ಚಳ್ಳಕೆರೆ: ರಾಜ್ಯದಲ್ಲಿ ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಎಲ್ಲಾ ರಂಗದಲ್ಲೂ ಆಡಳಿತ ಪಕ್ಷ ಬಿಜೆಪಿ ವಿಫಲವಾಗಿದೆ. ಹಾಗಾಗಿ ಬಿಜೆಪಿಯ ಹಲವಾರು ಕಾರ್ಯಕರ್ತರು, ಮುಖಂಡರು ಬೇಷರತ್ತಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೂ ಸಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರ ಕಾರ್ಯವೈಖರಿ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ಪರಶುರಾಂಪುರದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಪಕ್ಷದ ಆಡಳಿತ ಇದ್ದಾಗ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿತ್ತು. ಆದರೆ ಇತ್ತೀಚೆಗೆ ಪ್ರತಿನಿತ್ಯ ಬೆಲೆ ಏರಿಕೆಯೇ ಪ್ರಧಾನ ವಿಷಯವಾಗಿಬಿಟ್ಟಿದೆ ಎಂದು ದೂರಿದರು.
ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ಶ್ರೀನಿವಾಸ್ ಮಾತನಾಡಿ, ಕಳೆದ 9 ವರ್ಷಗಳಿಂದ ಶಾಸಕ ಟಿ. ರಘುಮೂರ್ತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಎಲ್ಲಾ ವರ್ಗದ ಜನರ ಹಿತಕ್ಕೆ ದುಡಿದಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಅವರ ಗೆಲುವಿನ ಅಗತ್ಯವಿದೆ ಎಂದರು.
ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಾದ ಹನುಮಕ್ಕ, ರಂಗಮ್ಮ, ಹನುಮಂತರಾಯ, ನಾಗರಾಜು, ಬಿಜೆಪಿ ಮುಖಂಡರಾದ ರುದ್ರೇಶ್, ಪ್ರಕಾಶ್, ಸಿದ್ದೇಶ್, ಚಿಕ್ಕಣ್ಣ, ಪ್ರಹ್ಲಾದ್, ಈರಣ್ಣ, ಅಂಜನಮೂರ್ತಿ, ಹನುಮಂತಪ್ಪ, ವೀರೇಶ್, ಶರಣಪ್ಪ, ಬಿ. ರಾಮಾಂಜನೇಯ ಮೊದಲಾದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪರಶುರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಚನ್ನಕೇಶವ, ಚೌಳೂರು ಪ್ರಕಾಶ್, ನಿಜಲಿಂಗಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಿವಕುಮಾರಸ್ವಾಮಿ, ಪರಶುರಾಂಪುರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಾಬು, ದೊಡ್ಡರಂಗಪ್ಪ, ನಗರಸಭಾ ಸದಸ್ಯ ಬಿ.ಟಿ. ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ಆಡಳಿತ ಇದ್ದಾಗ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿತ್ತು. ಆದರೆ ಇತ್ತೀಚೆಗೆ ಪ್ರತಿನಿತ್ಯ ಬೆಲೆ ಏರಿಕೆಯೇ ಪ್ರಧಾನ ವಿಷಯವಾಗಿರುವುದು ದುರಂತ.
-ಟಿ. ರಘುಮೂರ್ತಿ, ಶಾಸಕರು