ಚಿಕ್ಕಮಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದು ಖುಷಿ ಕೊಟ್ಟಿದೆ. ಆದರೆ, ಶೋಭಾ ಕರಂದ್ಲಾಜೆ ಅವರೂ ಫ್ರೀ ಆ ಗಿ ಪ್ರಯಾಣ ಮಾಡಬಹುದು ಎಂದು ಕಾಂಗ್ರೆಸ್ ದುರಹಂಕಾರದ ಮಾತುಗಳನ್ನಾಡಿದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ. ನಾನೇನೂ ಹೇಳಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಜಾರಿಯಿಂದ ಹೆಣ್ಣುಮಕ್ಕಳು ರಾಜ್ಯದಲ್ಲಿ ಪ್ರವಾಸ ಮಾಡಬಹುದು. ಧಾರ್ಮಿಕ ಕ್ಷೇತ್ರಗಳು ಸೇರಿ ಬೇರೆ ಬೇರೆ ಕಡೆಗಳಿಗೆ ಹೋಗಿ ಬರಲು ಅನುಕೂಲವಾಗಿದೆ ಎಂದರು.
ರಾಜ್ಯ ಸರ್ಕಾರ ಶಾಲಾ ಪಠ್ಯ ಬದಲಾವಣೆಗೆ ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಠ್ಯಪುಸ್ತಕದಲ್ಲಿ ನಮ್ಮ ಮಕ್ಕಳು ಏನು ಕಲಿಯಬೇಕೆಂದು ನಾವೇ ನಿರ್ಧಾರ ಮಾಡಬೇಕು. ಮಕ್ಕಳ ಬೆಳವಣಿಗೆ, ಪ್ರಗತಿ, ಅಭ್ಯುದಯಕ್ಕೆ ಇತಿಹಾಸ ತಿಳಿದುಕೊಳ್ಳಬೇಕು. ಮಕ್ಕಳು ನಮ್ಮ ದೇಶ ತಿಳಿದುಕೊಳ್ಳಲು ಏನು ಕಲಿಯಬೇಕು. ಅದೇ ಆಧಾರದಲ್ಲಿ ಕಲಿಸಬೇಕು. ಪಠ್ಯಪುಸ್ತಕ ಎನ್ನುವುದು ಪಾರ್ಟಿ, ಜಾತಿ, ಧರ್ಮದ ವಿಚಾರವಲ್ಲ ಎಂದರು.
ನಾವು ಸಂವಿಧಾನಾತ್ಮಕವಾಗಿ ಏನನ್ನು ಒಪ್ಪಿಕೊಂಡಿದ್ದೇವೆ, ಅದನ್ನೇ ಮಕ್ಕಳು ಕಲಿಯುವಂತಹ ಅವಕಾಶವಾಗಬೇಕು. ಸರ್ಕಾರ ಬದಲಾದಂತೆ ಪಠ್ಯ ಬದಲಿಸುವುದು ಸರಿಯಲ್ಲ. ನಮ್ಮ ದೇಶಭಕ್ತರ, ನಮ್ಮ ಸ್ವಾತಂತ್ರÂ ಹೋರಾಟಗಾರರ, ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಕಲಿಸುವ ಅಗತ್ಯವಿದೆ. ಈ ದೃಷ್ಟಿಯಲ್ಲಿ ರಾಜ್ಯ ಸರ್ಕಾರ ಯೋಚನೆ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಪಠ್ಯ, ಬಿಜೆಪಿ ಪಠ್ಯ ಅನ್ನೋದಕ್ಕಿಂತ ನಮ್ಮ ಮಕ್ಕಳು ಏನನ್ನು ಕಲಿಯಬೇಕು. ಮುಂದಿನ ಪೀಳಿಗೆ ಏನಾಗಬೇಕು. ಇದರ ಆಧಾರದ ಮೇಲೆ ಪಠ್ಯ ನೀಡುವುದು ಒಳ್ಳೆಯದು ಎಂದು ಅಭಿಪ್ರಾಯಿಸಿದ ಅವರು, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಏನು ಮಾಡುತ್ತಾರೋ ನೋಡೋಣ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಬೇಕು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಬಂದಿದ್ದು, ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಿ ಕೇಂದ್ರ ಸರ್ಕಾರದ ಜೊತೆಗೆ ಹೆಜ್ಜೆ ಹಾಕುವ ವಿಶ್ವಾಸವಿದೆ ಎಂದು ತಿಳಿಸಿದರು.