Advertisement

ಅಂಗಾಂಗ ದಾನದ ಬಗ್ಗೆ ಜನ ಜಾಗೃತಿ ಅಗತ್ಯ

12:16 PM May 09, 2017 | |

ಬೆಂಗಳೂರು: ಕಣ್ಣು, ಕಿಡ್ನಿ, ಹೃದಯ, ಯಕೃತ್ತು ಇತ್ಯಾದಿ ಅಂಗಗಳ ದಾನದ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆ ದೂರಮಾಡಿ, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ರಾಜ್ಯಪಾಲ ವಜುಭಾಯಿ ರೂಢಭಾಯಿ ವಾಲಾ ಕರೆ ನೀಡಿದರು.

Advertisement

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಸೋಮವಾರ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆ ಮತ್ತು ಕರ್ನಾಟಕ ರೆಡ್‌ಕ್ರಾಸ್‌ ರಕ್ತನಿಧಿಯ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರ ಅಂಗಾಂಗ ದಾನದ ಬಗ್ಗೆ ಅನೇಕರಲ್ಲಿ ಇಂದಿಗೂ ತಪ್ಪು ಕಲ್ಪನೆ ಇದೆ. ಬಡ ರೋಗಿಗಳಿಗೆ ಕಷ್ಟದ ಸಮಯದಲ್ಲಿ ರಕ್ತ ಸಿಗದೇ ನರಳಾಡುವ ಪರಿಸ್ಥಿತಿಯೂ ಇದೆ. ರಕ್ತ ದಾನ ಹಾಗೂ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಶಾಖೆಯ ಸಭಾಪತಿ ಬಸೂರ್‌ ರಾಜೀವ್‌ ಶೆಟ್ಟಿ ಮಾತನಾಡಿ, 30 ಜಿಲ್ಲೆಗಳಲ್ಲೂ ರೆಡ್‌ಕ್ರಾಸ್‌ ಸದಸ್ಯರ ಸಂಖ್ಯೆ ದ್ವಿಗುಣಗೊಳಿಸಲು ಯೋಜನೆ ರೂಪಿಸಿದ್ದೇವೆ. ತಾಲೂಕುಗಳಲ್ಲಿ ಹೊಸ ರೆಡ್‌ಕ್ರಾಸ್‌ ಘಟಕ ಪ್ರಾರಂಭಿಸಲಾಗುತ್ತಿದೆ. ರಾಜ್ಯದಲ್ಲಿ 9 ಬ್ಲಿಡ್‌ ಬ್ಯಾಂಕ್‌ಗಳಿದ್ದು, ಅದನ್ನು 21ಕ್ಕೆ ಏರಿಸಲಾಗುವುದು. ರಕ್ತ ಸಂಗ್ರಹಣಾ ಘಟಕಗಳ ಸಂಖ್ಯೆಯನ್ನು 30ರಿಂದ 60ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಕಾರ್ಯಗಾರ ನಡೆಸಿಕೊಟ್ಟ ರೆಡ್‌ಕ್ರಾಸ್‌ ಶಾಖೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎನ್‌.ಆರ್‌. ಶೆಟ್ಟಿ, ಉಪ ಸಭಾಪತಿ ಅಪ್ಪಾರಾವ್‌ ಅಕ್ಕೋಣೆ, ಪ್ರಧಾನ ಕಾರ್ಯದರ್ಶಿ ಎಸ್‌. ಅಶೋಕ್‌ ಕುಮಾರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ರಕ್ತ ಸಂಗ್ರಹದಲ್ಲಿ ಗಿನ್ನೆಸ್‌ ದಾಖಲೆ
2016-17ನೇ ಸಾಲಿನಲ್ಲಿ ನಡೆದ ಅಂತಾರಾಷ್ಟ್ರೀಯ ಸೃಜನಶೀಲತೆ ಉತ್ಸವದ ಸ್ಪರ್ಧೆಯಲ್ಲಿದ್ದ 50 ಲಕ್ಷ ಆ್ಯಪ್‌ಗ್ಳ ಪೈಕಿ ರೆಡ್‌ಕ್ರಾಸ್‌ ಸಂಸ್ಥೆಯ “ಬ್ಲಿಡ್‌ ಬ್ಯಾಂಕಿಂಗ್‌’ ಹೆಸರಿನ ಆ್ಯಪ್‌ “ಡಿಸ್ಯಾನ್‌ ಲಯನ್ಸ್‌ ಸಿಲ್ವರ್‌’ ಪ್ರಶಸ್ತಿ ಪಡೆದಿದೆ. ಹಾಗೇ ರೋಟರಿ ಜಿಲ್ಲೆ ಕಳೆದ ವರ್ಷ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ರೆಡ್‌ ಕ್ರಾಸ್‌ ಸಂಸ್ಥೆ, ಆರೋಗ್ಯ ಪಾಲುದಾರನಾಗಿ 15 ವಿವಿಧ ಸಂಸ್ಥೆಗಳಲ್ಲಿ 8 ಗಂಟೆಯಲ್ಲಿ 3034 ಯೂನಿಟ್‌ ರಕ್ತವನ್ನು ದಾನಿಗಳಿಂದ ಸಂಗ್ರಹಿಸಿ ಗಿನ್ನೆಸ್‌ ದಾಖಲೆ ನಿರ್ಮಿಸಿದೆ. ಈ ಗೌರವವನ್ನು ರಾಜ್ಯಪಾಲರು ಅಧಿಕೃತವಾಗಿ ಕರ್ನಾಟಕ ರಾಜ್ಯಶಾಖೆ ಸಭಾಪತಿ ಬಸೂÅರ್‌ ರಾಜೀವ್‌ ಶೆಟ್ಟಿಗೆ ಹಸ್ತಾಂತರಿಸಿದರು.

Advertisement

ಅಂಗಾಂಗ ದಾನದ ಮೂಲಕ ಇನ್ನೊಬ್ಬರ ಬದುಕಿಗೆ ಬೆಳಕಾಗಬಹುದು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಜತೆಗೆ ಅಂಗಾಂಗ ದಾನದ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು.
-ವಜುಭಾಯಿ ವಾಲಾ, ರಾಜ್ಯಪಾಲ

Advertisement

Udayavani is now on Telegram. Click here to join our channel and stay updated with the latest news.

Next