ಆಗಸ್ಟ್ 09 ರಂದು “ಕುರುಕ್ಷೇತ್ರ’ ಬಿಡುಗಡೆಯಾಗುತ್ತದೆ ಎಂದು ಘೋಷಣೆಯಾದ ಕೂಡಲೇ ಒಂದಷ್ಟು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿದವು. “ಕುರುಕ್ಷೇತ್ರ’ದಂತಹ ದೊಡ್ಡ ಸಿನಿಮಾ ಮುಂದೆ ಬಂದು ರಿಸ್ಕ್ ಹಾಕಿಕೊಳ್ಳೋದು ಬೇಡ ಎಂಬ ಕಾರಣಕ್ಕೆ ಸಿನಿಮಾಗಳು ಮುಂದೆ ಹೋದವು.
ಆದರೆ, “ಕೆಂಪೇಗೌಡ-2′ ಚಿತ್ರ ಮಾತ್ರ ಮುಂದೆ ಹೋಗಲೇ ಇಲ್ಲ. ನಾಯಕ ನಟ ಕೋಮಲ್ ಯಾವ ಸಿನಿಮಾ ಬಂದರೂ ನಾನು ಮುಂದೆ ಹೋಗಲ್ಲ ಎಂದು “ಕೆಂಪೇಗೌಡ-2′ ಚಿತ್ರವನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಂದಿದ್ದರು.
ಅದರಂತೆ “ಕುರುಕ್ಷೇತ್ರ’ ಎದುರೇ “ಕೆಂಪೇಗೌಡ-2′ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ, ಚಿತ್ರದ ಪ್ರತಿಕ್ರಿಯೆ ಹೇಗಿದೆ, “ಕೆಂಪೇಗೌಡ-2′ ಮೇಲೆ “ಕುರುಕ್ಷೇತ್ರ’ ಎಫೆಕ್ಟ್ ಆಗಿದೆಯಾ, ಕೋಮಲ್ ಚಿತ್ರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಎಂದರೆ ಕೋಮಲ್, “ನಾನು ಹ್ಯಾಪಿಯಾಗಿದ್ದೇನೆ’ ಎಂದು ಖುಷಿಯಿಂದಲೇ ಹೇಳುತ್ತಾರೆ.
‘ಈ ಬಗ್ಗೆ ಮಾತನಾಡುವ ಕೋಮಲ್, “ಕೆಂಪೇಗೌಡ-2 ಚಿತ್ರದಿಂದ ನಾನು ಖುಷಿಯಾಗಿದ್ದೇನೆ. ಸಿನಿಮಾಕ್ಕೆ, ನನ್ನ ನಟನೆಗೆ ಎಲ್ಲೆಡೆಯಿಂದ ಪ್ರಶಂಸೆ ಸಿಗುತ್ತಿದೆ. ಈ ಮೂಲಕ ನಿರೀಕ್ಷೆಗಳು ಕೂಡಾ ಹೆಚ್ಚಾಗಿದೆ. ಆರಂಭದ ಎರಡು ದಿನ ನಾನು ಟೆನ್ಶನ್ ಆಗಿದ್ದು, ಮಾನಸಿಕವಾಗಿ ಕುಗ್ಗಿದ್ದು ನಿಜ.
ಆದರೆ, ಭಾನುವಾರದಿಂದ ನಮ್ಮ ಚಿತ್ರಕ್ಕೆ ಜನ ಬರುತ್ತಿದ್ದು, ಕಲೆಕ್ಷನ್ ಕೂಡಾ ಏರಿಕೆಯಾಗುತ್ತಿದೆ. ರಜೆ ಇರುವುದರಿಂದ ಮತ್ತಷ್ಟು ಚೆನ್ನಾಗಿ ಆಗುತ್ತದೆ ಎಂಬ ವಿಶ್ವಾಸವಿದೆ. “ಕುರುಕ್ಷೇತ್ರ’ ದಂತಹ ದೊಡ್ಡ ಸಿನಿಮಾ ಮುಂದೆ ಬಂದರೂ “ಕೆಂಪೇಗೌಡ -2′ ನಿಂತಿದೆ ಎಂದರೆ ಅದಕ್ಕೆ ಜನರು ತೋರಿಸುತ್ತಿರುವ ಪ್ರೀತಿ, ಪ್ರೋತ್ಸಾಹ ಕಾರಣ.
ಸಿನಿಮಾ ನಿಧಾನವಾಗಿ ಪಿಕ್‌ಅಪ್ ಆಗುತ್ತಿದೆ’ ಎನ್ನುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಬೇಡಿಕೆಯಲ್ಲಿರುವ ಕೋಮಲ್ “ಕೆಂಪೇಗೌಡ-2′ ಚಿತ್ರ ಮೂಲಕ ಆ್ಯಕ್ಷನ್ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ.