ಬಾಗಲಕೋಟೆ : ಅವಿಭಜಿತ ಬಾದಾಮಿ ತಾಲೂಕಿನ 42 ಗ್ರಾಪಂಗಳಿಂದ ಹೆಸ್ಕಾಂಗೆ ಒಟ್ಟು 13.99 ಕೋಟಿ ವಿದ್ಯುತ್ ಬಾಕಿ ಇದೆ. ಅದರಲ್ಲೂ ಬೀದಿದೀಪಗಳಿಗಿಂತ ಕುಡಿಯುವ ನೀರು ಪೂರೈಕೆ ಯೋಜನೆಗಳಿಂದಲೇ ಅತಿ ಹೆಚ್ಚು ಬಾಕಿ ಇದೆ. ಹೀಗಾಗಿ ಈ ತಾಲೂಕಿನ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ನ.16ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನು ಹೆಸ್ಕಾಂ ನೀಡಿದೆ.
ಬಾದಾಮಿ, ಗುಳೇದಗುಡ್ಡ ತಾಲೂಕಿನ 27 ಗ್ರಾಪಂಗಳು ತಲಾ 10 ಲಕ್ಷ ರೂ.ಗೂ. ಅಧಿಕ ಬಾಕಿ ಉಳಿಸಿಕೊಂಡಿವೆ. ಈ 27 ಗ್ರಾಪಂಗಳ ವಿದ್ಯುತ್ ಸಂಪರ್ಕ ಮಾತ್ರ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆಯೇ ಹೆಚ್ಚು. ಅದರಲ್ಲೂ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಪಂ ಬರೋಬ್ಬರಿ 150.68 ಲಕ್ಷ ರೂ. ಬಾಕಿ ಉಳಿಸಿಕೊಂಡು ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಆಡಗಲ್ ಗ್ರಾಪಂ 16.22 ಲಕ್ಷ ಬಾಕಿ ಉಳಿಸಿಕೊಂಡಿದ್ದು, ತಲಾ 10 ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳಲ್ಲಿ ಕೊನೆಯ ಸ್ಥಾನದಲ್ಲಿದೆ.
ನಂದಿಕೇಶ್ವರ ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ಒಟ್ಟು 30 ಮೀಟರ್‌ಗಳಿದ್ದು, ಅದರಿಂದ ಸೆಪ್ಟಂಬರ್ ಅಂತ್ಯಕ್ಕೆ 115.41 ಲಕ್ಷ ಬಾಕಿ ಇದೆ. ಅಲ್ಲದೇ ಅತಿ ಹೆಚ್ಚು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ(30 ದಿನಗಳ ಬಳಿಕವೂ ಬಾಕಿ ಉಳಿಸಿಕೊಂಡರೆ ಹೆಸ್ಕಾಂನಿಂದ ಬಡ್ಡಿ ವಿಧಿಸಲಾಗುತ್ತದೆ)ಅಷ್ಟೂ ಮೊತ್ತಕ್ಕೆ ಬರೋಬ್ಬರಿ 10.59 ಲಕ್ಷ ಬಡ್ಡಿ ಆಗಿದೆ. ಇನ್ನು ಬೀದಿದೀಪ ವಿಭಾಗದಲ್ಲಿ 18 ಮೀಟರ್ ಗಳಿದ್ದು, ಅದರಿಂದ 17.61ಲಕ್ಷ ಬಾಕಿ ಬರಬೇಕಿದೆ. ಇದಕ್ಕೆ ಒಟ್ಟು 2.99 ಲಕ್ಷ ಬಡ್ಡಿ ಪಾವತಿಸಬೇಕಿದೆ.
ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿನ ಒಟ್ಟು 42 ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಕುಡಿಯುವ ನೀರು ಪೂರೈಕೆ, ಕಿರು ನೀರಾವರಿ ಯೋಜನೆಗೆ ಒಟ್ಟು 843 ಮೀಟರ್‌ಗಳಿದ್ದು, ಇದರಿಂದ 1058.44 ಲಕ್ಷ ಬಾಕಿ, 129.30 ಲಕ್ಷ ಬಡ್ಡಿ ಸೇರಿ ಒಟ್ಟು 13.99 ಕೋಟಿ ಹೆಸ್ಕಾಂಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಅಲ್ಲದೇ ಬೀದಿದೀಪಗಳ ವಿಭಾಗದಲ್ಲಿ 319 ಮೀಟರ್‌ಗಳಿದ್ದು, ಇದರಿಂದ 106.96 ಲಕ್ಷ , 41.63 ಲಕ್ಷ ಬಡ್ಡಿ ಸೇರಿದಂತೆ ಒಟ್ಟು 154.24 ಲಕ್ಷ ಬಾಕಿ ನೀಡಬೇಕಿದೆ.
ಬೇಕಾಬಿಟ್ಟಿ ಕೊಳವೆ ಬಾವಿಯೇ ಬಾಕಿಗೆ ಕಾರಣ : ಗ್ರಾಪಂ ಅಧಿಕಾರಿಗಳು ಹೇಳುವ ಪ್ರಕಾರ ಬೀದಿದೀಪಕ್ಕಾಗಿ ವ್ಯಯಿಸುವ ವಿದ್ಯುತ್ ಗಿಂತ ಕುಡಿಯುವ ನೀರಿಗಾಗಿ ತೋಡಿದ ಕೊಳವೆ ಬಾವಿಗಳು, ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಂದಲೇ ಹೆಚ್ಚು ವಿದ್ಯುತ್ ಹೊರೆಯಾಗುತ್ತಿದೆ. ಅದರಲ್ಲೂ ಶಾಸಕರು, ಸಚಿವರು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳು, ಗ್ರಾಮಗಳಲ್ಲಿ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆಯಿಸುತ್ತಾರೆ. ಅವು ನಿರಂತರವಾಗಿ ಚಾಲೂ ಇರುತ್ತವೆ. ಹೀಗಾಗಿ ವಿದ್ಯುತ್ ಹೊರೆ ಹೆಚ್ಚು ಎಂದು ಪಿಡಿಒವೊಬ್ಬರು “ಉದಯವಾಣಿ’ಗೆ ತಿಳಿಸಿದರು.
-ಶ್ರೀಶೈಲ ಕೆ. ಬಿರಾದಾರ