ಬೆಣ್ಣೆನಗರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಭರ್ಜರಿ ರೋಡ್ ಶೋ ನಡೆಸಿತು. ಅಮಿತ್ ಶಾ ಬಿರು ಬಿಸಿಲಿನಲ್ಲೂ ಕರ್ನಾಟಕ ನವ ನಿರ್ಮಾಣ ಯಾತ್ರೆಯ ರಥವೇರಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಶವಂತರಾವ್ ಜಾಧವ್ ಪರ ಸುಮಾರು 2 ಕಿಲೋ ಮೀಟರ್ ಉದ್ದಕ್ಕೂ ಮತಯಾಚಿಸಿದರು. ವೀರಮದಕರಿ (ಹೊಂಡದ) ವೃತ್ತದಿಂದ ತೆರೆದ ಬಸ್‌ನಲ್ಲಿ ರೋಡ್ ಶೋ ಆರಂಭಿಸಿದ ಶಾಗೆ ಸಂಸದ
ಜಿ.ಎಂ. ಸಿದ್ದೇಶ್ವರ್ ಸಾಥ್ ನೀಡಿದರು.
Advertisement
ಹೊಂಡದ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಅಮಿತ್ ಶಾ ಆಗಮಿಸುತ್ತಲೇ ಬಿಜೆಪಿ, ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಪರ ಜಯಘೋಷ ಹಾಕಿದರು. ಭಾರತ್ ಮಾತಾ ಕಿ ಜೈ, ಶಿವಾಜಿ ಮಹಾರಾಜ್ ಕೀ ಜೈ, ಜೈರಾಮ್.. ಶ್ರೀರಾಮ್ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಹಿಂದೆ ಶಾ ಜನರತ್ತ ಕೈ ಬೀಸಿ ಬರುತ್ತಿದ್ದರೆ, ಮುಂದೆ ಡೊಳ್ಳು, ಡ್ರಂ ವಾದ್ಯಗಳು ಮೊಳಗುತ್ತಿದ್ದವು. ನಂದಿಕೋಲು ಗಮನ ಸೆಳೆಯಿತು. ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತ ಜನರು ಹೂವಿನ ಮಳೆ ಸುರಿಸುವ ಮೂಲಕ ಅಮಿತ್ ಶಾಗೆ ಭರ್ಜರಿ ಸ್ವಾಗತ ಕೋರಿದರು.
Related Articles
Advertisement
ಮಾತಿನ ಚಕಮಕಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮನದ ವೇಳೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಮುಂದಾದ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಅಲ್ಲಿಂದ ಕಳುಹಿಸಿದ ಘಟನೆ ನಡೆಯಿತು. ಬೆಳಗ್ಗೆ 10.30ಕ್ಕೆ ಅಮಿತ್ ಶಾ ರೋಡ್ ಶೋಗೂ ಮುನ್ನ ನಗರ ದೇವತೆ ದುರ್ಗಾಂಬಿಕೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಇತ್ತು. ಇದೇ ವೇಳೆ ದೇವಸ್ಥಾನದ ಹಿಂದಿನ ರಸ್ತೆಯಲ್ಲಿ ಕೆಲ ಕಾಂಗ್ರೆಸ್ ಮುಖಂಡರು ತಮ್ಮ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ
ಪ್ರಚಾರ ನಡೆಸುತ್ತಿದ್ದರು. ಸುಮಾರು 15 ಜನರಿದ್ದ ಕಾರ್ಯಕರ್ತರ ಗುಂಪು ಕಾಂಗ್ರೆಸ್ ಪರ ಘೋಷಣೆ ಕೂಗುತ್ತ ರಸ್ತೆಯಲ್ಲಿ ಸಾಗುತ್ತಿತ್ತು. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಗುಂಪು ಅಮಿತ್ ಶಾರನ್ನು ಸ್ವಾಗತಿಸಲು ಅಲ್ಲಲ್ಲಿ ನೆರೆದಿತ್ತು. ಅತ್ತ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪರ ಘೋಷಣೆ ಕೂಗುತ್ತಿದ್ದರೆ, ಇತ್ತ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಘೋಷಣೆ ಕೂಗಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಿಗೆ ಅಲ್ಲಿಂದ ಹೋಗಲು ಸೂಚಿಸಿದರು. ಬಿಜೆಪಿಗರು ಈಗಾಗಲೇ ಈ ಭಾಗದಲ್ಲಿ ರೋಡ್ ಶೋ ನಡೆಸಲು ಅನುಮತಿ ಪಡೆದಿದ್ದಾರೆ ಎಂಬುದನ್ನು ತಿಳಿಸಿ, ಕಾಂಗ್ರೆಸ್ ಕಾರ್ಯಕರ್ತರನ್ನು ಸಾಗ ಹಾಕಿದರು. ಕಾರ್ಯಕರ್ತರಲ್ಲಿ ಅಮಿತೋತ್ಸಾಹ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮನದಿಂದ ಪಕ್ಷದ ಕಾರ್ಯಕರ್ತರಲ್ಲಿ ಭಾರೀ ಉತ್ಸಾಹ ಕಂಡು ಬಂತು. ಶಾ ಆಗಮನದ ವೇಳೆ ಕೇಕೆ ಹಾಕಿ ಕುಣಿದ ಕಾರ್ಯಕರ್ತರು ಕೈಯಲ್ಲಿ ಬಿಜೆಪಿ ಧ್ವಜ, ಬಿ.ಎಸ್. ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್ ಶಾರ ಸಣ್ಣ ಸಣ್ಣ ಕಟೌಟ್ ಹಿಡಿದು ಜೈಕಾರ ಹಾಕಿದರು. ದಾರಿಯುದ್ದಕ್ಕೂ ಡೊಳ್ಳು, ಡ್ರಂ, ನಂದಿಕೋಲು ಕುಣಿತಕ್ಕೆ ಹೆಜ್ಜೆ ಹಾಕಿಕೊಂಡು ಸಾಗಿದರು. ವಿಶೇಷವಾಗಿ ಮಹಿಳಾ ಕಾರ್ಯಕರ್ತರ ಪ್ರಮಾಣ ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದು ಗಮನ ಸೆಳೆಯಿತು. ಜೈನ ಸಮುದಾಯದ ಮಹಿಳೆಯರು, ಯುವತಿಯರು ಸಹ ಮೆರವಣಿಗೆಯಲ್ಲಿ ಕಾಣಿಸಿಕೊಂಡರು. ರಾಜ್ಯದಲ್ಲೀಗ ಬಿಜೆಪಿ ಸುನಾಮಿ
ಹಿರಿಯೂರು: ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದ್ದು, ಎಲ್ಲೆಡೆ ಜನರು ಪಕ್ಷದ ಪರ ಒಲವು ತೋರಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ನೀಡಿರುವ ಎಲ್ಲಾ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ನಗರದ ನೆಹರು ಮೈದಾನದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಟಿಪ್ಪು ಜಯಂತಿಯನ್ನು ಸರ್ಕಾರಿ ಆಚರಣೆಯಾಗಿಸಿದ ಸಿದ್ದರಾಮಯ್ಯ ಅವರಿಗೆ ಮದಕರಿ ನಾಯಕ ನೆನಪಾಗಲಿಲ್ಲವೇಕೇ ಎಂದು ಪ್ರಶ್ನಿಸಿದ ಶಾ, ನಾವು ಚಿತ್ರದುರ್ಗದಲ್ಲಿ ಮದಕರಿ ನಾಯಕನ ಭವ್ಯ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಅಲ್ಲದೆ ವಿವಿ ಸಾಗರ ಜಲಾಶಯಕ್ಕೆ 5 ಟಿಎಂಸಿ ನೀರು ಹರಿಸುತ್ತೇವೆ ಎಂದರು. ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಇಲ್ಲಿನ ಶಾಸಕರು ಹಿರಿಯೂರು ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಕ್ಷೇತ್ರ ಬರಗಾಲ ಎದುರಿಸುತ್ತಿದೆ. ಹೀಗಿದ್ದರೂ ಕಳೆದ 10 ವರ್ಷಗಳಲ್ಲಿ ಸ್ಥಳೀಯ ಶಾಸಕರು ವಿಧಾನಸಭೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದು ಟೀಕಿಸಿದರು. ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ತಂದೆ ಎ. ಕೃಷ್ಣಪ್ಪ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅವರ ಆಸೆಯಂತೆ ಈ ಭಾಗದ ಜನರ ಸೇವೆ ಮಾಡಲು ನಾನು ಸ್ಪರ್ಧಿಸಿದ್ದೇನೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಡಿ.ಟಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಳ್ಳಕೆರೆ ಕ್ಷೇತ್ರದ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ, ಹೊಸದುರ್ಗ ಕ್ಷೇತ್ರದ ಅಭ್ಯರ್ಥಿ ಗೂಳಿಹಟ್ಟಿ ಶೇಖರ್, ಹೊಳಲ್ಕೆರೆ ಕ್ಷೇತ್ರದ ಅಭ್ಯರ್ಥಿ ಎಂ. ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ಮಾಜಿ ಶಾಸಕ ಆರ್. ರಾಮಯ್ಯ, ಮುಖಂಡರಾದ ಸಿದ್ದೇಶ್ ಯಾದವ್, ಮುರಳಿ, ಲಿಂಗಮೂರ್ತಿ, ಟಿ.ಜಿ. ನರೇಂದ್ರನಾಥ್, ದ್ಯಾಮೇಗೌಡ, ಯಶವಂತ್, ಟಿ. ಚಂದ್ರಶೇಖರ್, ಎಚ್. ಎನ್. ನರಸಿಂಹಯ್ಯ, ಕೇಶವಮೂರ್ತಿ ಉಪಸ್ಥಿತರಿದ್ದರು. ಕಾಂಗ್ರೆಸ್ ಸರ್ಕಾರ ಮನೆಗೆ ಕಳುಹಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿವೆ. ರೈತರು ಅಪಾರ ಪ್ರಮಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದ ಖಜಾನೆ ಲೂಟಿಯಾಗಿದೆ. ಇಂತಹ ಸರ್ಕಾರವನ್ನು ಮನೆಗೆ ಕಳುಹಿಸಿ ಅಭಿವೃದ್ಧಿ ಹಾಗೂ ಬದ್ಧತೆ ಇರುವ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಅಮಿತ್ ಶಾ ಕೋರಿದರು.