ಬೆಂಗಳೂರು: ಸಚಿವ ಶಿವರಾಜ್ ತಂಗಡಗಿ ಬಿಜೆಪಿಯಲ್ಲಿದ್ದಾಗ ಸಕ್ಕರೆ ತಿಂದುಕೊಂಡಿರಲಿ ಎಂದು ಅದೇ ಖಾತೆ ಕೊಟ್ಟಿದ್ದೆವು. ಆಗ ಸೋನಿಯಾಗೆ ಹೊಡೆಯಿರಿ ಎನ್ನುತ್ತಿದ್ದರು. ಈಗ ಕಾಂಗ್ರೆಸ್ ಸೇರಿ ಮೋದಿಗೆ ಹೊಡೆಯಿರಿ ಎನ್ನುತ್ತಾರೆ. ಆದರೆ, ಜನ ತಂಗಡಗಿಗೆ ಹೊಡೆಯಿರಿ ಎನ್ನುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಂಗಡಗಿ ಅವರ ಗುರು ಡಿ.ಕೆ. ಶಿವಕುಮಾರ್ ಅವರು ಹಳ್ಳಿ ಭಾಷೆಯಲ್ಲಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರವಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಸಿಎಂ ಸಿದ್ದರಾಮಯ್ಯ ಏಕವಚನ ಬಳಸುತ್ತಾರೆ. ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಸಚಿವರಾಗಿದ್ದಾರೆ. ರಾಜ್ಯದ ಜನರಿಗೆ ನೀರು ಕೊಡಲಾಗದವರು ನೀರಾವರಿ ಸಚಿವರಾಗಿದ್ದಾರೆ. ಒಟ್ಟಾರೆ ಸಂಸ್ಕಾರ, ಸಂಸ್ಕೃತಿ ಇಲ್ಲದ ಕಾಂಗ್ರೆಸ್, ನಾವು ಉಚಿತ ಯೋಜನೆಗಳನ್ನು ಕೊಡುತ್ತಿದ್ದೇವೆ ಎಂದು ಎಷ್ಟೇ ಹೇಳಿಕೊಂಡರೂ ಸೋಲು ಮಾತ್ರ ನಿಶ್ಚಿತ ಎಂದು ವಿಶ್ಲೇಷಿಸಿದರು.
ಸುಮಾರು 50 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ಸರ್ಕಾರಗಳು ಎಷ್ಟು ಉದ್ಯೋಗ ಸೃಷ್ಟಿಸಿದ್ದವು. ಅಧಿಕಾರಕ್ಕೆ ಬಂದ ಕೂಡಲೇ ಪಂಚಗ್ಯಾರಂಟಿ ಎಂದಿದ್ದವರು ಹೇಗೆ ಅನುಷ್ಠಾನ ಮಾಡುತ್ತಿದ್ದೀರಿ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದೇವೆ. ಈ ಸರ್ಕಾರದ ಮೊದಲ ಸಂಪುಟಯೂ ಆಯಿತು, ಕೊನೆಯ ಸಂಪುಟ ಸಭೆಯೂ ಮುಗಿಯಿತು. ಯುವನಿಧಿ ಎಷ್ಟು ಜನರಿಗೆ ತಲುಪಿದೆ ಎಂದು ಪ್ರಶ್ನಿಸಿದರು.
ಕಮಲ ಕೆಸರಲ್ಲಿರಬೇಕು, ಹೊರೆ ಗದ್ದೆಯಲ್ಲಿರಬೇಕು ಎಂದಿರುವ ಡಿಸಿಎಂ ಶಿವಕುಮಾರ್ ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ. ಕೆಸರಲ್ಲಿ ಅರಳಿದ ಕಮಲ ಸೇರುವುದು ದೇವರ ಮುಡಿಯನ್ನೇ. ಗದ್ದೆಯಲ್ಲಿ ಬೆಳೆದ ಹೊರೆ ಕಣದಿಂದ ಮನೆ ಬರುವಾಗ ಧಾನ್ಯಲಕ್ಷ್ಮೀಯಾಗಿ ಬರುತ್ತದೆ. ಭ್ರಷ್ಟಾಚಾರದ ಕೈ ಮಾತ್ರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಡಳಿತ ನಡೆಸಬೇಕೇ? ಈ ಬಾರಿಯ ಚುನಾವಣೆಯಲ್ಲಿ ಜನ ಒಂದು ಬೆರಳು ತೋರಿಸಿ ಮತ ಒತ್ತುವ ಮೂಲಕ ಇಡೀ ಕೈ ನುಂಗಿ ಹಾಕಲಿದ್ದಾರೆ ಎಂದು ಎಚ್ಚರಿಸಿದರು.
ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಶಾಸಕ ರವಿ ಸುಬ್ರಹ್ಮಣ್ಯ, ಮೇಲ್ಮನೆ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವಕ್ತಾರರಾದ ಎಚ್.ಎನ್. ಚಂದ್ರಶೇಖರ್, ಸುರಭಿ ಹೊದಿಗೆರೆ ಇದ್ದರು.