಚಾರದ ಸಂಸ್ಕೃತಿಯ ತವರನ್ನಾಗಿ ಮಾಡಿದೆ. ಆದರೇ, ಎನ್ ಡಿ ಎ ನೇತೃತ್ವದ ಸರ್ಕಾರ ಬೋಡೋ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸುವಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದ್ದಾರೆ.
ಇನ್ನು, ಲೋಕಸಭಾ ಸಂಸದ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಜೊತೆಗಿನ ಮೈತ್ರಿ ಕುರಿತು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, “ತಲಾ-ಚಾಬಿ ವೇಲ್” ಗೆ ಮೊದಲು ಕಾಂಗ್ರೆಸ್ ಪಕ್ಷ ಶರಣಾಗಿದೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟಕ್ಕೆ ಚುನಾವಣೆಯಲ್ಲಿ ತಕ್ಕ ಪಾಠವಾಗಲಿದೆ ಎಂದು ಹೇಳಿದ್ದಾರೆ.
“ಬೋಡೋ ಪ್ರದೇಶಗಳಲ್ಲಿ ಶಾಂತಿ, ಪ್ರಗತಿ ಮತ್ತು ರಕ್ಷಣೆ ನಮ್ಮ ಮೂಲ ಮಂತ್ರವಾಗಿದೆ” ಎಂದು ಅವರು ಹೇಳಿದ್ದಾರೆ.
ಓದಿ : ಪಿಪಿಎಫ್ ಮೇಲಿನ ಬಡ್ಡಿದರಗಳ ಕಡಿತ ವಾಪಸ್ ಪಡೆದ ಕೇಂದ್ರ ..!