Advertisement
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಅಂಬರೀಶ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಅಂಬರೀಶ್ ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ನಾನು ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಜಿಲ್ಲೆಯ ಪ್ರತಿಯೊಬ್ಬ ಮತದಾರನಿಗೂ ಗೊತ್ತಿದೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು. ಅವರು ಎಂದೂ ಪ್ರಚಾರಕ್ಕೋಸ್ಕರ ಕೆಲಸ ಮಾಡಿದರವರಲ್ಲ. ಅವರ ಸಾಧನೆಗಳನ್ನು ಅವರ ಕೆಲಸಗಳೇ ಹೇಳುತ್ತವೆ. ಅವರ ಸಾಧನೆಗಳು ಏನು ಎಂಬುದಕ್ಕೆ ಜನತೆ ಈ ಬಾರಿಯ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ ಎಂದು ಹೇಳಿದರು.
Related Articles
Advertisement
ಅಭಿಮಾನಿಗಳ ಮೇಲೆ ಹೊಂದಿದ್ದ ಪ್ರೀತಿಯಂತೆ ಅವರ ಮಾರ್ಗದಲ್ಲಿಯೇ ಅಭಿಮಾನಿಗಳನ್ನು ಉಳಿಸಿಕೊಳ್ಳುತ್ತೇನೆ, ಅಂಬಿ ಸ್ವಭಾವ, ವ್ಯಕ್ತಿತ್ವ ಇತರೆ ಯಾವುದೇ ರಾಜಕಾರಣಿಗಳಿಗೂ ಇಲ್ಲ, ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದರು. ನನ್ನ ಮುಂದಿನ ತೀರ್ಮಾನ ನಿಮ್ಮಗಳ ಆಶಯದಂತೆ, ಆದ್ದರಿಂದ ನಿಮ್ಮೆಲ್ಲರ ಆಶೀರ್ವಾದ ನನಗೆ ಅವಶ್ಯವೆಂದು ಸುಮಲತಾ ಕಾರ್ಯಕರ್ತರಲ್ಲಿ ಕೈಮುಗಿದು ಮನವಿ ಮಾಡಿದರು.
ಬೆಂಬಲಕ್ಕೆ ನಿಂತ ಕೈ ಕಾರ್ಯಕರ್ತರು: ಸುಮಲತಾ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೆ ಸಂತೋಷ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಸುಮಲತಾರನ್ನು ಒತ್ತಾಯಿಸಿದರು. ನೀವು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಸರಿ, ಆದರೆ ನೀವು ಸ್ಪರ್ಧಿಸಬೇಕು. ನಿಮ್ಮ ಜೊತೆ ನಾವಿದ್ದೇವೆ, ನಿಮಗಾಗಿ ನಾವು ಪ್ರಾಣ ನೀಡಲು ಸಿದ್ದರಿದ್ದೇವೆ.
ನೀವು ಎದೆಗುಂದುವುದು ಬೇಡ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಹಿಂದೆ ಸರಿಯಬೇಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ನಾನು ದಿಟ್ಟ ಹೆಜ್ಜೆ ಇಟ್ಟಿದ್ದೇನೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಎಂದು ಭರವಸೆ ನೀಡಿದರು. ನಾನು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ನಶಿಸಲು ಬಿಡುವುದಿಲ್ಲ, ಪಕ್ಷ ಬಲವರ್ಧನೆಗಾಗಿ ಶ್ರಮಿಸುತ್ತೇನೆ ಎಂದರು.
ಅಂಬಿ ಸಾಧನೆ ಪ್ರಶ್ನಿಸುವ ನೈತಿಕತೆ ಇಲ್ಲ: ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಮಾತನಾಡಿ, ದೇವೇಗೌಡರ ಕುಟುಂಬ ಜಿಲ್ಲೆಗೆ ನೀಡಿರುವ ಕೊಡುಗೆಯಾದರು ಏನು ? ಅಂಬರೀಶ್ ಸಾಧನೆಯನ್ನು ಪ್ರಶ್ನಿಸುವ ನೈತಿಕತೆ ಅವರಿಗಿಲ್ಲ. ನಮಗೆ ನಮ್ಮ ಜಿಲ್ಲೆಯವರು ಬೇಕು. ನಾವು ಸ್ವಾಭಿಮಾನಿಗಳು. ನಮ್ಮ ಜಿಲ್ಲೆಗೆ ಹೊರ ಜಿಲ್ಲೆಯ ಅಭ್ಯರ್ಥಿ ಅವಶ್ಯಕತೆ ಇಲ್ಲ, ಮುಖ್ಯಮಂತ್ರಿಗಳಾಗಿ ಅವರ ಹುದ್ದೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ ಎಂದು ಛೇಡಿಸಿದರು.
ಅಂಬರೀಶ್ ಮರಣ ಹೊಂದಿದ ನಂತರ ಅವರ ಬಗ್ಗೆ ಮಾತನಾಡುವವರು ಅವರು ಬದುಕಿರುವಾಗ ಏಕೆ ಸುಮ್ಮನಿದ್ದರು. ಸುಮಲತಾ ಅವರೂ ಜಿಲ್ಲೆಗೆ ಏನು ಮಾಡದೆ ಹೋದರೂ ಪರವಾಗಿಲ್ಲ ಅವರು ಗೆದ್ದು ಸುಮ್ಮನೆ 5 ವರ್ಷ ಪೂರೈಸಲಿ. ಜೆಡಿಎಸ್‌ನವರು ಹೇಳಿಕೊಳ್ಳುವ ಏಳು ಜನ ಶಾಸಕರೇ ಅದೇನು ಅಭಿವೃದ್ಧಿ ಮಾಡುತ್ತಾರೆ ಅಂತ ನಾವು ನೋಡೋಣ ಎಂದು ಹೇಳಿದರು.
ಸಭೆಯಲ್ಲಿ ಅಂಬರೀಶ್ ಪುತ್ರ ಅಭಿಷೇಕ್, ಕಾಂಗ್ರೆಸ್ ಮುಖಂಡ ಸಚ್ಚಿದಾನಂದ, ಹೆಚ್.ಟಿ.ಕೃಷ್ಣೇಗೌಡ, ರಾಜೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶರತ್‌ರಾಮಣ್ಣ, ಧನಂಜಯ, ತುರುಬನಹಳ್ಳಿ ರಾಜೇಗೌಡ, ವಸಂತ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.