ಪಿರಿಯಾಪಟ್ಟಣ: ದಶಕಗಳೇ ಕಳೆದರೂ ದುರಸ್ತಿ ಭಾಗ್ಯ ಕಾಣದ ತಾಲೂಕು ಕೇಂದ್ರವನ್ನು ಸಂಪರ್ಕಿಸುವ ರಸ್ತೆ ಇದೀಗ ಹಳ್ಳಕೊಳ್ಳಗಳಿಂದ ನಿರ್ಮಾಣವಾಗಿರುವುದು ರಸ್ತೆಯ ದೌರ್ಭಾಗ್ಯವೇ ಸರಿ. ತಾಲೂಕಿನ ರಾವಂದೂರು ಎಸ್.ಕೊಪ್ಪಲು ಮಾರ್ಗವಾಗಿ ನಾಗರಘಟ್ಟ-ಕೆಲ್ಲೂರು-ಹೊಸಕೋಟೆ-ಮಳಲಿ ಮಾರ್ಗವಾಗಿ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಿಂದ ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ.
ಸವಾಲಿನ ಪ್ರಯಾಣ: ತಾಲೂಕಿನ ಗಡಿಭಾಗದಲ್ಲಿರುವ ರಾವಂದೂರು ಹೋಬಳಿಗೆ ಹತ್ತಿರವಿರುವ ಕೆ.ಆರ್.ನಗರ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ. ಅನೇಕ ವರ್ಷಗಳಿಂದ ಡಾಂಬರೀಕರಣ ಕಿತ್ತುಹೋಗಿ ರಸ್ತೆಯ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಗುಂಡಿಗಳಿಂದ ಆವೃತ್ತವಾಗಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಸವಾರರಿಗೆ ಸೊಳ್ಳೆಗಳ ಭೀತಿ: ರಾವಂದೂರಿಗೆ ಸಮೀಪವಿರುವ ಕೆಲ್ಲೂರು ಗ್ರಾಮದಲ್ಲಿ ಸಂಪೂರ್ಣವಾಗಿ ಈ ರಸ್ತೆ ಕೆರೆಯಂತೆ ನಿರ್ಮಾಣವಾಗಿ ಸೊಳ್ಳೆಗಳ ವಾಸಸ್ಥಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದಾಗಿ ಅನೇಕ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ನಿದರ್ಶನಗಳಿವೆ.
10 ಕಿ.ಮೀ.ಹೆಚ್ಚು ಪ್ರಯಾಣಿಸುವ ಪ್ರಯಾಣಿಕರು: ಈ ರಸ್ತೆ ಸರಿಯಿಲ್ಲದ ಕಾರಣದಿಂದಾಗಿ ರಾವಂದೂರಿನಿಂದ ಕೆ.ಆರ್.ನಗರಕ್ಕೆ ಚಲಿಸಲು ಕಿತ್ತೂರು ಮಾರ್ಗವಾಗಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣಿಕರಿಗೂ ಹೆಚ್ಚು ಬಸ್ ಪ್ರಯಾಣದ ಶುಲ್ಕವನ್ನು ಭರಿಸಬೇಕಾಗಿದೆ.
ಇದೀಗ ಇಲ್ಲಿಗೆ ಸಮೀಪದ ಕೆಲ್ಲೂರು ಗ್ರಾಮದಲ್ಲಿ ತಾಲೂಕಿನಲ್ಲಿಯೇ ಪ್ರಸಿದ್ಧಿಗೆ ಪಾತ್ರವಾಗಿರುವ ಶ್ರೀ ಗೌರಮ್ಮ ತಾಯಿ ರಥೋತ್ಸವ ಹಾಗೂ ಜಾತ್ರಾ ಪ್ರತಿ ವರ್ಷವೂ ವಿಜೃಂಭಣೆಯಿಂದ ನಡೆಯುತ್ತದೆ. ಈ ಬಾರಿಯೂ ಸಕಲ ಸಿದ್ಧತೆ ನಡೆಯುತ್ತಿದ್ದು ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಸಾವಿರಾರು ಭಕ್ತರು ಕೆಲ್ಲೂರಿಗೆ ಆಗಮಿಸುತ್ತಾರೆ. ಈ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಕ್ಷೇತ್ರದ ಶಾಸಕರಾಗಲೀ ಇತ್ತ ಗಮನಹರಿಸಿ ರಸ್ತೆಯನ್ನು ದುರಸ್ತಿಪಡಿಸಬೇಕಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಲು ಭರವಸೆ ನೀಡದೆ ಮೊದಲು ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ.
-ಕೆ.ಸಿ.ಮಂಜುನಾಥ್, ವಾಹನ ಸವಾರ
ರಾವಂದೂರು ಎಸ್.ಕೊಪ್ಪಲು ಮಾರ್ಗವಾಗಿ ನಾಗರಘಟ್ಟ-ಕೆಲ್ಲೂರು-ಹೊಸಕೋಟೆ-ಮಳಲಿ ಮಾರ್ಗವಾಗಿ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆ.ಆರ್.ನಗರ ತಾಲೂಕನ್ನು ಸಂಪರ್ಕಿಸಲು ಕಡಿಮೆ ಅಂತರದ ಮಾರ್ಗವಾಗಿದೆ. ಹಾಗೂ ಪ್ರಮುಖ ರಸ್ತೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದಾದರೂ ರಸ್ತೆ ದುರಸ್ತಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು.
-ದೇವರಾಜ್.ಕೆ.ಎಸ್, ಸಾರ್ವಜನಿಕ
* ರಾ.ಶ.ವೀರೇಶ್‌ಕುಮಾರ್