Advertisement

ಲೇಖನಿ ತ್ಯಾಗ

07:19 PM Dec 14, 2019 | mahesh |

ಇತ್ತೀಚೆಗೆ ನಾನು ಬರೆಯುತ್ತಿರುವುದು ನಂಗೇ ಅರ್ಥ ಆಗ್ತಾ ಇಲ್ಲ. ಎಲ್ಲವೂ ವ್ಯರ್ಥ ಅನ್ನಿಸ್ತಾ ಇದೆ. ಇದೆಲ್ಲ ನಿಲ್ಲಿಸ್ಬೇಕು ಅಂತ ಇದ್ದೀನಿ. ನೀವೇನ್ಹೆಳ್ತೀರೀ?” ಎಂದು ಪೆನ್ನು ಕೆಳಗಿಡುವ ಫೋಟೋ ಒಂದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಹ್ಯಾಶ್‌ಟ್ಯಾಗ್‌ನಲ್ಲಿ “ಲೇಖನಿ ತ್ಯಾಗ’ ಎಂದು ಬರೆದು ಶೇರ್‌ ಬಟನ್‌ ಒತ್ತಿದೆ. ಫೇಸ್‌ಬುಕ್‌, “ಪಬ್ಲಿಕ್ಕಾ ಅಥವಾ ಓನ್ಲಿ ಫ್ರೆಂಡ್ಸ್ ?’ ಅಂತ ಕೇಳಿತು. “ಫೇಸ್‌ಬುಕ್‌ನಲ್ಲಿ ಹಾಕಿದ ಮೇಲೆ ಕೇಳ್ಳೋದೇನು ಬಂತು. ಎಲ್ಲವು ಪಬ್ಲಿಕ್ಕೇ’ ಎಂದು ನನ್ನಷ್ಟಕ್ಕೇ ಗೊಣಗುತ್ತಾ ಪಬ್ಲಿಕ್‌ ಅಂದೆ. ಫೋಟೋ ಪೋಸ್ಟ್‌ ಆಯಿತು. ಮೊಬೈಲನ್ನು ಆಚೆಯಿಟ್ಟು ನನ್ನ ಕೆಲಸದಲ್ಲಿ ಮುಳುಗಿದೆ.

Advertisement

ದಿಢೀರ್‌ ಅಂತ ನಾನು ಮಾಡಿದ “ಪೆನ್‌ ತ್ಯಾಗ’ದಿಂದ ಟಿ.ವಿ. ಪತ್ರಕರ್ತ ಆಶ್ಚರ್ಯಗೊಂಡು ನನ್ನ ಮನೆಗೇ ಬಂದು ಒಂದು ಸಂದರ್ಶನ ತೆಗೆದುಕೊಂಡ. ಅವರಿಗೂ ನಾನು ನನ್ನ ನಿರ್ಧಾರದ ಕಾರಣ ತಿಳಿಸಿದೆ.
“”ಬರವಣಿಗೆ ನನ್ನ ಹವ್ಯಾಸವೂ ಅಲ್ಲ, ಅಭ್ಯಾಸವೂ ಅಲ್ಲ, ವೃತ್ತಿಯಂತೂ ಅಲ್ಲವೇ ಅಲ್ಲ. ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ಅಜರ ಹಾಗೂ ಅಮರ ಆಗ್ಬೇಕೂ ಅನ್ನುವ ಯಾವ ಮಹತ್ವಾಕಾಂಕ್ಷೆಯೂ ನನ್ನಲ್ಲಿಲ್ಲ. ಮತ್ತೆ ಬರೆಯುವುದಾದರೂ ಏಕೆ ಎಂದು ನೀವು ಕೇಳಬಹುದು. ಇತ್ತೀಚೆಗೆ ನಾನು ಖರೀದಿಸಿದ ಹಲವು ಪುಸ್ತಕಗಳಲ್ಲಿನ ಬರಹಗಳು ಓದಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿದ್ದವು. ಆದರೂ ಅವುಗಳ ಬಗ್ಗೆ ಓದುಗರು, ಸಾಹಿತ್ಯ ಲೋಕದ ಅಭಿಮಾನಿಗಳು ಅತ್ಯಂತ ಭರವಸೆಯ ಮಾತಾಡಿದ್ದರು. ಎಲ್ಲಿ ನೋಡಿದರೂ ಪುಸ್ತಕ ಪ್ರಕಟಣೆಯ ವರದಿಗಳು ಪ್ರಕಟವಾದವು. ಆ ಪುಸ್ತಕಗಳ ಪ್ರಕಟಣೆ ಬಗ್ಗೆ ಮೆಚ್ಚುಗೆಯ ಅತಿವೃಷ್ಟಿಯೇ ಆಯಿತು. ಫೇಸ್‌ಬುಕ್‌ನಲ್ಲಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಸಾಲಾಗಿ ನಿಂತವರ ಫೋಟೋ, ಭಟ್ಟಂಗಿಗಳಿಂದ ಪರಾಕ್‌. ಥೂ. ಇವೆಲ್ಲ ಒಂಥರಾ ರೇಜಿಗೆ ಹುಟ್ಟಿಸಿಬಿಟ್ಟಿವೆ ಇವ್ರೆ”

