ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ವಾಗ್ವಾದ ಮುಂದುವರಿದಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೋದಿ ಉದ್ದೇಶದ ಬಗ್ಗೆ ಜನರಲ್ಲಿ ಅನುಮಾನಗಳಿಲ್ಲ. ವಿವರಗಳನ್ನು ಬಹಿರಂಗಗೊಳಿಸುವಂತೆ ವಿಪಕ್ಷಗಳು ಕೇಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಪವಾರ್ ಹೇಳಿದ್ದಾರೆ. ಆದರೆ ಒಪ್ಪಂದದ ಮೊತ್ತವನ್ನು ಬಹಿರಂಗಗೊಳಿಸುವುದರಲ್ಲಿ ಯಾವ ಅಪಾಯವೂ ಇಲ್ಲ ಎಂದೂ ಅವರು ಹೇಳಿದ್ದಾರೆ.
ಆಕ್ಷೇಪಿಸಿದ್ದ ರಕ್ಷಣಾ ಅಧಿಕಾರಿ: ರಫೇಲ್ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ಸಹಿಗೂ ಮುನ್ನವೇ ರಕ್ಷಣಾ ಇಲಾಖೆಯ ಖರೀದಿ ಪ್ರಕ್ರಿಯೆಯಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. ಯುಪಿಎ ಕಾಲದ ರದ್ದುಗೊಳಿಸಿದ ಒಪ್ಪಂದಕ್ಕಿಂತ ವಿಮಾನಗಳ ಮೂಲ ಬೆಲೆಯನ್ನು ಈ ಒಪ್ಪಂದದಲ್ಲಿ ಹೆಚ್ಚಿಸಿದ್ದ ಬಗ್ಗೆ ಅಧಿಕಾರಿಯು ಆಕ್ಷೇಪ ಎತ್ತಿದ್ದರು. ಇದರಿಂದಾಗಿ ಒಪ್ಪಂದವನ್ನು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವುದಕ್ಕೂ ವಿಳಂಬವಾಗಿತ್ತು. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಒಪ್ಪಂದದ ಬಗ್ಗೆ ಸಂಸತ್ತಿಗೆ ಸಿಎಜಿ ವರದಿ ಮಾಡಲಿದೆ ಎನ್ನಲಾಗಿದೆ.
ಹೆಚ್ಚು ಸಮಯ ಕೇಳಿದ್ದರಿಂದ ರದ್ದು: ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸಲು 2.57 ಪಟ್ಟು ಹೆಚ್ಚು ಸಮಯವನ್ನು ಎಚ್‌ಎಎಲ್ ಕೇಳಿದ್ದರಿಂದಾಗಿ ಒಪ್ಪಂದದಲ್ಲಿ ಎಚ್‌ಎಎಲ್ ಅನ್ನು ಕೈಬಿಡಬೇಕಾಯಿತು ಎಂದು ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದಾರೆ. 100 ತಾಸು ಬೇಕು ಎಂದು ಡಸ್ಸಾಲ್ಟ್ ಹೇಳಿದರೆ, ಎಚ್‌ಎಎಲ್ 257 ಗಂಟೆ ಬೇಕು ಎಂದಿತ್ತು ಎಂದಿದ್ದಾರೆ.
ಅಧಿಕಾರಿಗಳ ಟಾರ್ಗೆಟ್: ರಫೇಲ್ ಯುದ್ಧ ವಿಮಾನಗಳ ಒಪ್ಪಂದದ ಬಗ್ಗೆ ಆಕ್ಷೇಪವೆತ್ತಿದ ಅಧಿಕಾರಿಗಳನ್ನು ಮೋದಿ ಸರಕಾರ ಟಾರ್ಗೆಟ್ ಮಾಡಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗೆ ಶಿಕ್ಷೆ ನೀಡಿದ್ದರೆ, ಸರಕಾರದ ನೀತಿ ಹೊಗಳಿದವರಿಗೆ ಬಡ್ತಿ ನೀಡಲಾಗಿದೆ ಎಂದಿದ್ದಾರೆ. ಏತನ್ಮಧ್ಯೆ, ಪ್ರಧಾನಿ ಮೋದಿ ಅವಹೇಳನ ಖಂಡಿಸಿ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ತಮಿಳುನಾಡಿನಲ್ಲಿಯೂ ಬಿಜೆಪಿ ಕೇಸು ದಾಖಲಿಸಿದೆ.
ರಾಜನಾಥ್ ವ್ಯಂಗ್ಯ
ರಫೇಲ್ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆಳೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾ’ಫೇಲ್’ ಆಗಲಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಪ್ರಧಾನಿಯನ್ನು ಚೋರ್ (ಕಳ್ಳ) ಎಂದಿದ್ದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ರಾಜನಾಥ್, ಆರೋಪ ಮಾಡುವಾಗ ಆಕ್ಷೇಪಾರ್ಹ ಪದ ಬಳಸದಂತೆಯೂ ಸಲಹೆ ನೀಡಿದ್ದಾರೆ. ರಾಹುಲ್‌ಗೆ ರಫೇಲ್ ಒಪ್ಪಂದದ ಬಗ್ಗೆ ತಿಳಿದಿದೆ. ಆದರೂ ಜನರನ್ನು ಅವರು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದಿದ್ದಾರೆ.