Advertisement
1970ರ ಮಾತಿದು. ನನ್ನೂರು ಹರಪನಹಳ್ಳಿಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪಿಯುಸಿಗೆ ಸೇರಿದ್ದೆ. ಪ್ರಾಂಶುಪಾಲರಾದ ಎಂ.ಪಿ.ಎಲ್. ಶಾಸ್ತ್ರಿಯವರ ಆದರ್ಶ, ಶಿಸ್ತು, ನಿಷ್ಠುರತೆಗಳೊಂದಿಗೆ ಅದ್ಭುತ ಪಾಠ ಮಾಡುವ ಪ್ರಾಧ್ಯಾಪಕರ ಸಮೂಹ ಎಲ್ಲವೂ ಇದ್ದರೂ ಏನೋ ಭಯ, ಏನೋ ಅಬ್ಬೇಪಾರಿತನ! ಮನೆಮಂದಿಯನ್ನೆಲ್ಲ ಬಿಟ್ಟು ದೂರದ ಬೆಂಗಳೂರಿಗೆ ಬಲಗಾಲಿಟ್ಟಾಗ ಸರೋವರದಿಂದ ದುಡುಮ್ಮನೆ ಸಾಗರಕ್ಕೆ ಜಿಗಿದ ಅನುಭವ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದವನಿಗೆ ಇಲ್ಲಿನ ಕಾನ್ವೆಂಟ್ ಕಂದಮ್ಮಗಳ ಓ.ಕೆ. ಯಾರ್, ಹಾಯ್, ಠುಸ್‌ಪುಸ್‌ಗಳು ಬೇಜಾನ್ ಭಯ ತರಿಸಿ, ಸಂತೆಯಲ್ಲಿ ಬೆತ್ತಲೆ ನಿಂತಂತಾಗಿತ್ತು!
Related Articles
Advertisement
ನಾಟಕದ ಸಮಯ ಬಂದೇ ಬಿಟ್ಟಿತ್ತು. ಆರಂಭವೂ ಆಯಿತು. ನನಗೆ ಕಚ್ಚೆ ಪಂಚೆ, ದೊಗಳೆ ಜುಬ್ಟಾ ಹಾಕಿ ನನ್ನ ಗುರುತು ನನಗೇ ಸಿಗಲಾರದಷ್ಟು ಮೇಕಪ್ ಮಾಡಿ ನಿಲ್ಲಿಸಿದ್ದರು. ಕನ್ನಡಿಯಲ್ಲಿ ನೋಡಿದಾಗ ಗೊಗ್ಗಯ್ಯ ಎನಿಸಿತು! ಬೆವರು ಹನಿಯಲಾರಂಭಿಸಿ ತೊಳ್ಳೆಗಳು ಅದುರುತ್ತಿದ್ದವು. ಇದೀಗ ನನ್ನ ಭರ್ಜರಿ ಎಂಟ್ರಿ! ವಯ್ನಾರದಿಂದ… ಅದನ್ನೆಲ್ಲಿಂದ ತರೋದು? ನಾನು ಥೇಟ್ ಎನ್.ಸಿ.ಸಿ ವಿದ್ಯಾರ್ಥಿಯಂತೆ ಲೆಫ್ಟ್- ರೈಟ್ ಗತಿಯಲ್ಲಿ ನಡೆಯುತ್ತಾ ನಾಯಕಿಯ ಅಮ್ಮನ ಮುಂದೆ ಹೋಗಿ ನಿಂತೆ.
