Advertisement

ಜನರಿಗೆ ಇವಿಎಂ ಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ : ಸಿದ್ದರಾಮಯ್ಯ

07:48 PM Mar 30, 2022 | Team Udayavani |

ಬೆಂಗಳೂರು : ಚುನಾವಣಾ ವ್ಯವಸ್ಥೆ ಬದಲಾಗಬೇಕಿದ್ದರೆ ಎಲೆಕ್ಟ್ರಾಲ್ ಬಾಂಡ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಚುನಾವಣಾ ಸುಧಾರಣೆ ಚರ್ಚೆಯಲ್ಲಿ ಭಾಗವಹಿಸಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, 2020 ರಲ್ಲಿ ಕಾರ್ಪೋರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ 3429 ಕೋಟಿ ರೂ. ಬಾಂಡ್ ನೀಡಿವೆ. ಈ ಪೈಕಿ ಶೇ.80 ರಷ್ಟು ಅಂದರೆ 2606 ಕೋಟಿ ರೂ. ಬಿಜೆಪಿಗೆ ನೀಡಲಾಗಿದೆ. ಕಾಂಗ್ರೆಸ್ ಗೆ ಶೇ.9 ರಷ್ಟು ಲಭಿಸಿದೆ. ಆದರೆ ರಾಜಕೀಯ ಪಕ್ಷ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಪರಸ್ಪರ ಕೈ ಮಿಲಾಯಿಸುವುದು ಪ್ರಜಾಪ್ರಭುತ್ವ ಕ್ಕೆ ಮಾರಕ ಎಂದು ಹೇಳಿದರು.

1971 ರಿಂದ ನಾನು ರಾಜಕೀಯದಲ್ಲಿ ಭಾಗವಹಿಸಲು ಆರಂಭಿಸಿದ್ದು. ಆ ಸಂದರ್ಭದಲ್ಲಿ ನಾನು ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ ಮತ್ತು ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿದ್ದೆ. ಆಗಿನ ಸಂಸತ್ ಚುನಾವಣೆಯಲ್ಲಿ ಹುಣಸೂರಿನ ಡಾ. ಹೆಚ್.ಎಲ್ ತಿಮ್ಮೇಗೌಡರ ಸಂಸ್ಥಾ ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ನಾನು ಆ ವೇಳೆಗೆ ಸಮಾಜವಾದಿ ಪಕ್ಷದ ಸದಸ್ಯನೂ ಆಗಿದ್ದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಇಲ್ಲದಿರುವುದರಿಂದ ಸಂಸ್ಥಾ ಕಾಂಗ್ರೆಸ್ ಅನ್ನು ಬೆಂಬಲಿಸಿ ಎಂದು ಪ್ರೋ. ನಂಜುಂಡಸ್ವಾಮಿ ಅವರು ನಮಗೆ ಹೇಳಿದ್ದರು. ಹಾಗಾಗಿ ನಾನು ನಮ್ಮೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರಕ್ಕೆ ಹೋಗಿದ್ದೆ. ಎಪ್ಪತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಒಬ್ಬರು, ಇಬ್ಬರು ಮುಖಂಡರು ಇರುತ್ತಿದ್ದರು. ನಾವು ಅವರ ಬಳಿ ಹೋಗಿ ಹಳ್ಳಿಯ ಜನರ ಮತ ನಮಗೆ ಹಾಕಿಸಿ ಎಂದು ಕೇಳುತ್ತಿದ್ದೆವು. ಆ ಮುಖಂಡ ನಮಗೆ ಒಂದು ಸಲ ಮಾತು ಕೊಟ್ಟರೆ ಅಥವಾ ವೀಳ್ಯದೆಲೆ ನೀಡಿದರೆ ಆಮೇಲೆ ಯಾರೇ ಬಂದು ಆಸೆ ಆಮಿಷ ಒಡ್ಡಿದರೂ ಅವರು ಬದಲಾಗ್ತಾ ಇರಲಿಲ್ಲ ಎಂದರು.
1972 ರ ಚುನಾವಣೆಯಲ್ಲಿ ರಾಜಶೇಖರ ಮೂರ್ತಿಯವರು ಸ್ಪರ್ಧೆ ಮಾಡಿದ್ದರು. ಆಗಲೂ ಪ್ರಚಾರ ಮಾಡಿದ್ದೆ. ಅಂದಿನ ಚುನಾವಣಾ ವ್ಯವಸ್ಥೆಗೂ ಇಂದಿನ ಚುನಾವಣಾ ವ್ಯವಸ್ಥೆಗೂ ಬಹಳಷ್ಟು ಬದಲಾಗಣೆ ಆಗಿದೆ.

