Advertisement

ನಿಯಮ ಪಾಲಿಸದ ಶಾಲಾ ವಾಹನಗಳಿಗೆ ದಂಡ

11:22 AM Jul 17, 2018 | Team Udayavani |

ಬೆಂಗಳೂರು: ಶಾಲಾ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಂಚಾರ ವಿಭಾಗದ ಪೊಲೀಸರು, ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸೂಚಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿದ 3 ಸಾವಿರಕ್ಕೂ ಅಧಿಕ ಶಾಲಾ ವಾಹನಗಳ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

Advertisement

ಶಾಲೆಗಳು ಆರಂಭವಾದ ಬಳಿಕ ಜೂನ್‌ ತಿಂಗಳಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರದ ಎಲ್ಲ ಶಾಲಾ ಆಡಳಿತ ಮಂಡಳಿ ಸದಸ್ಯರ ಜತೆ ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಕೆಲ ಶಾಲಾ, ಕಾಲೇಜುಗಳ ಮುಖ್ಯಸ್ಥರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಜತೆಗೆ ಶಾಲಾ ವಾಹನಗಳು ಹಾಗೂ ಸಿಬ್ಬಂದಿ ಕಾರ್ಯವೈಖರಿ ವಿರುದ್ಧ ಕೆಲ ಮಕ್ಕಳ ಪೋಷಕರು ಆಯಾವಲಯ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ನೇರವಾಗಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಹಾಗೂ ಸಂಜೆ 4 ಗಂಟೆ ಸುಮಾರಿಗೆ ಪೂರ್ವ ಮತ್ತು ಪಶ್ಚಿಮ ವಲಯದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 2,955(ಶಾಲಾ ವಾಹನ) ಹಾಗೂ 1,491 (ಸಂಚಾರ ನಿಯಮ ಉಲ್ಲಂ ಸಿದ ಇತರೆ ವಾಹನಗಳು) ಸೇರಿದಂತೆ ಒಟ್ಟು 4,446 ಪ್ರಕರಣಗಳನ್ನು ದಾಖಲಿಸಿದ್ದು, 5,54,600 ಲಕ್ಷ ರೂ. ದಂಡ ವಸೂಲಿ
ಮಾಡಿದ್ದಾರೆ.

ಮದ್ಯ ಸೇವಿಸಿ ವಾಹನ ಚಾಲನೆ, ವೇಗವಾಗಿ ಚಾಲನೆ, ದಾಖಲೆಗಳ ನಿರ್ವಹಣೆ ಇಲ್ಲದಿರುವುದು ಸೇರಿದಂತೆ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಕ್ರಮಕೈಗೊಂಡಿದ್ದು, ದಂಡ ವಿಧಿಸಲಾಗಿದೆ. ಹಾಗೆಯೇ ಆಯಾ ಶಾಲಾ ಆಡಳಿತ ಮಂಡಳಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ರೂಪಿಸಿರುವ ನಿಯಮಗಳೇನು?
ನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದ ಅಪ್ರಾಪ್ತೆ ಮೇಲಿನ ದೌರ್ಜನ್ಯದ ಬಳಿಕ ಶಿಕ್ಷಣ ಇಲಾಖೆ, ಶಾಲೆಗಳು ಮತ್ತು ಶಾಲಾ ವಾಹನಗಳ ನಿರ್ವಹಣೆ ಕುರಿತಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕೆಲ ಸ್ಪಷ್ಟ ಸೂಚನೆಗಳನ್ನು ನೀಡಿತ್ತು. ಶಾಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣದಲ್ಲಿರಬೇಕು. ಶಾಲಾ ವಾಹನ ಹಾಗೂ ಬಾಡಿಗೆ ಪಡೆದ ವಾಹನದ ಹಿಂದೆ ಮತ್ತು ಮುಂದೆ “ಸ್ಕೂಲ್‌ ಡ್ನೂಟಿ’ ಎಂದು ನಮೂದಿಸಬೇಕು. ಪ್ರಥಮ ಚಿಕಿತ್ಸೆ ಬಾಕ್ಸ್‌ ಇರಬೇಕು. 

Advertisement

ಗುಣಮಟ್ಟದ ಸ್ಪೀಡ್‌ ಗೌರ್ನರ್‌ ಅಳವಡಿಸಬೇಕು. ವಾಹನದ ಕಿಟಕಿಗಳಲ್ಲಿ ಸಮತಲ ಗ್ರಿಲ್‌ಗ‌ಳನ್ನು ಅಳವಡಿಸಬೇಕು. ಅಗ್ನಿ ಶಾಮಕ ವ್ಯವಸ್ಥೆ ಇರಬೇಕು. ಶಾಲೆಯ ಹೆಸರು, ದೂರವಾಣಿ ಸಂಖ್ಯೆ ನಮೂದಿಸಬೇಕು. ಚಾಲಕ ಹಾಗೂ ನಿರ್ವಾಹಕನ ಫೋಟೋ ಹಾಗೂ ವಿಳಾಸ ಹಾಕ ಬೇಕು. 

ವಾಹನದಲ್ಲಿ ಶಾಲೆಯ ಒಬ್ಬ ಅಡೆಂಟರ್‌ ಇರಬೇಕು. ಹಾಗೆಯೇ ಮಕ್ಕಳ ಪೋಷಕರು ವಾಹನ ಸುರಕ್ಷೆಯ ಬಗ್ಗೆ ವಾಹನದಲ್ಲಿ ಪ್ರಯಾಣಿಸಬಹುದು ಎಂಬ ನಿಯಮವನ್ನು ಜಾರಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next