Advertisement

ಜನರಿಗೆ ಕಾನೂನು ತಿಳಿವಳಿಕೆ ಅಗತ್ಯ

04:25 PM Dec 06, 2018 | Team Udayavani |

ರಾಮದುರ್ಗ: ಅತಿಯಾದ ಮೊಬೈಲ್‌ ಬಳಕೆ ಹಾಗೂ ಚಲನಚಿತ್ರಗಳ ಪ್ರಭಾವಕ್ಕೆ ಒಳಗಾಗಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಾದಿ ತಪ್ಪುತ್ತಿರುವ ಯುವ ಸಮುದಾಯಕ್ಕೆ ಕಾನೂನು ಅರಿವು ಮೂಡಿಸುವ ಅಗತ್ಯವಿದೆ ಎಂದು ಹಿರಿಯ ದಿವಾಣಿ ನ್ಯಾಯಾ ಧೀಶ ಮಲ್ಲಿಕಾರ್ಜುನ ಅಂಬ್ಲಿ ಹೇಳಿದರು.

Advertisement

ಬಸವೇಶ್ವರ ಸಂಯುಕ್ತ ಪ.ಪೂ ಮಹಾವಿದ್ಯಾಲಯದಲ್ಲಿ ಪೊಲೀಸ್‌ ಇಲಾಖೆ, ತಾಲೂಕು ಕಾನೂನು ನೆರವು ಸಮಿತಿ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರತಿಯೊಬ್ಬರಿಗೂ ಕಾನೂನು ತಿಳಿವಳಿಕೆ ಅಗತ್ಯವಿದ್ದು, ಮನೆಯಿಂದಲೇ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು. ಸದೃಢ ಸಮಾಜ, ದೇಶ ನಿರ್ಮಾಣಕ್ಕೆ ಯುವ ಜನರಿಗೆ ಕಾನೂನು ಅರಿವು ಅಗತ್ಯ ಎಂದ ಅವರು ಕಾನೂನು ಉಲ್ಲಂಘನೆ ಸಲ್ಲದು ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶ ಶಿವಕುಮಾರ ದೇಶಮುಖ ಮಾತನಾಡಿ, ಮನೆಯಲ್ಲಿ ಪಾಲಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಕನಿಷ್ಠ ಕಾನೂನು ಕುರಿತು ತಿಳಿವಳಿಕೆ ನೀಡುವ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಸಹಾಯಕ ಸರಕಾರಿ ಅಭಿಯೋಜಕ ಅಮೀನಸಾಬ ಕಲಾದಗಿ ಮಾತನಾಡಿ, ಸರ್ಕಾರ ಅಪರಾಧ ತಡೆಯುವ ನಿಟ್ಟಿನಲ್ಲಿ ರಾಜ್ಯದ ಕಾನೂನು ಇಲಾಖೆ ಮೂಲಕ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಪ್ರಯೋಜನ ಪಡೆಯುವಂತೆ ತಿಳಿಸಿದರು. ಡಿವೈಎಸ್‌ಪಿ ಬಿ.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಪರಾಧ ನಡೆದ ನಂತರ ಅಪರಾಧಿ ಪತ್ತೆ ಮಾಡಿ ಶಿಕ್ಷೆ ನೀಡಲು ಪ್ರಯತ್ನಿಸುವ ಬದಲು ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರೆ ಅಪರಾಧಗಳ ಸಂಖ್ಯೆ ಇಳಿಮುಖವಾಗಲು ಸಾಧ್ಯ ಎಂದರು. ಸಿಪಿಐ ಶ್ರೀನಿವಾಸ ಹಂಡಾ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಜಿ. ವಜ್ಜರಮಟ್ಟಿ, ಹೆಸ್ಕಾಂ ಎಇಇ ರಾಮಕೃಷ್ಣ ಗುಣಗಾ ಮಾತನಾಡಿದರು. ಸಾರಿಗೆ ಘಟಕದ ವ್ಯವಸ್ಥಾಪಕ ನವೀನಕುಮಾರ ತಿಪ್ಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಕೃಷ್ಣಾ ಹೊಸೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಂಗಲಾ ಕಳಸಪ್ಪನವರ ನಿರೂಪಿಸಿದರು.

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಗೋಕಾಕ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಹೆಚ್ಚಿನ ಸಮಯವನ್ನು ಓದು-ಬರಹದ ಕಡೆಗೆ ಗಮನ ಹರಿಸಿ ಸಾಧನೆ ಮಾಡಬೇಕು ಎಂದು ಗೋಕಾಕ ಉಪವಿಭಾಗದ ಡಿವೈಎಸ್‌ಪಿ ಪ್ರಭು ಡಿ.ಟಿ. ಹೇಳಿದರು. ನಗರದ ಸರ್ಕಾರಿ ಪ.ಪೂ. ಮಹಾವಿದ್ಯಾಲಯದಲ್ಲಿ ಗೋಕಾಕ ನಗರ ಠಾಣೆ ಹಾಗೂ ಸರ್ಕಾರಿ ಪ.ಪೂ. ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ ಗಳ ಬಳಕೆಯಿಂದ ಯುವ ಜನಾಂಗ ಹಾಳಾಗುತ್ತಿದೆ. ಅಲ್ಲದೇ ಸೈಬರ್‌ ಕ್ರೈಂ ನಂತಹ ಅಪರಾಧಗಳಲ್ಲಿ ತಮಗೆ ತಿಳಿದೂ ಅಥವಾ ತಿಳಿಯದೇ ಪಾಲ್ಗೊಳ್ಳುತ್ತಿದ್ದಾರೆ. ಇವುಗಳಿಂದ ದೂರ ಉಳಿದು ಉತ್ತಮ ಜೀವನದತ್ತ ಗಮನ ಹರಿಸಬೇಕು ಎಂದರು. ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎ.ವೈ. ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ನಗರ ಠಾಣೆಯ ಪಿಎಸ್‌ಐ ಗುರುನಾಥ ಚವ್ಹಾಣ, ಗ್ರಾಮೀಣ ಠಾಣೆಯ ಪಿಎಸ್‌ಐ ಪ್ರದೀಪ ತಳಗೇರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next