Advertisement
ಗುರುವಾರ ನಗರದಲ್ಲಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು, ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಿಯೇ ಇದೆ. ಆ ಕಾರಣಕ್ಕಾಗಿಯೇ ಎಲ್ಲ ಜಾತಿ, ಧರ್ಮ, ಪಂಥ, ಪಂಗಡಗಳ ಜನರನ್ನು ಒಳಗೊಂಡಿದೆ. ಹೀಗಿದ್ದರೂ ಪಾಕಿಸ್ತಾನ, ಅಫಘಾನಿಸ್ಥಾನ ಮಾಡ ಹೊರಟಿದ್ದಾರೆ ಎಂಬುದು ಈ ಕುರಿತು ಅವರು ಸಿದ್ಧತೆ ನಡೆಸಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದರು.
Related Articles
Advertisement
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಅತಿ ಹೆಚ್ಚು ಸಮಯ ಅಧಿಕಾರದಲ್ಲಿದ್ದ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗದೆ ವಿರೋಧಿಸಿತು. ಇದೀಗ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಹೇಳಿಕೆ ವೈರುಧ್ಯದಿಂದ ಕೂಡಿದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ರಾಮ ರಾಜ್ಯ ಮಾಡದಿರುವ ಅಪವಾದವನ್ನು ಹೊರಲು ಸಿದ್ಧರಿದ್ದಾರೆಯೇ? ಲಾಭವಾದರೆ ನಮಗಿರಲಿ, ಲೋಪವಾದರೆ ಅವರಿಗೆ ಎನ್ನುವ ಮನಸ್ಥಿತಿ ಸರಿಯಲ್ಲ. ರಾಮನ ಹೆಸರಿನಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೆ ಹೇಳಿ ಎಂದರು.
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಕೋಟ್ಯಾಂತರ ಹಣ ಸಂಗ್ರಹಿಸಿ ಕೊಟ್ಟಿರುವ ತಮ್ಮನ್ನು ಆಹ್ವಾನಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಪಾದರು, ದೇಶದಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಿದವರನ್ನೂ ಆಹ್ವಾನಿಸಿಲ್ಲ. ವಿಶ್ವ ಹಿಂದೂ ಪರಿಷತ್ತು ಹಿರಿಯರನ್ನೂ ಆಹ್ವಾನಿಸಿಲ್ಲ. ಸ್ಥಳದ ಅಭಾವದಿಂದ ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನ ನೀಡಿಲ್ಲ. ಬದಲಾಗಿ ಪ್ರತಿನಿಧಿತ್ವದ ಮೂಲಕ ಲೋಕಾರ್ಪಣೆ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಮ ಲೋಕಾರ್ಪಣೆ ಮಾಡುತ್ತಿರುವುದು ಬಿಜೆಪಿ ರಾಜಕೀಯ ಲಾಭಕ್ಕಾಗಿ ಎಂಬ ಟೀಕೆ ಸರಿಯಲ್ಲ. ಇಂಥ ಹೇಳಿಕೆಗಳು ರಾಮ ಮಂದಿರ ಲೋಕಾರ್ಪಣೆ ತಡೆಯುವ ಹುನ್ನಾರವಷ್ಟೇ. ವಿಧಾನಸಭೆ, ಲೋಕಸಭೆ ಚುನಾವಣೆ ಐದು ವರ್ಷದ ಅವಧಿ. ಮಂದಿರ ಲೋಕಾರ್ಪಣೆ ಯಾವಾಗಲಾದರೂ ಆಗಲೇಬೇಕಿದ್ದು, ಈಗ ಆಗುತ್ತಿದೆ ಎಂದರು.
ತಪ್ಪಿಸ್ಥರನ್ನು ಶಿಕ್ಷಿಸಲು ನಮ್ಮ ವಿರೋಧವಿಲ್ಲ. ಆದರೆ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಕರಸೇವಕರ ಬಂಧನದ ಮೂಲಕ ಸರ್ಕಾರ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಸಮಯವಲ್ಲ ಎಂದರು.