“ಈ ರೀತಿಯ ಪುಸ್ತಕಗಳಿಂದ ಸಮಾಜಕ್ಕೆ ಏನೇನು ಉಪಕಾರ ಇಲ್ಲ ಅಂತೀರಾ?’
“ಖಂಡಿತ ಇಲ್ಲ. ಸುಮ್ಮನೆ ಕಾಗದ ವ್ಯರ್ಥ ಅಷ್ಟೆ’
“ಮತ್ತೆ ಕೆಲವು ಸಾಹಿತಿಗಳು ಬಡವರ, ದೀನರ, ದಲಿತರ ಕಣ್ಣೀರು ಒರೆಸೋದೇ ನಮ್ಮ ಸಾಹಿತ್ಯದ ಗುರಿ ಅಂತಾರೆ’
“ಕಣ್ಣೀರು ಒರೆಸಲು ಟಿಶ್ಯು ಪೇಪರ್‌ ಬದಲಿಗೆ ಪುಸ್ತಕದ ಹಾಳೆ ಬಳಸºಹುದಲ್ವಾ. ಅದಕ್ಕೆ ಹಾಗೆ ಅಂದಿದಾರೆ.’
“ಓ ಈ ನಿಟ್ಟಿನಲ್ಲಿ ನಾನು ಯೋಚಿಸಿಯೇ ಇರಲಿಲ್ಲ. ಇರ್ಲಿ ಬಿಡಿ. ಹಾಗಿದ್ರೆ ಸಾಹಿತಿಗಳಿಗೆ ಕೊಡುವ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಏನು ಹೇಳುತ್ತೀರಾ?’
“ಹೇಳ್ಳೋದೇನಿದೆ? ಬಡವರ ಕಣ್ಣೀರು ಒರೆಸೀ ಒರೆಸೀ ಸುಸ್ತಾದವರಿಗೆ ಕೊಂಚ ನಿರಾಳವಾಗಲು ಅವರನ್ನು ಕುರ್ಚಿಯಲ್ಲಿ ಕೂರಿಸಿ ಹೂವಿನ ಹಾರ ಹಾಕಿ ವಿಗ್ರಹವೊಂದನ್ನು ಕೈಯಲ್ಲಿ ಹಿಡಿಸಿ, ಹಣವನ್ನೂ ಹಣ್ಣನ್ನೂ ಮಡಿಲಲ್ಲಿ ಇಟ್ಟು, ತಲೆಗೆ ಟೊಪ್ಪಿಗೆ ಇಟ್ಟು, ಅರ್ಥಾತ್‌… ಬೇಡ ಬಿಡಿ, ಹೇಳಿದ್ರೆ ವಿಪರೀತ ಅನ್ಸ್‌ಬಹುದು. ಇಲ್ಲೆಲ್ಲ ತಮಟೆ ಒಂದು ಇಲ್ಲ ಅನ್ನೋದು ಬಿಟ್ರೆ…’
“ಯಾಕೋ ಇವತ್ತು ನಿಮ್ಮ ಮನಸ್ಸು ಸರಿಯಾಗಿಲ್ಲ ಅನ್ಸುತ್ತೆ. ಈ ವಿಷಯ ಇನ್ನೊಮ್ಮೆ ಮಾತಾಡೋಣ. ಹಾಗಿದ್ರೆ ಈ ಪೆನ್‌ ಸ್ಯಾಕ್ರಿಫೈಸು ನಿಮ್ಮ ಕೊನೆಯ ನಿರ್ಧಾರನಾ?’
“ಹೌದು’

