ಹೊನ್ನಾವರ: ದೇಶದಲ್ಲಿ ಪ್ರತಿ ತಾಸಿಗೆ 4 ಜನ ಹೆಲ್ಮೆಟ್ ಧರಿಸದ ಬೈಕ್ ಸವಾರರು ಸಾಯುತ್ತಾರೆ. ಆದ್ದರಿಂದ ಸರ್ಕಾರ ಹೆಲ್ಮೆಟ್ ಕಡ್ಡಾಯಗೊಳಿಸಿತು.
ಕೋವಿಡ್ ತಡೆಯಲು ವ್ಯಾಕ್ಸಿನ್‌ಗಿಂತ ಹೆಚ್ಚು ಪರಿಣಾಮಕಾರಿ ಮಾಸ್ಕ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಆದರೆ ಹೆಲ್ಮೆಟನ್ನು ಬೈಕ್ ಹ್ಯಾಂಡಲ್ ಗೆ ತೂಗಾಡಿಸುವ ಬುದ್ಧಿಯ ಜನ ಮಾಸ್ಕ್ ಕುತ್ತಿಗೆಗೆ ಬಿಗಿದುಕೊಂಡು ಓಡಾಡುತ್ತಾರೆ. 2018ರಲ್ಲಿ ನಮ್ಮ ರಾಜ್ಯದಲ್ಲಿ ಹೆಲ್ಮೆಟ್ ಇಲ್ಲದ ಸವಾರರ ಬೈಕ್ ಅಪಘಾತದಲ್ಲಿ 2,353 ಜನ ಸತ್ತಿರುವುದಾಗಿ ಪೊಲೀಸ್ ದಾಖಲೆ ಹೇಳುತ್ತಿದೆ. ಆಗಾಗ ಪೊಲೀಸರು ಕೇಸ್ ಹಾಕುತ್ತಲೇ ಇದ್ದಾರೆ. ಆದರೂ ಹೆಲ್ಮೆಟ್ ಜನರ ತಲೆಗೇರುವುದಿಲ್ಲ. ಹೆಲ್ಮೆಟ್ ಧರಿಸುವುದು ನಮ್ಮ ಸುರಕ್ಷತೆಗಾಗಿ ಎಂಬ ಅರಿವಿಲ್ಲದವರೇ ಹೆಚ್ಚು.
ಇಂಥವರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಮಾಸ್ಕ್ ಕಡ್ಡಾಯ ಮಾಡಿ, ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಸರ್ ಬಳಸಲು ಸರ್ಕಾರ, ವೈದ್ಯರು ನಿತ್ಯವೂ ಹೇಳುತ್ತಾರೆ. ಮೊಬೈಲ್ ಎತ್ತಿಕೊಂಡಾಗೆಲ್ಲಾ ಕೋವಿಡ್ ಎಚ್ಚರಿಕೆ ಕಿವಿ ತೂತಾಗುವಂತೆ ಮೊಳ ಗುತ್ತದೆ. ಆದರೂ ಬಹುಪಾಲು ಜನ ಮಾಸ್ಕ್ ಧರಿಸುತ್ತಿಲ್ಲ. ಇನ್ನೂ ಕೆಲವರು ದಂಡ ಬೀಳುವ ಭಯದಿಂದ ಕುತ್ತಿಗೆಗೆ ತೂಗಾಡಿಸಿಕೊಂಡು ಹೋಗುತ್ತಾರೆ. ಇವರಲ್ಲಿ ಹೆಚ್ಚಿನವರು ವಿದ್ಯಾವಂತರು. 7ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ದಿಂದ ಸತ್ತವರ ಸಂಖ್ಯೆ 8,000 ದಾಟಿದೆ.
ಆದರೂ ಜನ ಎಚ್ಚರಾಗಿಲ್ಲ. ಹೆಲ್ಮೆಟ್ ಧರಿಸದಿದ್ದವನಿಗೆ ಅಪಘಾತವಾದರೆ ಒಬ್ಬ ಸಾಯುತ್ತಾನೆ, ಆದರೆ ಮಾಸ್ಕ್ ಧರಿಸದವರು ಅವರ ಜೊತೆ ಇನ್ನಷ್ಟು ಜನರಿಗೆ ಕೋವಿಡ್ ಸೋಂಕು ತಗಲಿಸುತ್ತಲೇ ಹೋಗುತ್ತಾರೆ. ಎಚ್ಚರಿಸಿದರೆ ತಿರುಗಿಬೀಳುತ್ತಾರೆ. ಅಂತರ ಕಾಯ್ದುಕೊಳ್ಳುವ, ಸ್ಯಾನಿಟೈಸ್ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬ್ಯಾಂಕುಗಳಲ್ಲಿ, ಮಾಲ್‌ಗಳಲ್ಲಿ, ದೊಡ್ಡ ಅಂಗಡಿಗಳಲ್ಲಿ ಸ್ಯಾನಿಟೈಸರ್ ಒಂದು ಮೂಲೆಯಲ್ಲಿರುತ್ತದೆ. ಮಾತನಾಡಲು ಮಾಸ್ಕ್ ಸರಿಸುವ ಗ್ರಾಹಕರು ಕುತ್ತಿಗೆಗೆ ಜೋತಾಡಿಸಿಕೊಂಡೇ ಓಡಾಡುತ್ತಾರೆ.ಇಂಥವರಿಂದಾಗಿ ಅಪಘಾತಗಳೂ ಕಡಿಮೆಯಾಗುವುದಿಲ್ಲ, ಸೋಂಕು ದೂರವಾಗುವುದಿಲ್ಲ. ಶೇ. 60 ರಷ್ಟು ವಿದ್ಯಾವಂತರಿರುವ ಜಿಲ್ಲೆಗಳ ಜನರಿಗೆ ಇಬ್ಬರು ವೈದ್ಯರು ಕೋವಿಡ್ ನಿಂದ ಮೃತಪಟ್ಟರೂ, ಜನಪ್ರತಿನಿಧಿಗಳು ನೂರಾರು ಜನ ಮಾಸ್ಕ್ ರಹಿತರು ಸೇರಿದ ಕಾರ್ಯಕ್ರಮದಲ್ಲಿ ಮಾಸ್ಕ್ ತೆರೆದು ಮಾತನಾಡಿ ಸಭೆ ಮಾಡುತ್ತಿದ್ದರೂ ಇದು ಅರ್ಥವಾಗಲಿಲ್ಲ, ಕ್ವಾರಂಟೈನ್‌ಗೆ ಹೋಗಿ ಮರಳಿದರು.
ಹೀಗಾದರೆ ಜನಕ್ಕೆ ಅರ್ಥ ಮಾಡಿಕೊಡುವವರು ಯಾರು ? ಹೋದವರು ಹೋಗುತ್ತಾರೆ, ಇದ್ದವರನ್ನು ಗೋಳಿಗೆ ಕೆಡವಿ ಹೋಗುತ್ತಾರೆ ಎಂಬುದು ವಿಷಾದದ ಸಂಗತಿ.
-ಜೀಯು, ಹೊನ್ನಾವರ