Advertisement

ಗ್ರಾಮೀಣ ಸಮಸ್ಯೆ ಬಗೆಹರಿಸಲು ಜನಸಂಪರ್ಕ ಸಭೆ

09:39 PM Jun 29, 2019 | Team Udayavani |

ಕೊಳ್ಳೇಗಾಲ: ಗ್ರಾಮೀಣ ಪ್ರದೇಶದಲ್ಲಿ ನೂರಾರು ಸಮಸ್ಯೆಗಳು ಇದ್ದು, ಅದನ್ನು ಪರಿಹರಿಸುವ ಸಲುವಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ಆಯೋಜನೆ ಮಾಡಲಾಗಿದೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ತಾಲೂಕಿನ ಸಿದ್ದಯ್ಯನಪುರ ಮತ್ತು ಹರಳೆ ಗ್ರಾಪಂ ಆವರಣದಲ್ಲಿ ಶನಿವಾರ ನೂರಾರು ಸಮಸ್ಯೆಗಳ ಅಹವಾಲುಗಳನ್ನು ಗ್ರಾಮಸ್ಥರಿಂದ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೆ ಹಲವಾರು ಸಮಸ್ಯೆಗಳು ಎದುರಾಗಿ, ಸಮಸ್ಯೆ ಪರಿಹರಿಸಿಕೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸುತ್ತಾಡಿ ಬೇಸರಗೊಂಡು ಸಮಸ್ಯೆ ಇತ್ಯರ್ಥವಾಗುವುದಿಲ್ಲ ಎಂದುಕೊಂಡವರಿಗೆ ಪರಿಹಾರ ದೊರಕಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿ ಗ್ರಾಪಂ ವ್ಯಾಪ್ತಿಗೆ ಅಧಿಕಾರಿಗಳನ್ನು ಕರೆದು ತಂದು ಜನಸಂಪರ್ಕ ಮಾಡಲಾಗಿದ್ದು, ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪ್ರತಿ ಗ್ರಾಪಂನಲ್ಲೂ ಜನ ಸಂಪರ್ಕ ಸಭೆಯನ್ನು ಒಂದು ದಿನಕ್ಕೆ ಎರಡು ಗ್ರಾಪಂನಲ್ಲಿ ನಡೆಸುತ್ತಿದ್ದು, ಜನರು ನೀಡಿದ ದೂರುಗಳನ್ನು ಕೇವಲ ದೂರುಗಳಾಗಿ ಸ್ವೀಕರಿಸದೆ ಅರ್ಜಿಗಳಿಗೆ ತಕ್ಕ ಪರಿಹಾರ ಮನೆ ಬಾಗಿಲಿಗೆ ದೊರಕಿಸಿಕೊಡುವ ಭರವಸೆ ನೀಡಿದರು.

Advertisement

ಕೃಷಿ ಇಲಾಖೆ: ಈಗಾಗಲೇ ಕೆಲವು ಕಡೆ ಸಾಧಾರಣ ಮಳೆಯಾಗಿದ್ದು, ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜ ಮತ್ತು ಇನ್ನಿತರ ಸಾಮಗ್ರಿಗಳ ಸೌಕರ್ಯ ವಿತರಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ಸೂಕ್ತ ಅರ್ಜಿ ಸಲ್ಲಿಸಿ, ಕೃಷಿ ಇಲಾಖೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಕಂದಾಯ ಇಲಾಖೆ: ಕಂದಾಯ ಇಲಾಖೆ ವತಿಯಿಂದ ವಿಧವೆಯರಿಗೆ ವಿಧವೆ ವೇತನ ಸೇರಿ ಹಲವಾರು ವೇತನಗಳ ಮಂಜೂರಾತಿ ತಹಶೀಲ್ದಾರ್‌ ಕಚೇರಿಯಿಂದ ನೀಡುತ್ತಿದ್ದು, ಹಲವರು ಅರ್ಜಿ ಸಲ್ಲಿಸಲು ಕಷ್ಟಕರ. ಭಾನುವಾರವೂ ಇಲಾಖಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದು, ಪ್ರಧಾನ ಮಂತ್ರಿ ಸಮ್ಮಾನ್‌ ಯೋಜನೆಗೂ ಅರ್ಜಿ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಈಗಾಗಲೇ ಪೌತಿ ಖಾತೆ ಸೇರಿ ವಿವಿಧ ಖಾತೆಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳೊಂದಿಗೆ ಸೂಕ್ತ ಅರ್ಜಿ ನೀಡಿದ ಪಕ್ಷದಲ್ಲಿ ಅಂತಹವರಿಗೆ ಖಾತೆ ಮಾಡಿಕೊಡಲಾಗುವುದು. ಸ್ಮಶಾನ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೂ ಸ್ಥಳ ಕೊಡಿಸಿಕೊಡುವುದಾಗಿ ಹೇಳಿದರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ರೈತರಿಗೆ ನೀರು ಸರಾಗವಾಗಿ ಸಿಗುವಂತೆ ಚೆಸ್ಕಾಂ ಇಲಾಖೆ ಮತ್ತು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹೆಚ್ಚು ಶ್ರಮವಹಿಸಬೇಕೆಂದರು.

2 ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ನೀಡಿದ ನೂರಾರು ಸಮಸ್ಯೆ ಸ್ವೀಕರಿಸಿ ಎಲ್ಲಾ ಸಮಸ್ಯೆ ಸರಿಪಡಿಸಿ ವಿವಿಧ ಇಲಾಖೆ ಸವಲತ್ತುಗಳನ್ನು ಫ‌ಲಾನುಭವಿಗಳಿಗೆ ಸಿಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಸಿದ್ದಯ್ಯನಪುರ ಗ್ರಾಪಂ ಅಧ್ಯಕ್ಷೆ ಶಶಿಕುಮಾರಿ, ತಹಶೀಲ್ದಾರ್‌ ಕುನಾಲ್‌, ಇಒ ಉಮೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಬಿಇಒ ಚಂದ್ರಪಾಟೀಲ್‌, ಗ್ರಾಪಂ ಸದಸ್ಯರಾದ ನಾಗರಾಜು, ಉಮೇಶ್‌, ಶಿವಣ್ಣ, ನಾಗೇಂದ್ರಮೂರ್ತಿ, ಪ್ರಕಾಶ್‌, ಜಯಲಕ್ಷಿ, ನಾಗಮ್ಮ, ನಾಗರತ್ನ, ಮಂಜುಳಾ, ತಾಪಂ ಸದಸ್ಯೆ ಪುಷ್ಪಾಕುಮಾರಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next