“ಹಾಗಾದ್ರೆ ಇನ್ನು ನೀವು ಬರೆಯೋದೇ ಇಲ್ವಾ?’
“ಇಲ್ಲ. ಬರೆಯೋದೇ ಇಲ್ಲ ಅಂದ್ರೆ ಬರೆಯೋದೇ ಇಲ್ಲಾ’ ಎಂದೆ ಮ್ಲಾನವದನಳಾಗಿ.
ಸಂದರ್ಶನದ ಒಂದು ತುಣುಕು ಇದು. ಇದು ನಮ್ಮ ಲೋಕಲ್‌ ಚಾನಲ್‌ ಟಿ.ವಿ.ಟ್ವೆಂಟಿಯ ಮಹಿಳಾವಾಣಿಯಲ್ಲಿ ಬಿತ್ತರಗೊಂಡಿತು. ಟಿ.ವಿ.ಟ್ವೆಂಟಿಯ ನಿರ್ದೇಶಕಿ ಕೂಡಲೇ ಫೋನಾಯಿಸಿ, “”ನೋಡಿ ಮೇಡಂ, ನಮ್ಮನ್ನು ತುಳಿಯುವವರು ಎಷ್ಟೋ ಜನ ಇರಬಹುದು. ಆದರೆ ಅವರಿಗೆಲ್ಲ ಉತ್ತರ ಕೀಬೋರ್ಡ್‌ನ ಮೂಲಕ ಬರಬೇಕು. ಲೇಖನಿ ತ್ಯಾಗ ಮಾಡಿದ್ರೂ ಪರ್ವಾಗಿಲ್ಲ. ಕೀಬೋರ್ಡ್‌ ಮುಟ್ಟೋದೇಯಿಲ್ಲ ಅಂತ ಮಾತ್ರ ಪ್ರತಿಜ್ಞೆ ಮಾಡ್ಬೇಡಿ” ಅಂದಳು ದೊಡ್ಡ ದನಿಯಲ್ಲಿ.
“ನೀವು ಹೇಳಿದ್ದು ಅಷ್ಟೂ ನಿಜವೇ. ಈಗಿನ ಜಮಾನವೇ ಹಾಗಿದೆ.ಜಾತಿ, ಧರ್ಮ, ಪಂಥ, ವಶೀಲಿ, ಹಣ ಇವುಗಳ ಮಧ್ಯೆ ಸಾಹಿತ್ಯ ಕಳೆದುಹೋಗ್ತಿದೆ’ ಅಂತ ಒಂದಿಬ್ಬರು ಸಾಹಿತ್ಯಾಸಕ್ತರು ಮಸೇಜ್‌ ಮಾಡಿ ದುಃಖೀಸಿದ್ದರು.

