ಉಡುಪಿ: ದಿನೇ ದಿನೇ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣ, ನಿರಾತಂಕವಾಗಿ ಸಾಗುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳ ಜತೆಗೆ ಬ್ರಹ್ಮಾಂಡ ಭ್ರಷ್ಟಾಚಾರಗಳಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಅವರು ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಫೆ. 20ರಂದು ಉಡುಪಿ ಗಾಂಧಿ ಕಟ್ಟೆ ಎದುರು ಜರಗಿದ ಪ್ರತಿಭಟನ ಸಭೆ ಉದ್ದೇಶಿಸಿ ಮಾತನಾಡಿದರು.
ನಾಚಿಕೆಗೇಡು: ಮುಖ್ಯಮಂತ್ರಿ ಆಪ್ತರ ಮನೆ ಮೇಲೆ ಐಟಿ ದಾಳಿ ನಿರಂತರ ನಡೆಯುತ್ತಲೇ ಇದೆ. ಕೆಜಿಗಟ್ಟಲೆ ಬಂಗಾರ, ಕೋಟ್ಯಂತರ ರೂಪಾಯಿ ನಗದು ದೊರಕುತ್ತಲೇ ಇದೆ. ಆದರೆ ರಾಜ್ಯದ ಮುಖ್ಯಮಂತ್ರಿ ಮಾತ್ರ ಏನೂ ಸಂಭವಿಸಿಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅರ್ಕಾವತಿ ಲೇಔಟ್ ಭೂಹಗರಣ ಮುಖ್ಯಮಂತ್ರಿ ಅವರನ್ನು ಬಾಧಿಸಿತು. ಅಂದಿನಿಂದ ಇಂದಿನ ವರೆಗೆ ಹಗರಣಗಳಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಲಾಗುತ್ತಿದೆ. ವಾಚ್ ಹಗರಣದಲ್ಲಿ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ
ನೀಡಬೇಕಿತು ಆದರೂ ಅಧಿಕಾರದಲ್ಲಿ ಮುಂದುವರಿದಿರುವುದು ನಾಚಿಕೆ ಗೇಡು ಎಂದರು.
ಮುಖ್ಯಮಂತ್ರಿ ಕಾರ್ಯದರ್ಶಿ ಗೋವಿಂದರಾಜು ಅವರ ಮನೆಯ ಲ್ಲಿಯೂ ಡೈರಿ, ಸಾವಿರಾರು ಕೋಟಿ ರೂಪಾಯಿ ನಗದು, ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಸಿಕ್ಕಿರುವುದು ರಾಜ್ಯ ಸರಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಅವರು ಹೇಳಿದರು.
ಪ್ರತಿಭಟನ ಸಭೆಯಲ್ಲಿ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್, ಮಾಜಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ರಾಜ್ಯ ಕಾರ್ಯಕಾರಣಿಯ ಶ್ಯಾಮಲಾ ಕುಂದರ್, ಉಡುಪಿ ಜಿ.ಪಂ. ಉಪಾಧ್ಯಕ್ಷ ಶೀಲಾ ಶೆಟ್ಟಿ, ಮುಖಂಡರಾದ ಗುರ್ಮೆ ಸುರೇಶ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಉದಯಕುಮಾರ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ, ಪ್ರಕಾಶ್ ಹೆಗ್ಡೆ, ಸುಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಅಂಡಾರು
ದೇವಿಪ್ರಸಾದ್ ಹೆಗ್ಡೆ ಮೊದಲಾದ ವರು ಉಪಸ್ಥಿತರಿದ್ದರು.