Advertisement

ಉಳಿಸಿ ಬೆಳೆಸುವ ಜಿಲ್ಲೆಯ ಜನತೆ ಅಭಿನಂದನಾರ್ಹ

02:30 PM Jun 04, 2018 | |

ಕೆಜಿಎಫ್‌: ಮನೆ ಭಾಷೆ ಬೇರೆಯದೇ ಇದ್ದರೂ, ಹೊರಗೆ ಕನ್ನಡ  ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಕೋಲಾರ ಜಿಲ್ಲೆಯ ಜನತೆ ಅಭಿನಂದನೆಗೆ ಅರ್ಹರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು. ಇಂದು ಬೆಮಲ್‌ ಕಲಾಕ್ಷೇತ್ರದಲ್ಲಿ ಕಸಾಪ ಮತ್ತು ಕನ್ನಡ ಮಿತ್ರರು ಏರ್ಪಡಿಸಿದ ಗಡಿನಾಡ ಕನ್ನಡ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕನ್ನಡ ಉಳಿಯಬೇಕಾದರೆ, ಕನ್ನಡ ಕಾರ್ಯಕ್ರಮಗಳು ಅವಿರತವಾಗಿ ನಡೆಯಬೇಕು. ಇದರಿಂದಾಗಿ ಗಡಿ ಮತ್ತು ಹೊರ ನಾಡ ಕನ್ನಡಿಗರ ಸಮಸ್ಯೆ ಮತ್ತು ಸ್ಥಾನಮಾನಗಳ ಬಗ್ಗೆ ಚರ್ಚೆಯಾಗುತ್ತದೆ. ಇಂತಹ ಚರ್ಚೆಗಳ ಮೂಲಕ ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿಗೆ ಬೇಕಾಗುವ ಯೋಜನೆಗಳನ್ನು ರೂಪಿಸಬಹುದು ಎಂದರು.

ಹೆಚ್ಚುವರಿ ಅನುದಾನಕ್ಕೆ ಸಹಕಾರ: ಕನ್ನಡ ಪರ ಕೆಲಸಗಳಿಗೆ ಇದುವರೆಗೂ ರಾಜ್ಯವನ್ನಾಳಿದ ಎಲ್ಲಾ ಮುಖ್ಯಮಂತ್ರಿಗಳು ಉದಾರವಾಗಿ ಸಹಾಯ ಮಾಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿನ ಸಮಸ್ಯೆಗಳಿಗೂ ಸಹ ಸರ್ಕಾರದಿಂದ ಹೆಚ್ಚುವರಿ ಅನುದಾನ ಕೊಡಿಸಲು ಸಹಕಾರ ನೀಡುವುದಾಗಿ ಹೇಳಿದರು.

ಉತ್ತರದವರ ಹಾವಳಿ: ಬೆಂಗಳೂರಿನಲ್ಲಿ ಕನ್ನಡ ಅನಾಥವಾಗುವ ಮಟ್ಟಿಗೆ ಬಂದಿದೆ. ಉತ್ತರ ಭಾರತದವರ ಹಾವಳಿ ಹೆಚ್ಚಾಗಿದೆ. ಉದ್ಯೋಗ, ಸಂಸ್ಕೃತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅವರು ನಮ್ಮನ್ನು ಹಿಂದೆಕ್ಕೆ ಹಾಕುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಕನ್ನಡ ಕಟ್ಟುವ ಕೆಲಸ ಮನೆಯಿಂದಲೇ ಆಗಬೇಕು. ಅದು ಮಾಲ್‌ವರೆಗೂ ವ್ಯಾಪಿಸಬೇಕು ಎಂದು ಹೇಳಿದರು.

ಇಂಗ್ಲಿಷ್‌ ಭಾಷೆ ಮುಂದೆ ನಾವು ಮಂಡಿಯೂರಿ ಕುಳಿತಿದ್ದೇವೆ. ಪ್ರಾದೇಶಿಕ ಭಾಷೆಗಳು ಅವನತಿಯಾಗುವ ಆತಂಕ ಎದುರಾಗಿದೆ. ಇಂಗ್ಲಿಷ್‌ ಹುಚ್ಚನ್ನು ಬಿಡಿಸಿ, ನಮ್ಮ ಭಾಷೆಯನ್ನು ಬೆಳೆಸಲು ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.

Advertisement

ಕನ್ನಡ ಚಳವಳಿ ಶಕ್ತಿಯಾಗಲಿ: ಕನ್ನಡ ಸಾಹಿತ್ಯ ಪರಿಷತ್‌ನ ಕೋಲಾರ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ಗಡಿಭಾಗದ ಕನ್ನಡಿಗರು ಸ್ವಾಭಿಮಾನಿಗಳಾಗಬೇಕು. ಹೋರಾಟಗಾರರಾಗಿರಬೇಕು. ಆಗ ಕನ್ನಡ ಚಳವಳಿಯನ್ನು ಒಂದು ಶಕ್ತಿಯನ್ನಾಗಿ ರೂಪಿಸಬಹುದು ಎಂದರು.

ಕೋಲಾರ ಜಿಲ್ಲೆಯ ಘಟಕದ ಕನ್ನಡ ಭಾಷಾಭಿವೃದ್ಧಿ ಜೊತೆಗೆ ಸ್ಥಳೀಯ ಸಮಸ್ಯೆಗಳ ಪರ ಹೋರಾಟಕಕ್ಕೆ ಇಳಿದಿದೆ. ಅದರಲ್ಲಿ ಯಶಸ್ಸು ಕಂಡಿದೆ ಎಂದರು. ಬೆಮಲ್‌ ಅಕಾರಿಗಳಾದ ದೇವಪ್ಪ ಮತ್ತು ಅಶೋಕಕುಮಾರ್‌ ಬೆಳ್ಳೆ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿ.ಬಿ.ದೇಶಪಾಂಡೆ, ಸಲಹೆಗಾರ ವೀರವೆಂಕಟಪ್ಪ ಹಾಜರಿದ್ದರು.

ಕವಿಗೋಷ್ಠಿ ಮತ್ತು ಗೋಕಾಕ್‌ ಚಳವಳಿ ಬಗ್ಗೆ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ನಾರಾಯಣಸ್ವಾಮಿ ಮತ್ತು ಡಾ.ರಾಜ್‌ಕುಮಾರ್‌ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಲ್ಲಿಗೆ ನಾಟಕ ಪ್ರದರ್ಶನ ನಡೆಯಿತು. ಚಂದ್ರಪ್ಪ ಸ್ವಾಗತಿಸಿದರು. ರವಿಪ್ರಕಾಶ್‌ ನಿರೂಪಿಸಿ, ನರಸಿಂಹಮೂರ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next