ಕ.ಸಾ.ಪ. ಅಧ್ಯಕ್ಷರು ಫೋನಾಯಿಸಿ, “”ಮುಂದಿನ ಸಲದ ಕನ್ನಡೋತ್ಸವ ಪ್ರಶಸ್ತಿಗೆ ಈ ಸಲದ ಉಳಿಕೆ 2299ರ ಜೊತೆಗೆ ನಿಮ್ಮ ಹೆಸರು ಸೇರಿಸಿ ರೌಂಡ್‌ ಫಿಗರ್‌ 2300 ಮಾಡಿ ಮೇಲಕ್ಕೆ ಕಳಿಸ್ಬೇಕು ಅಂತಿದ್ದೆ ಮೇಡಂ. ಈಗ ನೀವೇ ಹೀಗಂದ್ರೆ ಇನ್ನು ಮುನ್ನೂರನೇ ಹೆಸರಿಗಾಗಿ ಪುನಃ ಮೀಟಿಂಗ್‌ ಕರೆದು, ಯಾರಾದರು ಗಣ್ಯರನ್ನು ಕರೆದು ಅವರ ಕೈಯಿಂದ ಲಾಟರಿ ಎತ್ತಿಸಿ, ಜಗಳಗಳಾಗದಂತೆ ಸೂಕ್ಷ್ಮವಾಗಿ ನಿಭಾಯಿಸಬೇಕು. ನಿಮ್ಗೆ ಗೊತ್ತೇ ಇದೆಯಲ್ಲ. ಸರಕಾರಿ ಕಾಮಗಾರಿಗೆ ಟೆಂಡರ್‌ ಕರೆದ ಹಾಗೆ ಮೂಲದಿಂದ ಶುರುಮಾಡ್ಬೇಕಾಗುತ್ತೆ. ಈ ಕಷ್ಟಗಳನ್ನೆಲ್ಲ ನಾನು ಯಾರಲ್ಲಿ ಹೇಳಿಕೊಳ್ಳಲಿ?” ಎಂದು ಹೇಳುವಷ್ಟರಲ್ಲಿ ಅವರ ಗಂಟಲು ಕಟ್ಟಿ ಸುರುಬುರು ಅಳಲು ಪ್ರಾರಂಭಿಸಿಯೇಬಿಟ್ಟರು.

Advertisement

ನಾನು ಪೆದ್ದುಪೆದ್ದಾಗಿ ಏನೋ ಒಂದು ಹೇಳಿ ಫೋನಿಟ್ಟು ಉಸಿರುಬಿಟ್ಟೆ. ಆಕಾಶವಾಣಿಯ ಪರಿಚಯಸ್ಥರೊಬ್ಬರು ಫೋನ್‌ ಮಾಡಿ, “”ನಮ್ಮ ಸಾಧಕ ಮಹಿಳೆಯರ ಕಾರ್ಯಕ್ರಮದ ಪಟ್ಟಿಯಲ್ಲಿ 106ನೇ ಸ್ಥಾನದಲ್ಲಿದೆ ಮೇಡಂ ನಿಮ್ಮ ಹೆಸರು. ನಿಮ್ಮ ಸರದಿ ಬರುವಷ್ಟರಲ್ಲಿ ನೀವು ಏನಾದರೂ ಸಾಧನೆ ಮಾಡಬಹುದು ಎಂಬ ಭರವಸೆಯಿಂದ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಿ¨ªೆವು. ನೀವು ನೋಡಿದ್ರೆ ಹೀಗೆ” ಎಂದು ಅಲವತ್ತುಕೊಂಡರು. “”ನಿಂಗೇನು ಹುಚ್ಚುಗಿಚ್ಚು ಹಿಡಿದಿದೆಯೇನೇ? ಯಾಕೆ ಈ ರೀತಿ ಫೋಟೋ ಎಲ್ಲ ಫೇಸ್‌ಬುಕ್‌ನಲ್ಲಿ ಹಾಕ್ತೀಯಾ?” ಅಂತ ಗಂಡನ ಬೈಗುಳವೂ ಇವೆಲ್ಲದರ ಜೊತೆ ಸೇರಿತು.

