ಹುಣಸಗಿ: ಕೃಷಿ ಕೂಲಿಕಾರ್ಮಿಕರು ಹಿಂಗಾರು ಹಂಗಾಮಿನಲ್ಲಿ ನಿರಂತರ ಕೆಲಸ ದೊರಕದ ಪರಿಣಾಮ ಬಹುತೇಕ ಕಾರ್ಮಿಕರು ಪುಣೆ, ಸೊಲ್ಲಾಪುರ ಸಿಟಿಗಳಿಗೆ ಗುಳೆ ಹೊರಡುತ್ತಿದ್ದಾರೆ. ಹುಣಸಗಿ ತಾಲೂಕಿನ ಗುಂಡಲಗೇರಿ ಗ್ರಾಮದ 15 ಹೆಚ್ಚು ಕುಟುಂಬಗಳು ಹೊಟ್ಟೆಪಾಡಿಗಾಗಿ ಪುಣೆಗೆ ಗುಳೆ ಹೋಗಿವೆ. ಊರಲ್ಲಿ ಕೆಲಸವಿಲ್ಲ. ಇಲ್ಲಿ ಇದ್ರೆ ಜೀವನ ನಡೆಯೋದಿಲ್ಲ ಎಂದು ಗುಳೆ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಉದ್ಯೋಗ ಖಾತ್ರಿಯೂ ಇಲ್ಲ
ಕಾರ್ಮಿಕರಿಗೆ ಉದ್ಯೋಗ ಖಾತ್ರಿಯೋಜನೆಯಲ್ಲಿ ಕೆಲಸವೂ ಸಿಗುತ್ತಿಲ್ಲ. ಇದು ಅಲ್ಲದೆ ನರೇಗಾ ಉದ್ಯೋಗ ಚೀಟಿಯೂ ಮಾಡಿಸಿಕೊಂಡಿಲ್ಲ. ಹಾಗೇ ಈ ಬಾರಿ ಎಡದಂಡೆ ಕಾಲುವೆಗೆ ನೀರಿನ ಅಭಾವ ಬೇರೆ. ಹಿಂಗಾರಿನಲ್ಲಿ ನಷ್ಟವೇ ಜಾಸ್ತಿ. ಉದ್ಯೋಗವೂ ಕಡಿಮೆ ಇದರಿಂದಾಗಿ ಕೂಲಿಗಾಗಿ ಪುಣೆಗೆ ಹೊರಟಿದ್ದೇವೆಂದು ಭೀಮಣ್ಣ, ರುದ್ರಪ್ಪ, ಗಂಗಪ್ಪ ಸೇರಿದಂತೆ ಕಾರ್ಮಿಕರು ಹೇಳಿದ್ದಾರೆ.
ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ವ್ಯವಸಾಯದಲ್ಲಿ ನಿರಂತರ ಕೃಷಿ ಚಟುವಟಿಕೆ ನಡೆಯುತ್ತಿದ್ದವು. ಈ ಬಾರಿ ಪ್ರಕೃತಿ ವಿಕೋಪದಿಂದ ನಷ್ಟವಾಗಿದೆ. ಅಲ್ಲದೆ ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ವಿರಳ ಆಗಲಿದೆ. ಹೀಗಾಗಿ ಮನೆಯಲ್ಲಿ ಕುಳಿತರೆ ಜೀವನ ಸಾಗಲ್ಲ. ಗುಳೆ ಹೋಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎನ್ನುತ್ತಾರೆ ಗುಳೆ ಜನ.
ಕಾರಣ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸುವಂತಹ ದೊಡ್ಡ ಕಂಪೆನಿ ಇಲ್ಲಿಲ್ಲ. ಈಗಾಗಲೇ ನರೇಗಾ ಇದ್ದರೂ ಕಾರ್ಮಿಕರಿಗೆ ವರದಾನವಾಗುತ್ತಿಲ್ಲ. ಕೆಲಸವೂ ಗ್ಯಾರಂಟಿ ಇಲ್ಲ. ಅಧಿಕಾರಿಗಳು ನಿಜವಾದ ಕೂಲಿಕಾರ್ಮಿಕರಿಗೆ ಉದ್ಯೋಗ ಚೀಟಿ ನೀಡಿ ನಿರಂತರ ಕೆಲಸ ಸೃಷ್ಟಿಸುವ ಗೋಜಿಗೆ ಮುಂದಾಗಿಲ್ಲ. ಹೀಗಾಗಿ ಇದೊಂದು ನಿದರ್ಶನ ಎನ್ನಲಾಗುತ್ತಿದೆ.
ಬಡಜನರ ಜೀವನ ಸುಧಾರಿಸಲು ಹಾಗೂ ಗುಳೆ ಹೋಗುವುದು ತಪ್ಪಿಸಲು ಈ ಭಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚು ದುಬಾರಿ ಕೂಲಿ ಮತ್ತು ಉದ್ಯೋಗ ಸೃಷ್ಟಿಗೆ ಮುಂದಾಗಬೇಕಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಕೆಲಸ ಕೊಡಲು ಸಿದ್ಧರಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಉದ್ಯೋಗ ಖಾತ್ರಿ ಕೆಲಸ ಕುರಿತು ಪ್ರಚಾರ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುತ್ತೇನೆ.
–ಪ್ರಕಾಶ ದೇಸಾಯಿ, ತಾಪಂ ಇಒ ಹುಣಸಗಿ
ಕಾರ್ಮಿಕರಿಗೆ ಉದ್ಯೋಗ ದೊರಕಿಸುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆ ಇದೆ. ಬಡವರಿಗೆ ಕೆಲಸ ಸಿಗದೇ ಇರುವುದು ನೋವಿನ ಸಂಗತಿ. ಕಾರ್ಮಿಕರಿಗೆ ಖಾತ್ರಿಯಲ್ಲಿ ಕೆಲಸ ನೀಡಬೇಕು. ಗುಳೆ ಹೋಗುವುದನ್ನು ತಪ್ಪಿಸಬೇಕು. ಜನರ ಶ್ರೇಯೋಭಿವೃದ್ಧಿಗೆ ತಾಲೂಕಾಡಳಿತ ಮುಂದಾಗಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರ ಬದುಕು ಹದಗೆಟ್ಟಿದೆ.
–ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರು ಸುರಪುರ
-ಬಾಲಪ್ಪ.ಎಂ. ಕುಪ್ಪಿ