1978 ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೆ. ನಾನು ಮತ್ತು ನನ್ನ ಸ್ನೇಹಿತ ವೈ. ಮಹೇಶ್ ಇಬ್ಬರು ಕರಪತ್ರವನ್ನು ಸಿದ್ಧಪಡಿಸಿಕೊಂಡು, ಒಂದೇ ಒಂದು ಸ್ಕೂಟರ್ ನಲ್ಲಿ ಊರೂರಿಗೆ ಹಂಚಿ ಬಂದಿದ್ದೆವು. ಆಗಿನ ಒಟ್ಟು ಖರ್ಚು 3,500 ರೂಪಾಯಿ.
1983 ರಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾಗ ಜಾರ್ಜ್ ಫರ್ನಾಂಡೀಸ್ ಅವರು 10,000 ರೂಪಾಯಿ ನನಗೆ ಕೊಟ್ಟಿದ್ದರು, ನಮ್ಮೂರ ಜನ 10,000 ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದರು. ಹಳ್ಳಿಗಳಿಗೆ ಪ್ರಚಾರಕ್ಕೆ ಹೋದಾಗ ಜನ ದುಡ್ಡು ಕೊಡೋರು. ಆ ಚುನಾವಣೆಯಲ್ಲಿ ಒಟ್ಟು ಖರ್ಚಾದ ಹಣ 63,000 ರೂಪಾಯಿ. ಮಾತ್ರವಾಗಿತ್ತು ಎಂದು ವಿವರಿಸಿದರು.

ಚುನಾವಣಾ ಆಯೋಗ 40 ಲಕ್ಷ ರೂಪಾಯಿ ವಿಧಾನಸಭೆ ಚುನಾವಣೆಗೆ,  95 ಲಕ್ಷ ರೂಪಾಯಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಬೇಕು ಎಂದು ನಿಗದಿ ಮಾಡಿದೆ. ಆದರೆ ಚುನಾವಣಾ ಆಯೋಗಕ್ಕೆ ನೀಡುವುದು ರಾಮನ ಲೆಕ್ಕ, ಇದನ್ನು ಬಿಟ್ಟು ಇನ್ನೊಂದು ಕೃಷ್ಣನ ಲೆಕ್ಕವೂ ಇರುತ್ತದೆ. ಇಂದಿನ ಚುನಾವಣಾ ವ್ಯವಸ್ಥೆ ಹಾಳಾಗಲು ನಮ್ಮ ಪಾಲು ಎಷ್ಟಿದೆಯೂ ಅಷ್ಟೇ ಪ್ರಜಾಪ್ರಭುತ್ವದ ಉಳಿದ ಅಂಗಗಳ ಪಾಲೂ ಇದೆ. ಸಮಾಜದ ಎಲ್ಲಾ ಶಿಕ್ಷಿತ, ವಿಚಾರವಂತ, ಪ್ರಗತಿಪರ, ಸಾಮಾಜಿಕ ಕಾಳಜಿ ಇರುವ ಜನರ ಜೊತೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement

ದೇಶದಲ್ಲಿ ಸುಮಾರು 19 ಲಕ್ಷ ಇವಿಎಂ ಗಳು ನಾಪತ್ತೆಯಾಗಿವೆ ಎಂಬ ವರದಿಯನ್ನು ಹೆಚ್.ಕೆ ಪಾಟೀಲರು ಓದಿ ಹೇಳಿದರು. ಇದಕ್ಕೆ ಹೊಣೆ ಯಾರು? ಇದೇ ಕಾರಣಕ್ಕೆ ಜನರಿಗೆ ಇವಿಎಂ ಗಳ ಮೇಲೆ ಭರವಸೆ ಕಡಿಮೆಯಾಗುತ್ತಿದೆ. ನನ್ನ ಬಳಿ ಒಬ್ಬ ತಂತ್ರಜ್ಞ ಬಂದು ಇವಿಎಂ ಗಳನ್ನು ಹೇಗೆ ದುರ್ಬಳಕೆ ಮಾಡಲು ಸಾಧ್ಯ ಎಂದು ಕಣ್ಣೆದುರೇ ಡೆಮೋ ತೋರಿಸಿದ. ತಂತ್ರಜ್ಞಾನದಲ್ಲಿ ನನಗೆ ಹೆಚ್ಚು ಮಾಹಿತಿ ಇಲ್ಲದಿರುವುದರಿಂದ ಸರಿ ಬಿಡಪ್ಪಾ ಅಂತ ಹೇಳಿ ಕಳುಹಿಸಿದೆ. ಆದರೆ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲು ಒಂದು ಅವಕಾಶ ಇದ್ದೇ ಇರುತ್ತದೆ ಎಂಬುದು ಸತ್ಯ. ಅದಕ್ಕೆ ಜರ್ಮನಿಯಂತಹ ಮುಂದುವರಿದ ರಾಷ್ಟ್ರ ಕೂಡ ಇವಿಎಂ ಬಿಟ್ಟು ಬ್ಯಾಲೆಟ್ ಪೇಪರ್ ಗೆ ಮರಳಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next