ಮುಧೋಳ: 5 ವರ್ಷದಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಸ್ಥಿರ ಹಾಗೂ ಜನಪರ ಸರ್ಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಮುಧೋಳ ಕಾಂಗ್ರೆಸ್ ಅಭ್ಯರ್ಥಿ ಸತೀಶ ಬಂಡಿವಡ್ಡರ ಅವರ ಪರ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ಯಡಿಯೂರಪ್ಪನವರು ಸದಾ ರೈತರ ಪರವಾಗಿಯೇ ಮಾತನಾಡುತ್ತಾರೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವಾಗ ಹಸಿರು ಶಾಲು ಹೊದ್ದು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಮುಂದೆ ಅವರು ರೈತರಿಗಾಗಿ ಮಾಡಿದ ಕಾರ್ಯ ಮಾತ್ರ ಶೂನ್ಯ. ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆಂದು ಯಡಿಯೂರಪ್ಪ ಹೇಳಿದ್ದರು. ಮುಂದೆ ರೈತರ ಕಷ್ಟ ಕಂಡು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರತಿ ರೈತರ ರೂ. 50ಸಾವಿರ ಸಾಲ ಮನ್ನಾ ಮಾಡಿದರು ಎಂದರು.
ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ ಮಾತನಾಡಿ, ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ ಕೇಳಲು ಹೋದಾಗ ಮತಾರರು ನೀವೇನು ಮಾಡಿದ್ದೀರಿ ಎಂದು ಪ್ರಶ್ನಿಸುವುದು ಸಾಮಾನ್ಯ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಶ್ನೆ ಎದುರಾಗುವುದಿಲ್ಲ. ಏಕೆಂದರೆ ಚುನಾವಣಾ ಸಂದರ್ಭದಲ್ಲಿ ನೀಡಿದ 168 ಭರವಸೆಗಳಲ್ಲಿ 165 ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಎಂಬುದನ್ನು ತೋರಿಸುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ರಾಜ್ಯ ಸರ್ಕಾರ ಮಾಡಿದ ರೈತರ ಸಾಲಮನ್ನಾದಿಂದ ಬಾಗಲಕೋಟೆ ಜಿಲ್ಲೆಗೆ ರಾಜ್ಯದಲ್ಲಿಯೇ ಹೆಚ್ಚಿನ ಪ್ರಯೋಜನ ದೊರೆತಿದೆ ಎಂದರು. ರೈತ ಮುಖಂಡ, ಶಿರೋಳ ಗ್ರಾಪಂ ಅಧ್ಯಕ್ಷ ಸಂಗಪ್ಪ ನಾಗರಡ್ಡಿ ಮಾತನಾಡಿ, 2008ರ ಬಿಜೆಪಿ ಸರ್ಕಾರ ಹಾಗೂ 2013ರ ಕಾಂಗ್ರೆಸ್ ಎರಡೂ ಸರ್ಕಾರಗಳ ಆಡಳಿತವನ್ನು ನೋಡಿದ್ದೇವೆ. ಇದರಲ್ಲಿ ಮುಖ್ಯಮಂತ್ರಿಗಳು ತಾವು ರೈತರಪರ ಎಂಬುದಕ್ಕೆ ಪ್ರತಿ ಟನ್‌ಗೆ ರೂ. 350 ಸಹಾಯಧನ ಹಾಗೂ ಪ್ರತಿ ರೈತರ 50 ಸಾವಿರ ಸಾಲಮನ್ನಾ ಮಾಡಿದ್ದಲ್ಲದೇ ಇನ್ನೂ ಅನೇಕ ರೈತಪರ, ಜನಪರ ಕಾರ್ಯಕ್ರಮಗಳನ್ನು ಮಾಡಿರುವುದನ್ನು ಕಂಡು ಪ್ರಭಾವಿತನಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.
ಸತೀಶ ಬಂಡಿವಡ್ಡರ ಮತಯಾಚಿಸಿ, ಈ ಬಾರಿ ಪ್ರಚಂಡ ಬಹುಮತದಿಂದ ತಮ್ಮನ್ನು ಆಯ್ಕೆಗೊಳಿಸುವಲ್ಲಿ ಎಲ್ಲ ಕಾಂಗ್ರೆಸ್ ಮುಖಂಡರು, ಪ್ರಮುಖರು, ಕಾರ್ಯಕರ್ತರು ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.