Advertisement

ಈಶ್ವರಪ್ಪ, ಡಿಕೆಶಿ ಅವರಂಥವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರಿಸಲ್ಲ: ಮುಖ್ಯಮಂತ್ರಿ ಚಂದ್ರು

05:40 PM Mar 27, 2023 | Team Udayavani |

ವಿಜಯಪುರ: ದೆಹಲಿಯಲ್ಲಿ ಎರಡು ಬಾರಿ ಹಾಗೂ ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿ ಅದ್ಭುತ ಸಾಧನೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ, ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದಾಗ ಸಾಮಾನ್ಯ ಶಾಸಕನೇ ಮುಖ್ಯಮಂತ್ರಿ ಆಗಲಿದ್ದಾನೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

Advertisement

ಸೋಮವಾರ ನಗರದಲ್ಲಿ ಹಾಸಿಂಪೀರ ವಾಲೀಕಾರ ಕಾಂಗ್ರೆಸ್ ತೊರೆದು ಆಪ್ ಸೇರ್ಪಡೆ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ತಿರಸ್ಕೃತರಾದ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂಥವರು ನಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಿತ್ತಾಡಿಕೊಳ್ಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಂಥ ಸಮರ್ಥ ನಾಯಕರು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡರೆ ಅರ್ಥ ಇರುತ್ತದೆ ಎಂದರು.

ಆಡಳಿತ ಜನವಿರೋಧಿ ಅಲೆ ಇದ್ದರೂ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಹವಣಿಸುತ್ತಿದ್ದಾರೆ. ಇಂಥವರ ಮಧ್ಯೆ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಾಮಾನ್ಯ ಶಾಸಕ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಲಿದ್ದಾರೆ ಎಂದರು.

ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ನೋಡಿರುವ ಜನರು, ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಜೆಡಿಎಸ್ ಪಕ್ಷದ ಸ್ಥಿತಿಯನ್ನೂ ನೋಡಿದ್ದಾರೆ. ಹೀಗಾಗಿ ಮೂರನೇ ಶಕ್ತಿಯ ನಿರೀಕ್ಷೆಯಲ್ಲಿರುವ ಕರ್ನಾಟಕದ ಜನರಿಗೆ ಆಮ್ ಆದ್ಮಿ ಪಕ್ಷ ಆಶಾಕಿರಣವಾಗಿದೆ ಎಂದರು.

ಚುನಾವಣೆಯ ಈ ಹಂತದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ನಮ್ಮ ಮಾತುಗಳು ಕೆಲವರಿಗೆ ಭ್ರಮೆ ಎನಿಸಬಹುದು. ಆದರೆ ರಾಜ್ಯದಲ್ಲಿ 1983 ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದದ್ದು ಇದೇ ರೀತಿಯ ಗೌಪ್ಯ ಅಲೆಯಲ್ಲೇ. ದೆಹಲಿಯಲ್ಲಿ ಕೇಜ್ರಿವಾಲ ನೇತೃತ್ವದ ಸರ್ಕಾರ ಮಾತ್ರವಲ್ಲ ಪಂಜಾಬ್‍ನಲ್ಲೂ ಇದೇ ರೀತಿ ಬೂದಿ ಮುಚ್ಚಿದ ಸ್ಥಿತಿ ಇತ್ತು. ಆದರೂ ಪಂಜಾಬ್ ರಾಜ್ಯದ ಮತದಾರ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಿರುವುದು ದೇಶದ ಜನರ ಕಣ್ಮುಂದಿದೆ. ಹೀಗಾಗಿ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.

Advertisement

ಪಕ್ಷದಲ್ಲಿ ಭ್ರಷ್ಟರಿಗೆ ಪ್ರವೇಶ ಇಲ್ಲ ಎಂಬುದನ್ನು ವಾಸ್ತವಿಕವಾಗಿ ಅನುಷ್ಠಾನಕ್ಕೆ ತಂದ ಆಪ್ ಪಕ್ಷ, ಪಂಜಾಬ್ ರಾಜ್ಯದಲ್ಲಿ ತನ್ನ ಸಚಿವ ಭ್ರಷ್ಟಾಚಾರ ಮಾಡಿದ್ದರಿಂದ ಜೈಲಿಗೆ ಹಾಕಿಸಿದ್ದು ಆಪ್ ಪಕ್ಷ. ಆದರೆ ರಾಜ್ಯದಲ್ಲಿ ಲಕ್ಷಾಂತರ ಹಣ ಲಂಚ ಪಡೆದ ಆರೋಪದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮುಖ್ಯಮಂತ್ರಿ ಮನೆ ಮುಂದೆ ಓಡಾಡಿಕೊಂಡಿದ್ದ. ಕೋಟಿ ಕೋಟಿ ರೂ. ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇದು ಭ್ರಷ್ಟಾಚಾರದ ಕುರಿತು ಮಾತನಾಡುರವ ರಾಷ್ಟ್ರೀಯ ಪಕ್ಷಗಳ ನೈಜ ಸ್ಥಿತಿ ಎಂದು ಕಿಡಿ ಕಾರಿದರು.

ನೋಟು ಎಣಿಸುವ ಯಂತ್ರವನ್ನೇ ಇಟ್ಟುಕೊಂಡಿರುವ ಈಶ್ವರಪ್ಪ ಅವರಂಥ ನಾಯಕರನ್ನು, ಡಿ.ಕೆ.ಶಿವಕುಮಾರ ಅವರಂಥವರು ಎಷ್ಟೇ ದೊಡ್ಡವರಾಗಿದ್ದರೂ ಆಮ್ ಆದ್ಮಿ ಪಕ್ಷ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ. ಹಣಕ್ಕಿಂತ ಜನಸಾಮಾನ್ಯರ ಮಧ್ಯೆ ಗುಣದಿಂದ ವ್ಯವಹರಿಸುವ ಸಚ್ಚಾರಿತ್ರ್ಯವಂತರಿಗೆ ಪಕ್ಷದಲ್ಲಿ ಅವಕಾಶವಿದೆ ಎಂದರು.

ಇನ್ನು ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರರಾವ್ ಅವರು ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷವನ್ನು ಭ್ರಷ್ಟಾಚಾರಿಗಳೆಂದು ಬೈದುಕೊಂಡೇ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದನ್ನು ರಾಜ್ಯದ ಜನರು ನೋಡಿದ್ದಾರೆ. ಆದರೆ ಪಕ್ಷದ ರಾಜ್ಯಾಧ್ಯಕ್ಷರಾಗುವ ಹಾಗು ದಿಢೀರ್ ಮುಖ್ಯಮಂತ್ರಿ ಆಗುವ ಆತುರದಲ್ಲಿದ್ದ ಅವರಿಗೆ ಇಲ್ಲಿ ಸರಿಹೋಗಿರಲಿಕ್ಕಿಲ್ಲ. ಹೀಗಾಗಿ ತಾವು ಭ್ರಷ್ಟರೆಂದು ಬೈದುಬಂದಿದ್ದ ಬಿಜೆಪಿ ಪಕ್ಷಕ್ಕೆ ಹೋಗಿರುವುದು ಬಿಟ್ ಕಾಯಿನ್ ಹಗರಣದಲ್ಲಿ ಸಿಬಿಐ ಭಯದಿಂದ ಇರಬೇಕು ಎಂದು ಕುಟುಕಿದರು.

ರಾಜ್ಯದಲ್ಲಿ ಈಗಾಗಲೇ 80 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಶೀಘ್ರವೇ ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಿದ್ದೇವೆ. ಗೆಲ್ಲುವ ಸಾಮಥ್ರ್ಯ ಇರುವ ಹಾಗೂ ಸಾಮಾಜಿಕ ನ್ಯಾಯವನ್ನು ಗಮನದಲ್ಲಿ ಇರಿಸಿಕೊಂಡು ಸಚ್ಚಾರಿತ್ರ್ಯ ಇರುವರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಪೂರ್ವ ಹೊಂದಾಣಿಕೆ ಪರಿಸ್ಥಿತಿ ಇಲ್ಲ. ಆದರೆ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ನಮ್ಮ ಪಕ್ಷ, ರಾಷ್ಟ್ರೀಯ ರಾಜಕೀಯ ಧೃವೀಕರಣದ ಹಂತದಲ್ಲಿ ಇಂಥ ಚರ್ಚೆ ನಡೆದರೆ ಅಚ್ಚರಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next