ಉಡುಪಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಟ್ವಿಟರ್ ಹೇಳಿಕೆಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಡುಪಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇದೊಂದು ಆಧಾರ ರಹಿತವಾದ ಆರೋಪವಾಗಿದ್ದು, ಶ್ರೀ ರಾಮ ಜನ್ಮಭೂಮಿಯ ನಿಧಿ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿದೆ. ದೇಶದ ಪ್ರತಿಯೊಂದು ರಾಮಭಕ್ತರ ಮನೆಯನ್ನು ಸಂಪರ್ಕಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಈ ಉದ್ದೇಶದಿಂದ ನಿಧಿ ಸಂಗ್ರಹದ ಸಮಯದಲ್ಲಿ ಭೇಟಿ ನೀಡಿದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದೇವೆ. ಜನರ ಆಸಕ್ತಿ ನಿರೀಕ್ಷೆಗಿಂತಲೂ ಹೆಚ್ಚಿದೆ. ಕಾರ್ಯಕರ್ತರು ಸಂಪರ್ಕಿಸದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದೇವೆ. ಇದು ನಿಧಿ ಸಮರ್ಪಣೆ ಮಾಡದವರನ್ನು ಗುರುತಿಸುವ ಪ್ರಕ್ರಿಯೆಯಲ್ಲ ಎಂದು ಸ್ಪಷ್ಟನೆ ನೀಡಿದರು.
ಯಾವ ಮನೆಗಳು ಬಿಟ್ಟುಹೋಗಿವೆ ಅದನ್ನು ಮರು ಸಂಪರ್ಕ ಮಾಡುವ ನಿಟ್ಟಿನಲ್ಲಿ ಈ ಕೆಲಸ ಸಾಗುತ್ತಿದ್ದು, ಇಂತಹ ಮಹತ್ಕಾರ್ಯದ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಜವಾಬ್ದಾರಿಯುತವಾಗಿ ಇರಬೇಕು ಎಂದು ತಿರುಗೇಟು ನೀಡಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಮ ಜನ್ಮಭೂಮಿಗೆ ದೇಣಿಗೆ ನೀಡಲು ನಿರಾಕರಿಸಿದ ವಿಚಾರವಾಗಿ, ಯಾರಿಗೂ ನಿಧಿ ಸಮರ್ಪಣೆ ಮಾಡುವಂತೆ ನಾವು ಒತ್ತಾಯಿಸುವುದಿಲ್ಲ. ಯಾರಿಗೆ ಇಷ್ಟವಿದೆ ಅವರು ನೀಡಬಹುದು. ಇಷ್ಟವಿಲ್ಲದವರು ನೀಡದೆ ಇರಬಹುದು ಎಂದರು.
ಇದನ್ನೂ ಓದಿ:ಟ್ರೋಲ್ ಗಳ ಕಥೆ-ವ್ಯಥೆ: ಮನರಂಜನೆ ಮಿತಿಮೀರಿದಾಗ… ಟ್ರೋಲಿಂಗ್ ಗೆ ಶಿಕ್ಷೆಯೇನು ?
ಇನ್ನು ರಾಮ ಜನ್ಮ ಭೂಮಿ ವಿವಾದಿತ ಪ್ರದೇಶ ಎನ್ನುವ ಅವರ ಅಭಿಪ್ರಾಯದ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯವೇ ಅಯೋಧ್ಯೆ ರಾಮನ ಜನ್ಮಭೂಮಿ ಎಂದು ಒಪ್ಪಿದೆ. ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅಗೌರವದಿಂದ ಕಾಣುವವರ ಬಗ್ಗೆ ಅವರ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.