ನಾನು ಅಂಕಣ ಬರೆಯುತ್ತಿದ್ದ ವೆಬ್‌ ಪತ್ರಿಕೆಯ ಸಂಪಾದಕರು ಮೊಬೈಲಿಸಿ, “ನಮ್ಮ ಪತ್ರಿಕೆಗೆ ಬರೆಯುವುದನ್ನು ನಿಲ್ಲಿಸಿಬಿಡಬೇಡಿ ಮೇಡಂ. ಕಳೆದ ಸಾರಿ ನೀವು ಚಳಿಗಾಲದಲ್ಲಿ ಚರ್ಮದ ಆರೈಕೆ ಕುರಿತು ಬರೆದ ಲೇಖನಕ್ಕೂ, ಮಳೆಗಾಲದಲ್ಲಿ ಮುಖದ ಆರೈಕೆ ಕುರಿತು ಬರೆದ ಲೇಖನಕ್ಕೂ ಭಾರೀ ಉತ್ತಮ ಪ್ರತಿಕ್ರಿಯೆ ಬಂದಿದೆ. ಸೀರೆಯಲ್ಲಿ ನಾರಿ; ನಾರಿನಲ್ಲಿ ಸೀರೆ ಲೇಖನಕ್ಕಂತೂ ಸೀರೆ ಅಂಗಡಿಯವರೆಲ್ಲರೂ ಮೆಚ್ಚುಗೆ ಸೂಚಿಸಿದ್ದರು. ನಮಗೆ ಜಾಹೀರಾತು ನೀಡುವ ಭರವಸೆಯನ್ನೂ ಕೊಟ್ಟಿದ್ದರು. ಹಾಗಾಗಿ ದಯವಿಟ್ಟು…’ ಮಾತನಾಡುತ್ತ ಅವರು ನಕ್ಕರೋ ಅತ್ತರೋ ತಿಳಿಯಲಿಲ್ಲ.
ಪಕ್ಕದ ಮನೆ ಪಾರ್ವತಮ್ಮನವರು ಅವರ
ಮಹಿಳಾಮಂಡಲದ ಸ್ಮರಣ ಸಂಚಿಕೆಗೆ ಲೇಖನವೊಂದು ಬೇಕೆಂದು ತುಂಬಾ ಹಿಂದೆಯೇ ಕೇಳಿದ್ದರು. ನನ್ನ ಫೇಸ್‌ಬುಕ್‌ ಪೋಸ್ಟ್‌ ನೋಡಿದ ಅವರು ಎದ್ದೆನೋ ಬಿದ್ದೆನೋ ಅಂತ ಓಡಿ ಬಂದರು. “ನಮ್ಮ ಸಂಚಿಕೆಗೊಂದು ಲೇಖನ ಬರೆದು ಒಂದು ಕೊಟ್ಟು ಬಿಡು ಮಾರಾಯ್ತಿà. ಕಷ್ಟಪಟ್ಟು ಹನ್ನೊಂದು ಲೇಖಕಿಯರನ್ನು ಒಟ್ಟು ಮಾಡಿದ್ದೆ. ಅದರಲ್ಲಿ ಇಬ್ಬರು ತಮ್ಮ ಸೊಸೆಯಂದಿರ ಬಾಣಂತನಕ್ಕೆ ವಿದೇಶಕ್ಕೆ ಹೋದವರು ಕೈಗೆ ಸಿಕ್ತಾ ಇಲ್ಲ.

