Advertisement

ಅಂಚೆ ಕಚೇರಿ ಸಿಬ್ಬಂದಿ ವಿರುದ್ಧ ಪಿಂಚಣಿದಾರರ ಪ್ರತಿಭಟನೆ

03:28 PM Jun 20, 2018 | |

ಚಡಚಣ: ಸ್ಥಳೀಯ ಅಂಚೆ ಕಚೇರಿ ಸಿಬ್ಬಂದಿ ಪಿಂಚಣಿ ಹಣವನ್ನು ದುರುಪಯೋಗ ಮಾಡಿಕೊಂಡು ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಿಂಚಣಿದಾರರು ಅಂಚೆ ಕಚೇರಿ ಕೆಲಸ ಕಾರ್ಯಗಳಿಗೆ ಅಡಚಣೆ ಮಾಡಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದಲ್ಲಿ ಒಟ್ಟು 5 ಸಾವಿರ ಪಿಂಚಣಿದಾರರಿದ್ದು, ಇವರಲ್ಲಿ ವೃದ್ಧಾಪ್ಯ, ವಿಧವಾ, ಅಂಗವಿಕಲ ಸೇರಿದಂತೆ ಮತ್ತಿತರ ಪಿಂಚಣಿದಾರರಿಗೆ ಪ್ರತಿ ತಿಂಗಳು 500 ರೂ.ದಿಂದ 1,200 ರೂ. ರಂತೆ ಪಿಂಚಣಿ ಬರುತ್ತದೆ. ಆದರೆ ಪೋಸ್ಟ್‌ ಮಾಸ್ಟರ್‌ ಯು.ಬಿ. ಜಂಬಗಿ ಅವರು ಪಿಂಚಣಿ ಹಣವನ್ನು ಸರಿಯಾಗಿ ಪಿಂಚಣಿದಾರರಿಗೆ ತಲುಪಿಸದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

5 ತಿಂಗಳ ಪಿಂಚಣಿ ಹಣ ಜಮೆಯಾದರೆ 2 ತಿಂಗಳ ಹಣ ಮಾತ್ರ ಬಂದಿದೆ ಎಂದು ಸುಳ್ಳು ಹೇಳುತ್ತಾರೆ. ಜೊತೆಗೆ ಅನಕ್ಷರಸ್ಥ ಫಲಾನುಭವಿಗಳ ಪುಸ್ತಕದಲ್ಲಿ 5 ತಿಂಗಳು ದಾಖಲೆ ಮಾಡಿ 3 ತಿಂಗಳ ಪಿಂಚಣಿ ಹಣ ನೀಡದೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಒಟ್ಟು ಪಿಂಚಣಿ ಹಣದಲ್ಲಿ 100ಕ್ಕೆ 10ರೂ.ದಂತೆ ಕಡಿತಗೊಳಿಸಿ
ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಅವಧಿ ಮುಗಿದ ಡೆಪಾಸಿಟ್‌ ಹಣವನ್ನು ಮರಳಿಸದೇ ಗ್ರಾಹಕರಿಗೆ ಸತಾಯಿಸುತ್ತಿದ್ದು, ಸುಮಾರು 2 ವರ್ಷಗಳಿಂದ ಹೀಗೆಯೇ ಮೋಸ ಮಾಡುತ್ತ ಲಕ್ಷಾಂತರ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ.

ಕೂಡಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಪೋಸ್ಟ್‌ ಮಾಸ್ಟರ್‌ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಈ ಅಂಚೆ ಕಚೇರಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಿ ತಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಂಚೆ ಕಚೇರಿಯ ಎಲ್ಲ ಸಿಬ್ಬಂದಿಯನ್ನು ಹೊರಹಾಕಿದ್ದರಿಂದ ಕಚೇರಿಯ ಎಲ್ಲ ಕಾರ್ಯ ಸ್ಥಗಿತಗೊಂಡ ಪರಿಣಾಮ ಇನ್ನುಳಿದ ಗ್ರಾಹಕರಿಗೆ ತೊಂದರೆ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೋಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದರು.

Advertisement

ಪ್ರತಿಭಟನೆಯಲ್ಲಿ ಪ್ರಕಾಶ ಆಲಕುಂಟೆ, ಎಸ್‌.ಜಿ. ಕೊಟ್ಟಲಗಿ, ಅಬ್ದುಲ್‌ ನಜೀರ್‌, ಚಾಂದಸಾಬ ಅತ್ತಾರ, ಹುಸೇನಸಾಬ ಶೇಖ, ಮಾರುತಿ ತಳವಾರ, ಶಿವಯೋಗಿ ಅರಳಿ, ಕೇಶವ ಕುಲಕರ್ಣಿ, ಸಂಗಪ್ಪ ಸಿಂಪಿ, ಇಟಾಬಾಯಿ ವಾಘಮೋರೆ, ನೂರಜಾನ್‌ ನದಾಫ್‌, ದಾನಮ್ಮ ಗಿಡವೀರ ಸೇರಿದಂತೆ ಮತ್ತಿರರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next