“ನೀವೇ ಏನ್ರೀ ಮಾಸ್ತರರು? ಯಾವ ಯಾವ ಪ್ರಕಾರದ ನೃತ್ಯ ಹೇಳಿಕೊಡ್ತೀರಾ?’ ನನ್ನ ಉತ್ತರವಿಲ್ಲ. ಪುನಃ ಅವರೇ ಕೇಳಿದರು: “ಭರತನಾಟ್ಯ ಬರುತ್ತೇನ್ರೀ…?’ ಹೂಂ ಎಂದು ತಲೆಯಾಡಿಸಿದೆ. ಅದೊಂದನ್ನೇ ನಾನು ಅಭಿನಯಿಸಿದ್ದು. “ಸರಿ, ನಾಳೆಯಿಂದ ಪಾಠ ಶುರು ಮಾಡಿ”. ಅಲ್ಲಿಗೆ ನನ್ನ ಪಾತ್ರವಿದ್ದ ದೃಶ್ಯ ಮುಗಿಯಿತು. ಅಬ್ಟಾ ಬಚಾವಾದೆ ಎಂದುಕೊಂಡು ಒಮ್ಮೆ ಜನಸ್ತೋಮದೆಡೆಗೆ ನೋಡಿದೆ. ಜಗತ್ತೆಲ್ಲ ನನ್ನನ್ನೇ ದಿಟ್ಟಿಸುತ್ತಿದೆಯೆನಿಸಿತು. ಹಿಂತಿರುಗಿ ಓಡಿ ಪರದೆಯ ಹಿಂದೆ ಬಂದು ನಿಂತೆ. ಜನ ಸೀಟಿ ಹೊಡೆಯುತ್ತಿದ್ದರು. ಬರಿಯ ಒಂದೇ ಡೈಲಾಗಿಗೆ ಈ ಮಟ್ಟಿಗಿನ ಪ್ರತಿಕ್ರಿಯೆ ಕಂಡು ಉಬ್ಬಿ ಹೋದೆ. ನಾನೂ ವರನಟ ರಾಜ್‌ಕುಮಾರ್ ಆಗಬಹುದೆನಿಸಿತು. ಎದುರಿಗೆ ಕಿಟ್ಟಣ್ಣ ದೂರ್ವಾಸನಂತೆ ನಿಂತಿದ್ದು ಕಂಡು ಅಂತರ್ಧಾನನಾದೆ! ಆಮೇಲೆ ಗೊತ್ತಾಯಿತು. ಜನ ಶಿಳ್ಳೆ ಹೊಡೆದಿದ್ದು ನನ್ನ ಅಭೂತಪೂರ್ವ ಅಭಿನಯಕ್ಕಲ್ಲ ಅಂತ. ಹಿಂತಿರುಗಿ ಓಡುವಾಗ ಕಾಲಿಗೆ ಸಿಕ್ಕಿ ನನ್ನ ಪಂಚೆಯ ಕಚ್ಚೆ ಬಿಚ್ಚಿ ಉದುರಿತ್ತು. ಪಂಚೆ ಕೆಳಕ್ಕೆ ಉದುರಿದ ಮೇಲೆಯೇ ನಾನು ಸ್ಟೇಜಿನುದ್ದಕ್ಕೂ ನರ್ತಿಸಿದ್ದೆ! ನನ್ನ ಆ ವೇಷವನ್ನು ನೋಡಿಯೇ ಜನರು ಕೇಕೆ ಹಾಕಿ ಶೀಟಿ ಹೊಡೆದಿದ್ದರು.
ಅದೇ ಕೊನೆ. ಈ ಘಟನೆಯಾಗಿ 45 ವರ್ಷಗಳೇ ಕಳೆದುಹೋದವು. ಆವತ್ತಿನಿಂದ ಈವತ್ತಿನವರೆಗೂ ಯಾವುದೇ ವೇದಿಕೆ ಹತ್ತಿಲ್ಲ. ಅಪ್ಪಿತಪ್ಪಿ ಬಲವಂತದಿಂದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿಸಿದರೂ, ಆ ದಿನ ನಾನು ಖಂಡಿತ ಊರಿನಲ್ಲಿರುವುದಿಲ್ಲ.
ಕೆ. ಶ್ರೀನಿವಾಸರಾವ್, ಹರಪನಹಳ್ಳಿ