ಮುಂಬಯಿ, ನ. 14: ಭಗವಂತ ಎಲ್ಲಿಬೇಕೋ ಅಲ್ಲಿ ಅವತರಿಸಬಲ್ಲನು. ಇಂತಹ ಭಗವಂತ ಕೃಷ್ಣನಾಗಿ ಮಧುರೆಯಲ್ಲಿ ಅವತರಿಸಿ ಅಲ್ಲಿಯೂ ನಿಲ್ಲದೆ ಊರನ್ನು ತೊರೆದಿದ್ದ. ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಿದೆಯೋ ಅಲ್ಲಿ ನಾನಿರಲು ಯೋಗ್ಯನಲ್ಲ, ಗೋವಿನ ಮಹತ್ವವನ್ನು ಜಗತ್ತಿಗೆ ತೋರಿಸಬೇಕು ಎಂದು ಕಂಸನ ರಾಜ್ಯ ತೊರೆದಿದ್ದ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವ ಭವನದ ಶ್ರೀಕೃಷ್ಣನ ಸಾನ್ನಿಧ್ಯದಲ್ಲಿ ನ. 13ರಂದು ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಕಂಸನ ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿತ್ತು. ಯಾಕೆಂದರೆ ನಾವು ಅಸುರರು ಎಂದು ಆತನಿಗೆ ಅರಿವಿತ್ತು. ದೇವತೆಗಳು ನಮ್ಮ ವಿರೋಧಿಗಳು, ಅವರನ್ನು ಬಗ್ಗುಬಡಿಯಬೇಕು. ಆದರೆ ಅವರು ಸ್ವರ್ಗಲೋಕದಲ್ಲಿದ್ದು, ಅವರೊಂದಿಗೆ ಹೇಗೆ ಹೋರಾಟ ನಡೆಸುವುದು ಎಂಬ ಚಿಂತೆ ಕಂಸನನ್ನು ಕಾಡುತ್ತಿತ್ತು. ಆದ್ದರಿಂದ ಅವರಿಗೆ ಪೂರೈಕೆಯಾಗುವ ಆಹಾರವನ್ನೇ ನಿಲ್ಲಿಸಿದರೆ ಸರಿಯಾದ ಪಾಠ ಕಲಿಸಬಹುದು ಎಂದು ಕಂಸ ದೇವತೆಗಳ ಆಹಾರಕ್ಕೆ ತಡೆಯೊಡ್ಡಿದ್ದನು. ಗೋವಿನ ತುಪ್ಪ ದೇವತೆಗಳ ಆಹಾರವಾಗಿತ್ತು. ಅದನ್ನೇ ನಾಶ ಮಾಡಿದರೆ ದೇವತೆಗಳು ಆಹಾರವಿಲ್ಲದೆ ಕ್ಷೀಣಿಸುತ್ತಾರೆ. ಅದಕ್ಕಾಗಿ ಗೂವುಗಳನ್ನೆಲ್ಲ ಸಂಹಾರ ಮಾಡಿದ್ದ. ಎಲ್ಲಿ ಗೋವುಗಳ ಹಿಂಸೆ ನಡೆಯುತ್ತಿದೆಯೋ ಅಲ್ಲಿ ನಾನು ಇರುವುದಿಲ್ಲ ಅನ್ನುವುದನ್ನು ಜಗತ್ತಿಗೆ ತೋರಿಸಬೇಕು ಎಂದು ಕಂಸನ ರಾಜ್ಯ ಮಧುರಾ ನಗರವನ್ನು ಶ್ರೀಕೃಷ್ಣ ತೊರೆದಿದ್ದ. ನೇರವಾಗಿ ನಂದಾಗೋಕುಲಕ್ಕೆ ಬಂದ ಶ್ರೀಕೃಷ್ಣ ಆ ಮೂಲಕ ಜಗತ್ತಿಗೆ ಸಂದೇಶ ನೀಡಿದ ಎಂದು ತಿಳಿಸಿದರು.
ನಾವು ನಮ್ಮ ಮನೆಯಲ್ಲಿ ಭಗವಂತನು ಇರಬೇಕು ಅಂದುಕೊಂಡರೆ, ನಾವು ಗೋವುಗಳ ಪೋಷಣೆ ಮಾಡಬೇಕು. ಆಗ ಭಗವಂತ ನಮ್ಮ ಮನೆ-ಮನಗಳಲ್ಲೂ ಉಳಿಯುತ್ತಾನೆ. ಗೋವುಗಳ ಪೋಷಣೆ ನಡೆಯುವಲ್ಲಿ ನಾವು ಕೈಜೋಡಿಸಬೇಕು. ಉಡುಪಿ ಜಿಲ್ಲೆಯ ಬ್ರಹ್ಮಾವರ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು ನೀಲಾವರ ಇಲ್ಲಿ ಉಡುಪಿ ಪೇಜಾವರ ಮಠದ ಗೋಶಾಲೆ ಇದೆ. ಇದು ಶ್ರೀಕೃಷ್ಣೆ$çಕ್ಯ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೂರದೃಷ್ಟಿತ್ವದ ಯೋಜನೆಯಾಗಿದೆ. ಬೀದಿಯಲ್ಲಿರುವ ಮತ್ತು ವಯಸ್ಸಾದ ಹಸುಗಳಿಗೆ ಇದು ಆರೈಕೆಯ ತಾಣವಾಗಿದೆ. ಈ ಗೋಶಾಲೆಯಲ್ಲಿ ಸಾವಿರಾರು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಇಲ್ಲಿ ಸರೋವರ ನಾಮದ ಕೆರೆ ನಿರ್ಮಿಸಿ ಕೆರೆಯ ಮಧ್ಯದಲ್ಲಿ ಶ್ರೀಕೃಷ್ಣನ ದೇವಾಲಯವನ್ನು ನಿರ್ಮಿಸಲಾಗಿದೆ ಎಂದರು.
ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ ಮತ್ತು ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಪೂಜಾಧಿಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಬಿ. ಆರ್. ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಪೇಜಾವರ ಮಠದ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೆr, ಅದಮಾರು ಮಠ ಮುಂಬಯಿ ಶಾಖಾ ಪ್ರಬಂಧಕ ಪಡುಬಿದ್ರಿ ವಿ. ರಾಜೇಶ್ ರಾವ್, ಶ್ರೀನಿವಾಸ ಭಟ್ ಪರೇಲ್, ಪುರೋಹಿತರಾದ ಅರವಿಂದ ಬನ್ನಿಂತ್ತಾಯ, ವಿಷ್ಣುತೀರ್ಥ ಸಾಲಿ, ಪವನ್ ಭಟ್, ಆದಿತ್ಯ ಕಾರಂತ, ರಾಮಕೃಷ್ಣ ದಾಂಬ್ಳೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿ, ಪ್ರಭಾತ್ ಕಾಲನಿ ಸಾರ್ವಜನಿಕ ಗಣೇಶೋತ್ಸವ ಮಂಡಳದ ಅಧ್ಯಕ್ಷ ಶೇಖರ್ ಜೆ. ಸಾಲ್ಯಾನ್, ಸಮಾಜ ಸೇವಕರಾದ ವೈ. ಟಿ. ಶೆಟ್ಟಿ, ಜಗದಾಂಬಾ ಶೆಟ್ಟಿ, ಎಸ್. ಸೌಭಾಗ್ಯಾ, ದೀಪಕ್ ಗಟ್ಟಿ, ಚಂದ್ರಕಾಂತ್ ಚೌಧುರಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್