ಇನ್ನಿಬ್ಬರು ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿ ಅಂತ ಸೊಪ್ಪುಸದೆ ತಿಂದು ಸೊರಗಿ ಬರೆಯುವ ಸ್ಥಿತಿಯಲ್ಲಿಲ್ಲ. ಉಳಿದವರಲ್ಲಿ ಕೆಲವರು ಕಣ್ಣು ಕೈಕೊಡ್ತಾ ಇದೆ ಆಗಲ್ಲ. ಮಕ್ಕಳು ಮೊಮ್ಮಕ್ಕಳು ಬಂದಿ¨ªಾರೆ ಅವರು ರಜೆ ಮುಗಿಸಿ ಮರಳುವವರೆಗೆ ಸಾಧ್ಯವೇ ಇಲ್ಲ. ಬ್ಯಾಕ್‌ಪೈನ್‌ ಕೂತ್ಕೊಳಕಾಗಲ್ಲ. ಹೀಗೆ ದಿನಕ್ಕೊಂದು ಸಬೂಬು ಹೇಳ್ತಾ ಇದ್ದಾರೆ. ನಿನ್ನೊಬ್ಬಳನ್ನ ಪೂರ್ತಿ ನಂಬಿದ್ದೆ. ಈಗ ನೀನೂ ತ್ಯಾಗದ ದಾರಿಯಲ್ಲಿದ್ದೀಯಾ. ಇನ್ನು ಈ ಸಲದ ಸಂಚಿಕೆ ಆದ ಹಾಗೆ ಬಿಡು’ ಎಂದು ನಿಟ್ಟಿಸಿರುಬಿಡುತ್ತ ನನ್ನ ಉತ್ತರಕ್ಕೂ ಕಾಯದೆ ಹೊರಟುಹೋದರು. ಇತ್ತೀಚೆಗೆ ಒಂದು ಸಮಾರಂಭದಲ್ಲಿ ಪರಿಚಯವಾದ ಒಬ್ಬರು ಸಿನೆಮಾ ನಿರ್ದೇಶಕರು ನಿರ್ದೇಶನದ ಕಷ್ಟಗಳನ್ನು ಹೇಳುತ್ತ, “ಯಾಕೋ ನಮ್ಮ ನೆಲದ ನೇಟಿವಿಟಿಗೆ ಕನೆಕ್ಟ್ ಆಗುವಂಥ ಕಥೆಗಳೇ ಸಿಕ್ತಾ ಇಲ್ಲ. ನೀವು ಬರೀತೀರಿ ಅಂತ ಗೊತ್ತಾಯ್ತು. ಹಾಗಾಗಿ ನನ್ನದ್ದೊಂದು ಹಂಬಲ್‌ ರಿಕ್ವೆಸ್ಟ್‌. ಈ ನೆಲದ ಘಮಲಿರುವಂಥ ಒಂದು ಕಥೆ ಬೇಕು. ವಿದಿನ್‌ ವನ್‌ ಮಂತ್‌’ ಅಂತ ಇಂಗ್ಲಿಷ್‌ನಲ್ಲಿ ಕೇಳಿಕೊಂಡಿದ್ದರು. ನನ್ನ ಪೆನ್‌ ತ್ಯಾಗದ ವಿಷಯ ತಿಳಿಯುತ್ತಲೇ ಅವರು, “ನಿಮ್ಮನ್ನು ನಂಬಿ ನೇಟಿವಿಟಿ ಇರುವ ಸಿನೆಮಾ ಮಾಡುವ ಆಸೆಗೆ ಕಲ್ಲುಬಿದ್ದಿದೆ. ಇದರ ಬದಲು ಕ್ರಿಯೇಟಿವಿಟಿ ಇರುವ ಬೇರೆ ಹುಡುಗರನ್ನು ಬಳಸಿಕೊಂಡರೆ ಬೆಳೆಯುವ ಪಾಸಿಬಿಲಿಟಿಯಾದರೂ ಹೆಚ್ಚಾಗಬಹುದು’ ಅಂತ ವ್ಯಂಗ್ಯಭರಿತ ಕೋಪದಲ್ಲಿ ಒದರಿ ಫೋನು ಕತ್ತರಿಸಿದರು. ಕತ್ತರಿಸಿದರೋ ಅಥವಾ ಕುಕ್ಕಿದರೋ ತಿಳಿಯಲಿಲ್ಲ.

ಫೇಸ್‌ಬುಕ್‌ನಲ್ಲಿ ನಿರ್ಧಾರ ಪ್ರಕಟಿಸಿ “ನೀವೇನ್ಹೆàಳ್ತೀರಿ?’ ಅಂತ ಸ್ನೇಹಿತರಲ್ಲಿ ಕೇಳಿದ್ದೇ ತಪ್ಪಾಗಿ ಹೋಯಿತೇನೋ ಎಂದು ತಲೆಮೇಲೆ ಕೈಯಿಟ್ಟೆ.

