Advertisement

ಅಜೆಕಾರು: ಅಪೂರ್ಣ ಕಾಮಗಾರಿಯಿಂದಾಗಿ ಸ್ಥಳೀಯರಿಗೆ ಸಂಕಷ್ಟ

11:03 PM Feb 10, 2021 | Team Udayavani |

ಅಜೆಕಾರು : ಮರ್ಣೆ ಗ್ರಾ. ಪಂ. ಹಾಗೂ ಕಡ್ತಲ ಗ್ರಾ.ಪಂ.ಗಳ ನಡುವೆ ಸಂಪರ್ಕ ಕಲ್ಪಿಸುವ ದರ್ಬುಜೆ ಸೇತುವೆ ಕಾಮಗಾರಿ ಅಪೂರ್ಣಗೊಂಡಿದ್ದು ಸ್ಥಳೀಯರು ಸಂಕಷ್ಟಪಡು ವಂತಾಗಿದೆ. ಕಡ್ತಲ ಗ್ರಾಮ ಪಂಚಾಯತ್‌ನ ದರ್ಬುಜೆ ಹಾಗೂ ಮರ್ಣೆ ಗ್ರಾ. ಪಂ.ನ ದೆಪುತ್ತೆ ಭಾಗಗಳ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆ ಕಾಮಗಾರಿ ಆರಂಭಗೊಂಡು 3 ವರ್ಷ ಕಳೆದಿದ್ದು ಕಾಮಗಾರಿ ಇನ್ನೂ ಅಪೂರ್ಣವಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

2016-17ನೇ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ದರ್ಬುಜೆ ಸೇತುವೆಗೆ 1 ಕೋ.ರೂ. ಅನುದಾನ ಮಂಜೂರು ಗೊಂಡಿತ್ತಾದರೂ ಕೆಲ ಸಮಯ ಟೆಂಡರ್‌ ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ಆರಂಭ ಗೊಂಡಿರಲಿಲ್ಲ. 2018ರ ಡಿಸೆಂಬರ್‌ನಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡು ಪಿಲ್ಲರ್‌ ಅಳವಡಿಸಿ ಅನಂತರ‌ ಕಾಮಗಾರಿ ಸ್ಥಗಿತಗೊಂಡಿತ್ತು. ಅನಂತರ ಸುಮಾರು ಒಂದು ವರ್ಷದ ಬಳಿಕ 2020 ಮೇನಲ್ಲಿ ಮತ್ತೆ ಕಾಮಗಾರಿ ಆರಂಭಗೊಂಡಿತ್ತು. ಅನಂತರ ಮಳೆಗಾಲದಲ್ಲಿ ಸ್ಥಗಿತಗೊಂಡ ಕಾಮಗಾರಿ ಇನ್ನೂ ಸಹ ಅಪೂರ್ಣವಾಗಿಯೇ ಉಳಿದಿದೆ.

ಸುತ್ತು ಬಳಸಿ ಸಂಚಾರ
ಅಲ್ಲದೆ ಅಜೆಕಾರು ಭಾಗದಿಂದ ಕಡ್ತಲ ಕೈಕಂಬ ಮಾರ್ಗವಾಗಿ ಪೆರ್ಡೂರು, ಉಡುಪಿ ಸಂಪರ್ಕಿ ಸಲು ಹಾಗೂ ದೊಂಡೆರಂಗಡಿ, ದರ್ಬುಜೆ ಭಾಗದಿಂದ ಅಜೆಕಾರು, ಕಾರ್ಕಳ ಸಂಚರಿಸಲು ಅತಿ ಹತ್ತಿರದ ರಸ್ತೆ ಇದಾಗಿದೆ. ಹಲವು ವರ್ಷಗಳ ಬೇಡಿಕೆಯಿಂದಾಗಿ ಸೇತುವೆ ಮಂಜೂರುಗೊಂಡಿದ್ದು ಅಪೂರ್ಣ ಕಾಮಗಾರಿಯಿಂದಾಗಿ ಪ್ರಯೋಜನಕ್ಕೆ ಬಾರದಂತಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೂ ಶಾಲಾ ಕಾಲೇಜಿಗೆ ತೆರಳಲು ಸಮಸ್ಯೆಯಾಗಿದೆ.

ಕಾಮಗಾರಿ ಇನ್ನೂ ಅಪೂರ್ಣ
ಕಾಮಗಾರಿ ಮುಕ್ತಾಯದ ಅವಧಿ 2020ರ ಫೆಬ್ರವರಿಯಾಗಿದ್ದು ಅವಧಿ ಮುಗಿದು ಒಂದು ವರ್ಷ ಕಳೆದರೂ ಸಹ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸ್ಥಳೀಯರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ದರ್ಬುಜೆ, ದೆಪುತ್ತೆ ಪರಿಸರದ ಸುಮಾರು 500ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸಲು ಇರುವ ಏಕೈಕ ಸೇತುವೆ ಇದಾಗಿದೆ.

ಹದಗೆಟ್ಟ ರಸ್ತೆ
ದೆಪುತ್ತೆ ಹಾಗೂ ದರ್ಬುಜೆ ಭಾಗದ ಈ ಸೇತುವೆಗೆ ಸಂಪರ್ಕ ಕಲ್ಪಿಸುವ ಸುಮಾರು 4 ಕಿ.ಮೀ. ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಆವೃತವಾಗಿದ್ದು ರಸ್ತೆ ಮರು ಡಾಮರುಗೊಳ್ಳಬೇಕಿದೆ. ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರ ಅಸಾಧ್ಯವಾಗಿದೆ. ಸಂಬಂಧಪಟ್ಟ ವರು ತ್ವರಿತವಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಸೇತುವೆಯ ಇಕ್ಕೆಲಗಳ ಸುಮಾರು 4 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಿ ಜನರ ಸಮಸ್ಯೆಗೆ ಮುಕ್ತಿ ನೀಡಬೇಕಿದೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

Advertisement

– ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next