ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿ ಯಲ್ಲಿ ಅನಧಿಕೃತವಾಗಿ ಕಸ ಎಸೆಯುವರ ವಿರುದ್ಧ ದಂಡ ಶುಲ್ಕ ಪ್ರಯೋಗಕ್ಕೆ ಪುರಸಭೆ ಮುಂದಾಗಿದ್ದು, ಈಗಾಗಲೇ ಅಳವಡಿಕೆಯಾದ ಸಿಸಿ ಕೆಮರಾಗಳಿಗೆ ಸಿಮ್ ಅಳವಡಿಸುವ ಜತೆಗೆ ತ್ಯಾಜ್ಯ ಎಸೆಯುವವರಿಂದ ಕನಿಷ್ಠ 1 ಸಾವಿರ ರೂ.ಗಳಿಂದ ಗರಿಷ್ಠ 10 ಸಾವಿರ ರೂ.ಗಳಷ್ಟು ದಂಡ ಶುಲ್ಕ ವಸೂಲಿಗೆ ಪುರಸಭೆ ತೀರ್ಮಾನಿಸಿದೆ.
ಬಂಟ್ವಾಳ ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಸೋಮವಾರ ಪುರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲಿನ ನಿರ್ಣಯ ಕೈಗೊಳ್ಳಲಾಯಿತು. ಕಸ ಎಸೆಯುವವರ ಪತ್ತೆಗೆ ಪುರಸಭಾ ವ್ಯಾಪ್ತಿಯಲ್ಲಿ ಸಿಸಿ ಕೆಮರಾ ಅಳವಡಿಸಿ ಹಲವು ತಿಂಗಳುಗಳೇ ಕಳೆದರೂ, ಅದು ಕಾರ್ಯಾಚರಿಸದ ಕುರಿತು ಸದಸ್ಯ ವಾಸು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಅದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.
ಬಳಿಕ ತ್ಯಾಜ್ಯ ಎಸೆಯುವವರ ದಂಡದ ಕುರಿತು ಸದಸ್ಯರ ಮಧ್ಯೆ ಸುದೀರ್ಘ ಚರ್ಚೆ ನಡೆದು, ದಂಡ ವಿಧಿಸುವ ಕುರಿತು ಹಲವು ಸಲಹೆಗಳನ್ನು ನೀಡಲಾಯಿತು. ಬಳಿಕ ಅಧ್ಯಕ್ಷರು ದಂಡದ ಕುರಿತು ವಿವರಣೆ ನೀಡಿ, ಕೈಯಲ್ಲಿ ತಂದು ಕಸ ಎಸೆಯುವವರಿಗೆ 1 ಸಾವಿರ ರೂ., ಸೈಕಲ್‌ನಲ್ಲಿ ಬಂದವರಿಗೆ 2 ಸಾವಿರ ರೂ, ದ್ವಿಚಕ್ರ ವಾಹನದವರಿಗೆ 3 ಸಾವಿರ ರೂ., ಆಟೋ ರಿಕ್ಷಾಕ್ಕೆ 5 ಸಾವಿರ ರೂ., ಕಾರು ಹಾಗೂ ಇತರ ವಾಹನಗಳಿಗೆ 10 ಸಾವಿರ ರೂ. ದಂಡ ವಿಧಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟು 27 ಕಡೆಗಳ ಸಿಸಿ ಕೆಮರಾಕ್ಕೆ 48 ಸಾವಿರ ರೂ. ವೆಚ್ಚದಲ್ಲಿ ಸಿಮ್ ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.
ಗೌರವ ಧನ ಹೆಚ್ಚಳಕ್ಕೆ ಆಗ್ರಹ
ಶಾಸಕರು, ಸಚಿವರ ವೇತನ ಹೆಚ್ಚಾಗಿದ್ದು, ಪುರಸಭಾ ಸದಸ್ಯರ ಗೌರವ ಧನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವ ಜತೆಗೆ ವಿಮೆ ಹಾಗೂ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆಯಬೇಕು ಎಂದು ಸದಸ್ಯ ವಾಸು ಪೂಜಾರಿ ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಪಕ್ಷದ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಈ ವೇಳೆ ಸದಸ್ಯ ಹರಿಪ್ರಸಾದ್ ಮಾತನಾಡಿ, ಗೌರವ ಧನ ಹೆಚ್ಚಳಕ್ಕಿಂತಲೂ ಅನುದಾನ ಹೆಚ್ಚಳ ಮಾಡಿದರೆ ಸದಸ್ಯರ ಗೌರವ ಹೆಚ್ಚಳವಾಗುತ್ತದೆ ಎಂದರು.
ಈ ವೇಳೆ ಸದಸ್ಯ ಲುಕ್ಮಾನ್ ಬಂಟ್ವಾಳ ಮಾತನಾಡಿ, ಗೌರವ ಧನ ಹೆಚ್ಚಳ ಮಾಡುವುದು ಅತೀ ಅಗತ್ಯವಾಗಿದ್ದು, ಸದಸ್ಯರಾ ಗಿರುವುದರಿಂದ ನಾವು ಯಾವುದೇ ಸೌಲಭ್ಯಗಳನ್ನೂ ಪಡೆಯಲು ಅರ್ಹರಾಗಿರುವುದಿಲ್ಲ ಎಂದರು. ಚುನಾವಣೆಗೆ ನಿಲ್ಲುವ ವೇಳೆಯೇ ಈ ಎಲ್ಲ ವಿಚಾರಗಳು ಗೊತ್ತಿರುತ್ತದೆಯಲ್ಲವೆ ಎಂದು ಸದಸ್ಯ ಹರಿಪ್ರಸಾದ್ ತಿರುಗೇಟು ನೀಡಿದರು. ಬಳಿಕ ವೇತನ ಹೆಚ್ಚಳದ ಕುರಿತು ಸರಕಾರಕ್ಕೆ ಬರೆಯಲು ತೀರ್ಮಾನಿಸಲಾಯಿತು.
ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಪೂರೈಕೆಗೆ ಪಂಪ್ ಆಪರೇಟರ್‌ಗಳ ನೇಮಕಕ್ಕೆ ಸದಸ್ಯರಾದ ಗಂಗಾಧರ ಪೂಜಾರಿ, ಮಹಮ್ಮದ್ ನಂದರಬೆಟ್ಟು ಆಗ್ರಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಹಾಗೂ ಸದಸ್ಯರು ಉಪಸ್ಥಿತರಿದ್ದರು.