ಇಷ್ಟು ಫೋನ್‌ ಬಂದ ಮೇಲೆ ಇನ್ನು ಫೇಸ್‌ಬುಕ್‌ನಲ್ಲಿ ಕಮೆಂಟುಗಳು ಏನೆಲ್ಲಾ ಬಂದಿವೆಯೋ ಎಂದು ಚಿಂತೆಯಾಯಿತು. ಮೊಬೈಲ್‌ ಡೇಟಾ ಆನ್‌ ಮಾಡುತ್ತಿದ್ದಂತೆಯೇ o|o|o|o|… ಎಂದು ನಿರಂತರ ನಿಮಿಷ ಬೆಲ್ಲು ಬಾರಿಸಿತು. ನೋಟಿಫಿಕೇಶನ್‌ ಗಂಟೆಯ ಮೇಲೆ 1,900 ಎಂದು ಬರೆದಿತ್ತು. ಹೆದರಿ ಹೌಹಾರಿ ಇದೇನಪ್ಪಾ ಎಂದು ಬಿಡಿಸಿ ನೋಡಿದೆ. ಈ ಮುಖಪುಸ್ತಿಕೆಯಲ್ಲಿ ನನಗಿರುವುದೇ ಎರಡು ಸಾವಿರ ಸ್ನೇಹಿತರು. ಅವರಲ್ಲಿ ಸಾವಿರದಷ್ಟು ಮಂದಿ ನನ್ನ ಶಿಷ್ಯೋತ್ತಮರೇ. ಹೀಗಿರುವಾಗ ಈಪಾಟಿ ನೋಟಿಫಿಕೇಶನ್‌ ಹೇಗೆ ಬಂತಪ್ಪಾ ಅಂತ ಆತಂಕದಿಂದಲೇ ಗಂಟೆಯ ಮೇಲೆ ಬೆರಳೊತ್ತಿದೆ.
1850 ಜನ ಲೈಕ್‌ ಕೊಟ್ಟಿದ್ದರು. ಕೆಲವರು ಸ್ಯಾಡ್‌, ಲವ್‌, ಆ್ಯಂಗ್ರೀ ಇತ್ಯಾದಿ ಪ್ರತಿಕ್ರಿಯೆ ಒತ್ತಿದ್ದರು. ಮತ್ತೆ ಕೆಲವೊಂದಿಷ್ಟು ಕಮೆಂಟ್‌ಗಳು. ನನ್ನ ಶಿಷ್ಯಕೋಟಿಯಲ್ಲಿ ಕೆಲವರು ಕಣ್ಣೀರು ಸುರಿಸಿದ್ದರು. ಕೆಲವರು ಪ್ರೀತಿ ಬೆರೆಸಿದ ಕೋಪದಲ್ಲಿ ಗದರುವಿಕೆಯ ಸಾಲು ಬರೆದಿದ್ದರು. “ನಾವೆಲ್ಲ ನಿಮ್ಮ ಜೊತೆ ಇದ್ದೇವೆ, ಬರವಣಿಗೆ ಮುಂದುವರೆಸಿ’ ಎಂದು ಇನ್ನೂ ಕೆಲವರ ಒತ್ತಾಸೆ.

“ಈ ಪೆನ್ನು ಕೆಳಗಿಟ್ಟರೇನು ಇನ್ನೊಂದು ಪೆನ್ನು ಎತ್ಕೊಳಿ ಮೇಡಂ, ನಿಮ್ಗೆ ಬೇಜಾರು ಮಾಡಿದವರ ಹೆಸರು ಹೇಳಿದರೆ ಅವ್ರು ಪೆನ್ನು ಕೆಳಗಿಳಿಸೋ ಹಾಗೆ ಮಾಡ್ತೇವೆ…’ ಎಂದು ಪೊರ್ಕಿ ಪಾಂಡು ಎಂದು ಎಫ್ಬಿಯಲ್ಲಿ ಅಭಿದಾನವಿಟ್ಟುಕೊಂಡಿದ್ದ ಶಿಷ್ಯನೊಬ್ಬ ಸಲಹೆ ಕೊಟ್ಟಿದ್ದ. ಇನ್ನೊಬ್ಬ ಶಿಷ್ಯ ಸ್ವಾಮಿ ವಿವೇಕಾನಂದರ ಏಳು ಎದ್ದೇಳು ಎಂಬ ವಾಕ್ಯವನ್ನು ಕೋಟ್‌ ಮಾಡಿ ಧೈರ್ಯ ತುಂಬಿದ್ದ. ಹೀಗೆ ನವರಸಭರಿತ ಪ್ರತಿಕ್ರಿಯೆಗಳಿಂದ ಪೆನ್ನು ತ್ಯಾಗದ ಫೋಟೋ ಧನ್ಯತೆಯನ್ನು ಅನುಭವಿಸುತ್ತಿತ್ತು.
ಹೀಗೆಲ್ಲ ಆಗಿ ನನ್ನ ಭಾವಚಿತ್ರವನ್ನು ನಾನೇ ಆಶ್ಚರ್ಯಚಕಿತಚಿತ್ತದಿಂದ ದಿಟ್ಟಿಸುತ್ತಾ ಕುಳಿತಿ¨ªಾಗ ಹಾಡಿತು.

