ಕೊಪ್ಪಳ: ಇಡೀ ದೇಶವನ್ನೇ ಕೋವಿಡ್ ಮಹಾಮಾರಿ ಆವರಿಸಿದೆ. ಇದರ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಾಗಿದ್ದು, ಜನರು ಅಂಗಡಿ-ಮುಂಗಟ್ಟುಗಳ ಮುಂದೆ ಅಳವಡಿಸುವ ಸ್ಯಾನಿಟೈಸರ್‌ನಿಂದ ಕೈಗಳನ್ನು ಶುಚಿಯಾಗಿ ತೊಳೆದುಕೊಂಡು ಜಾಗೃತಿ ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.
ನಗರದ ಅಂಗಡಿ, ಹೋಟೆಲ್ ಮಾಲೀಕರಿಗೆ ಸ್ಯಾನಿಟೈಸರ್ ಹಾಗೂ ಸ್ಟ್ಯಾಂಡ್ ವಿತರಿಸಿ ಅವರು ಮಾತನಾಡಿದರು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕೊಪ್ಪಳದ ಹೋಟೆಲ್ ಮತ್ತು ಅಂಗಡಿಗಳಿಗೆ ಸ್ಯಾನಿಟೈಸರ್ ಬಳಸುವ ಸ್ಟಾಂಡ್ ವಿತರಣೆಗೆ ಚಾಲನೆ ನೀಡಿದೆ. ಇಂದು ದೇಶಾದ್ಯಂತ ಕೋವಿಡ್ ತಾಂಡವಾಡುತ್ತಿದೆ. ದೇಶ ಆರ್ಥಿಕತೆ ಸಂಕಷ್ಟತೆ ಎದುರಿಸುತ್ತಿದೆ. ಇಂತಹ ಸಂಕಷ್ಟದಲ್ಲೂ ಪ್ರಧಾನಿ ನರೇಂದ್ರ ಮೋಜಿ ಹಲವು ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಜನರ ಹಿತ ಕಾಪಾಡುತ್ತಿದ್ದಾರೆ. ಅವರ ಶ್ರಮಕ್ಕೆ ದೇಶದ ಜನತೆ ಕೈಜೋಡಿಸಿ ಬೆಂಬಲ ನೀಡಬೇಕಿದೆ ಎಂದರು.
ರಾಜ್ಯದಲ್ಲೂ ಸಿಎಂ ಬಿ.ಎಸ್. ಯಡಿಯೂರಪ್ಪ ಕೋವಿಡ್ ವಿರುದ್ಧದ ಹೋರಾಟಕ್ಕೆ ಕಟಿಬದ್ಧರಾಗಿ ಶ್ರಮಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲೂ ನಾವುಗಳು ಕೋವಿಡ್ ವಿರುದ್ಧ ಹೋರಾಡುತ್ತಿದ್ದೇವೆ. ಜನತೆ ಅನಾವಶ್ಯಕವಾಗಿ ಹೊರಗಡೆ ಹೋಗದೇ ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುತ್ತಮುತ್ತಲಿನ ಗ್ರಾಮಗಳಿಂದ ನಗರಕ್ಕೆ ಬರುವ ಜನರಿಗೆ ಅಂಗಡಿ ಮಾಲೀಕರು, ವರ್ತಕರು, ಹೋಟೆಲ್, ಸಂಘ-ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಜಾಗೃತಿ ಮೂಡಿಸಬೇಕಿದೆ ಎಂದರು.
ಪ್ರಸ್ತುತ ಸರ್ಕಾರ, ಅಧಿಕಾರಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು, ಡಾಕ್ಟರ್, ನರ್ಸ್, ಅಂಗನವಾಡಿ ಶಿಕ್ಷಕಿಯರು, ಮಾಧ್ಯಮ ಮಿತ್ರರು ಸೇರಿ ಹಲವರು ಕೋವಿಡ್ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಅವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಇಂದಿನಿಂದ ನಗರದ ಎಲ್ಲ ಅಂಗಡಿ-ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ ಮಾಡಲಿ; ಜನರು ಸುರಕ್ಷಿತವಾಗಿರಲಿ ಎಂದು ಸ್ಯಾನಿಟೈಸರ್ ಮತ್ತು ಸ್ಟ್ಯಾಂಡ್‌ಗಳನ್ನು ವಿತರಿಸುತ್ತಿದ್ದೇವೆ ಎಂದರು.
ಈ ವೇಳೆ ಡಾ. ಲಿಂಗರಾಜ ಶಿವರೆಡ್ಡಿ, ಡಾ. ಶ್ರೀನಿವಾಸ ಹ್ಯಾಟಿ, ಹಾಲೇಶ ಕಂದಾರಿ, ದೇವರಾಜ ಹಾಲಸಮುದ್ರ, ಅರವಿಂದ್ ಜೈನ್, ಉಮೇಶ ಕುರುಡೇಕರ್, ಪ್ರವೀಣ ಇಟಗಿ, ವೆಂಕಟೇಶ ಹವಳೆ, ಹನು ಕಲೆಗಾರ, ವಿಠಲ ಕಟ್ಟಿಮನಿ, ಶಿವಕುಮಾರ ಹಿರೇಮಠ, ಮೆಹಬೂಬ್, ಲೋಕೇಶ, ಅಂಬರೀಶ, ಗವಿಸಿದ್ದಪ್ಪ ಗದಗಿನಮಠ, ರಂಗಪ್ಪ, ಅಕ್ಷಯ ಜ್ಞಾನಮೂರ್ತಿ ಸೇರಿದಂತೆ ಪಕ್ಷದ ಹಿರಿಯರು ಕಾರ್ಯಕರ್ತರು ಇದ್ದರು.