Advertisement

ಯತಿಧರ್ಮದಲ್ಲಿದ್ದವರಿಗೆ ಮಾತ್ರ ಪೂಜೆ ಹಕ್ಕು: ಪೇಜಾವರ ಶ್ರೀ

03:35 AM Jul 05, 2018 | Karthik A |

ಉಡುಪಿ: ಯತಿಧರ್ಮದಲ್ಲಿದ್ದವರಿಗೆ ಮಾತ್ರ ಪೂಜೆಯ ಹಕ್ಕು ಇರುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ. ಬೆಂಗಳೂರಿನಲ್ಲಿರುವ ಅವರು ತಮ್ಮನ್ನು ಸಂಪರ್ಕಿಸಿದ ಪತ್ರಕರ್ತರ ಪ್ರಶ್ನೆಗೆ ಮೊದಲು ಉತ್ತರಿಸಲು ನಿರಾಕರಿಸಿದರು. ಆದರೆ ಮತ್ತೆ ಮತ್ತೆ ಪ್ರಶ್ನಿಸಿದಾಗ ‘ಪುತ್ತಿಗೆ ಮತ್ತು ಶೀರೂರು ಮಠಾಧೀಶರ ವಿಷಯಗಳಲ್ಲಿ ಬಹಳ ವ್ಯತ್ಯಾಸವಿದೆ. ಪುತ್ತಿಗೆ ಶ್ರೀಗಳದ್ದು ಕೇವಲ ವಿದೇಶ ಪ್ರಯಾಣ ಮಾತ್ರ ವಿಷಯ. ಅವರು ಯತಿಧರ್ಮದಲ್ಲಿಯೇ ಇದ್ದಾರೆ. ಶೀರೂರು ಸ್ವಾಮೀಜಿಯವರು ತಾವು ಯತಿಧರ್ಮದಲ್ಲಿಲ್ಲ ಎಂದು ಅವರೇ ಸ್ವತಃ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಪಟ್ಟದ ದೇವರನ್ನು ಕೊಡುವುದು ಹೇಗೆ ಸಾಧ್ಯ? ಆದ್ದರಿಂದ ಇತರ ಏಳು ಮಠಾಧೀಶರು ಸಭೆ ಸೇರಿ ಶೀರೂರು ಸ್ವಾಮಿಗಳು ನಿವೃತ್ತಿ ಪಡೆದುಕೊಳ್ಳುವುದೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಉತ್ತರಾಧಿಕಾರಿಯನ್ನು ಅವರೇ ಆಯ್ಕೆ ಮಾಡಬಹುದು ಎಂದರು. ಪುತ್ತಿಗೆ ಮಠಕ್ಕೆ ದ್ವಂದ್ವ ಮಠವಾದ ಕೃಷ್ಣಾಪುರ ಮಠದವರು ಶಿಷ್ಯರನ್ನು ನೇಮಿಸಬೇಕು, ಶೀರೂರು ಮಠಕ್ಕೆ ದ್ವಂದ್ವ ಮಠವಾದ ಸೋದೆ ಮಠದವರು ಶಿಷ್ಯರನ್ನು ನೇಮಿಸಬೇಕೆಂಬುದು ನಮ್ಮ ಎಲ್ಲ ಮಠಾಧೀಶರ ನಿಲುವು ಆಗಿದೆ ಎಂದು ನುಡಿದರು.

Advertisement

ಏತನ್ಮಧ್ಯೆ ಬುಧವಾರ ಶೀರೂರು ಶ್ರೀಗಳು ಪತ್ರಕರ್ತರಿಗೆ ಪ್ರತಿಕ್ರಿಯಿಸಲು ಲಭ್ಯವಾಗಿಲ್ಲವಾದರೂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ ಪೊಲೀಸರೇ ಅದನ್ನು ನಿರಾಕರಿಸಿದರು. ಇನ್ನೊಂದು ಮೂಲಗಳ ಪ್ರಕಾರ ಇತ್ತೀಚೆಗೆ ಶೀರೂರು ಸ್ವಾಮೀಜಿ  ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರೂ ಸಿವಿಲ್‌ ವಿಷಯವಾದ ಕಾರಣ ಕೋರ್ಟಿಗೆ ಹೋಗುವುದೇ ಉತ್ತಮವೆಂದು ಸಲಹೆ ನೀಡಿದರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next