“ಹಲೋ’
“ಐ ಯಾಮ್‌ ಮಾರ್ಕ್‌ ಜುಕರ್‌ಬರ್ಗ್‌ ಫ್ರಂ ಯುಎಸ್‌’ ದನಿ ಅಮೆರಿಕನ್‌ ಇಂಗ್ಲಿಷಿನ ರಾಗದಲ್ಲಿ ಉಲಿಯಿತು. ಗಡಬಡಿಸಿ ಎದ್ದು ನಿಂತು ಫೋನು ಜಾರದಂತೆ ಗಟ್ಟಿಯಾಗಿ ಕಿವಿಗಾನಿಸಿ ಹಿಡಿದುಕೊಂಡೆ.
“ಹ… ಹಲೋ ಸರ್‌’ ಎಂದೆ ಪೆಕರುಪೆಕರಾಗಿ.

“ಬೈ ದ ವೇ ಯೂ ಆರ್‌ ಸೆಲೆಕ್ಟೆಡ್‌ ಫಾರ್‌ ದ ಎಫ್ಬಿ ವುಮನ್‌ ಆಫ್ ದ ಇಯರ್‌ ಅವಾರ್ಡ್‌. ಐ ಕಂಗ್ರಾಚುಲೇಟ್‌ ಯೂ. ಯೂ ಹ್ಯಾವ್‌ ಗಾಟ್‌ 2000 ಲೈಕ್ಸ್‌ ವಿದಿನ್‌ ಟೆನ್‌ ಸೆಕೆಂಡ್ಸ್‌ ಟು ಯುವರ್‌ ರೀಸೆಂಟ್‌ ಪೋಸ್ಟ್‌. ದಿಸ್‌ ಈಸ್‌ ದ ಹೈಯೆಸ್ಟ್‌ ಇನ್‌ ದ ಹಿಸ್ಟರಿ ಆಫ್ ಎಫ್ಬಿ ಇನ್‌ ಸಚ್‌ ಅ ಶಾರ್ಟ್‌ ಡ್ನೂರೇಶನ್‌ ಆಫ್ ಟೈಮ್‌. ಯೂ ಹ್ಯಾವ್‌ ವನ್‌ 10000 ಡಾಲರ್. ಥ್ಯಾಂಕ್‌ ಯೂ ಫಾರ್‌ ಬೀಯಿಂಗ್‌ ವಿದ್‌ ಅಸ್‌’ ಎಂದು ಹೇಳಿದ್ದು ಕೇಳಿಸಿತು.

ನಾನು ಬೆವರಿ, ನಡುಗುತ್ತಾ ಇದ್ದೆ. ನಡುಗುವ ಕೈಗಳು ಮೊಬೈಲನ್ನು ಹಿಡಿದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಅದು ಬಿದ್ದು ಎರಡು ಹೋಳಾಯಿತು. ಹೋಳನ್ನು ಹೆಕ್ಕಿ ಜೋಡಿಸಲು ಬಗ್ಗಿದ ನಾನು ಮಂಚದಿಂದ ಕೆಳಗೆ ದೊಪ್ಪ್ ಎಂಬ ಶಬ್ದದೊಂದಿಗೆ ನೆಲಕ್ಕೆ ಬಿದ್ದೆ. ಬಿದ್ದ ರಭಸಕ್ಕೆ ತಲೆ ನೆಲಕ್ಕೆ ಬಡಿದು ಮಂಪರು ಕರಗಿ ಎಚ್ಚರವಾಯಿತು.

ಈ ಎಲ್ಲಾ ಅವಾಂತರಗಳಿಗೆ ಕಾರಣಕರ್ತನಾದ ಮೊಬೈಲಿನ ನೆನಪಾಗಿ ಅತ್ತ ದೃಷ್ಟಿ ಹರಿಸಿದೆ. ಅದು ನೆನ್ನೆ ರಾತ್ರಿ ಇರಿಸಿದ ಜಾಗದಲ್ಲೇ ತಣ್ಣಗೆ ಮಲಗಿತ್ತು.

ರೇಷ್ಮಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next