ನಂಜನಗೂಡು: ದಕ್ಷಿಣಾಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಚಿಕ್ಕಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಭಾನುವಾರ ಬೆಳಗ್ಗೆ 09.45-10.45 ಗಂಟೆಗೆ ಮಾರ್ಗಶಿರ ಮಾಸದ ಮಕರ ಲಗ್ನದಲ್ಲಿ ತೇರು ಎಳೆಯಲಾಯಿತು.
ಈ ವೇಳೆ ಭಕ್ತರು ಉಧೋ ನಂಜುಂಡಪ್ಪ ಎಂದು ಉದ್ಘೋಷ ಮೊಳಗಿಸುತ್ತ ತೇರನೆಳೆದು ಪುನೀತರಾದರು. ದೇವಾಲಯದ ಪ್ರಧಾನ ಅರ್ಚಕ ಜೆ.ನಾಗಚಂದ್ರದೀಕ್ಷಿತ್, ದೇಗುಲದ ಅರ್ಚಕ ವೃಂದ ಧಾರ್ಮಿಕ ವಿಧಿ-ವಿಧಾನಗಳ ಮೂಲಕದೇವರಿಗೆ ಪೂಜೆ ಪುನಸ್ಕಾರ ನೆರವೇರಿಸಿದರು.
ಶಾಸಕ ಕಳಲೆ ಕೇಶವಮುರ್ತಿ ರಥ ಮಿಣಿಗೆ (ಹಗ್ಗ ) ಎಳೆದು ಚಾಲನೆ ನೀಡಿದರು. ಹುಣ್ಣಿಮೆ ಭಾನುವಾರದ ದಿನ ಜಾತ್ರೆ ಬಂದಿದ್ದು ಹೆಚ್ಚಿನ ಭಕ್ತಾದಿಗಳು ಆಗಮಿಸಿದ್ದರು. ಚಿಕ್ಕ ಜಾತ್ರಾ ಪ್ರಯುಕ್ತ ಮಂಗಳವಾರ ಕಪಿಲಾ ನದಿಯಲ್ಲಿ ತೇಲುವ ದೇಗುಲದಲ್ಲಿ ತೆಪ್ಪೋತ್ಸವ ಸಹ ನಡೆಯುಲಿದೆ.
ಮಕ್ಕಳಾದ ಗಣಪತಿ, ಚಂಡಿಕೇಶ್ವರ ರಥದ ನಂತರ ಅವರ ತಂದೆ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ರಥೋತ್ಸವ ರಥ ಬೀದಿಯಲ್ಲಿ ಭಕ್ತರು ರಥಕ್ಕೆ ಹಣ್ಣು ದವನ ಅರ್ಪಿಸಿ ಜೈಕಾರ ಕೂಗಿದರು. ಜಾತ್ರೆಗೆ ಬಂದಿದ್ದ ಭಕ್ತಾದಿಗಳಿಗೆ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ, ಕೆಲವು ಸಂಘ ಸಂಸ್ಥೆಗಳಿಂದ ಅರವಟ್ಟಿಗೆ (ಪ್ರಸಾದ) ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಇಒ ಶಿವಕುಮಾರ್, ಇಇ ಒಗಂಗಯ್ಯ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಧರ್, ಹಾಲಿ ಸದಸ್ಯ ರಾಮಕೃಷ್ಣ, ಮಲ್ಲಿಕ್, ಕೃಷ್ಣಪ್ಪಗೌಡ, ಜಗದೀಶ್, ಗ್ರಾಪಂ, ಪುರಸಭಾ, ಜಿಪಂ ಸದಸ್ಯರು ಸೇರಿ ಸಾವಿರಾರು ಭಕ್ತರು ಇದ್ದರು.