Advertisement

ಜನ ಮನಸು ಮಾಡಿದರೆ ಅಭಿವೃದ್ಧಿ ಪರ ಸರ್ಕಾರ

11:27 AM Aug 21, 2017 | Team Udayavani |

ಬೆಂಗಳೂರು: ದೇಶಾದ್ಯಂತ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ಉತ್ತಮ ಆಡಳಿತ ನೀಡುತ್ತಿದ್ದು, ಕರ್ನಾಟಕ ಜನತೆ ಮನಸು ಮಾಡಿದರೆ ಇಲ್ಲಿಯೂ ಅದು ಮುಂದುವರೆಯಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದರು.

Advertisement

ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ನಗರ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಆರ್ಯವೈಶ್ಯ ಸಮಾವೇಶ ಉದ್ಘಾಟನೆ ನೆರವೇರಿಸಿ  ಮಾತನಾಡಿದ ಅವರು, ದೇಶದ ಬಹುತೇಕ ಕಡೆಗಳಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೋಡಿ ದಿಗ್ವಿಜಯ ಸಾಧಿಸಿದೆ. ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಯಶಸ್ವಿಯಾಗಿದೆ ಎಂದು ಹೇಳಿದರು.

ದೇಶದ ಪ್ರಗತಿ ಹಾಗೂ ಒಳ್ಳೆಯ ಅಡಳಿತಕ್ಕೂ ಬದ್ಧ, ಸಮಯ ಬಂದರೆ ಸರ್ಜಿಕಲ್‌ ಸ್ಟ್ರೈಕಿಗೂ ಸಿದ್ಧ ಎಂಬುದನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ರಾಜ್ಯದ ಜನತೆ ಆಶೀರ್ವಾದ ಮಾಡಿದರೆ ಇಲ್ಲಿಯೂ ಒಳ್ಳೆಯ ಆಡಳಿತ ಬರಲಿದೆ ಎಂದರು. ಮಹಾತ್ಮ ಗಾಂಧೀಜಿಯವರ ಮೂಲಕ ಇಡೀ ಭಾರತವನ್ನೇ ಸ್ವಾಭಿಮಾನಿ ಮಾಡಿದ ಸಮಾಜ ಆರ್ಯವೈಶ್ಯ ಸಮಾಜವಾಗಿದೆ.

ದೇಶವನ್ನು ಶ್ರೀಮಂತವನ್ನಾಗಿಸಿದ ಸಮಾಜವೂ ಕೂಡ ಇದಾಗಿದ್ದು, ಆರ್ಯವೈಶ್ಯ ಸಮಾಜದ ದಿಗ್ಗಜರು, ಸ್ವಾತಂತ್ರ್ಯಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದವರ ಕುರಿತು ನೂರು ಪುಸ್ತಕಗಳನ್ನು ಹೊರತಂದು ಸಮಾಜದ ಮುಂದಿನ ಪೀಳಿಗೆಯವರಿಗೆ ಕೊಡಬೇಕು. ಆರ್ಯವೈಶ್ಯ ಸಮಾಜ ಬೆಳೆದು ಬಂದ ರೀತಿ, ನಾಡಿಗೆ ಕೊಟ್ಟ ಕೊಡುಗೆಗಳನ್ನು ಯುವ ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. 

ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡು ಭಾನುವಾರ ಲೋಕಾರ್ಪಣೆಗೊಂಡ 20 ಅಂತಸ್ತುಗಳ ಆರ್ಯವೈಶ್ಯ ಮಹಾಸಭಾದ ಶತಮಾನೋತ್ಸವ ಭವನಕ್ಕೆ ಆರ್ಯವೈಶ್ಯ ಟವರ್ ಎಂದು ಸಚಿವ ಅನಂತಕುಮಾರ್‌ ನಾಮಕರಣ ಮಾಡಿದರು. ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟುವ ಮೂಲಕ ಅದನ್ನು ಅನುಮೋದಿಸಿದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್‌.ಪಿ.ರವಿಶಂಕರ್‌, ಯಾವುದೇ ಸಮಾಜ ಅಭಿವೃದ್ಧಿ ಸಾಧಿಸಲು ಸಂಘಟನೆ ಬಹಳ ಮುಖ್ಯ.

Advertisement

ಮಹಾಸಭಾದ ಉದ್ದೇಶ ಭವನ ನಿರ್ಮಾಣ ಅಲ್ಲ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದೇ ಆಗಿದೆ. ಸಂಘವು 2020ರೊಳಗೆ ಆರ್ಯವೈಶ್ಯ ಸಮಾಜದಲ್ಲಿ ಸಂಪೂರ್ಣವಾಗಿ ಬಡತನ ನಿರ್ಮೂಲನೆಯಾಗಬೇಕು ಎಂದು ತೀರ್ಮಾನಿಸಿದೆ. ಸರ್ಕಾರಕ್ಕೆ ಸಾಧ್ಯವಾದರೆ ಸಹಾಯ ಮಾಡಲಿ. ಆಗದಿದ್ದರೆ, ಕಾಲು ಎಳೆಯಬಾರದು ಎಂದ ಅವರು, ಲಿಂಗಾಯತ ಮತ್ತು ವೀರಶೈವರ ನಡುವೆ ಜಾತಿ ಒಡೆಯುವ ಕೆಲಸವಾಗುತ್ತಿದೆ. ನಮ್ಮ ಸಮಾಜದಲ್ಲಿ ಈ ಕೆಲಸಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಎಂಆರ್‌ ಗ್ರೂಪ್‌ ಅಧ್ಯಕ್ಷ ಜಿ.ಎಂ.ರಾವ್‌, ಬ್ರಿಗೇಡ್‌ ಗ್ರೂಪ್‌ ಸಿಎಂಡಿ ಎಂ.ಆರ್‌.ಜಯಶಂಕರ್‌ ಸೇರಿದಂತೆ ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರಗಳ ಆರ್ಯವೈಶ್ಯ ಸಂಘದ ಮುಖಂಡರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next